Advertisement

Belagavi: ಕ್ರಾಂತಿಯ ನೆಲ ಕಿತ್ತೂರಿನಲ್ಲಿ 200ನೇ ವಿಜಯೋತ್ಸವಕ್ಕೆ ಅದ್ಧೂರಿ ಚಾಲನೆ

04:28 PM Oct 23, 2024 | Team Udayavani |

ಬೆಳಗಾವಿ(ಚ.ಕಿತ್ತೂರು): ಬ್ರಿಟಿಷರ ವಿರುದ್ಧ ಹೋರಾಡಿ ಥ್ಯಾಕ್ರೆಯ ರುಂಡ ಚೆಂಡಾಡಿದ ದಿನಕ್ಕೆ ಇಂದಿಗೆ ಬುಧವಾರ ಅ. 23 ರಂದು 200 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕ್ರಾಂತಿಯ ನೆಲ ಚೆನ್ನಮ್ಮನ ನಾಡು ಕಿತ್ತೂರಿನಲ್ಲಿ 200ನೇ ವಿಜಯೋತ್ಸವ ಸಂಭ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಕ್ರಾಂತಿಯ ನೆಲ ಕಿತ್ತೂರು ಕೋಟೆ ಆವರಣ ಸಂಭ್ರಮದಿಂದ ಕಳೆಗಟ್ಟಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ವಿಜಯೋತ್ಸವ ಸಂಭ್ರಮದ ಮೆರವಣಿಗೆಗೆ ಚಾಲನೆ ನೀಡಿದರು. ಕಿತ್ತೂರಿನ ಅಶ್ವಾರೂಢ ಚನ್ನಮ್ಮನ ಪ್ರತಿಮೆ ಬಳಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು. ಅಪಾರ ಜನಸ್ತೋಮದ ಮಧ್ಯೆ ವಿಜಯೋತ್ಸವಕ್ಕೆ ಚಾಲನೆ ಸಿಕ್ಕಿತು. ಮೆರವಣಿಗೆ ಕೋಟೆ ಆವರಣದವರೆಗೆ ಸಾಗಿದ್ದು, ಕಿತ್ತೂರು ಚನ್ನಮ್ಮಾಜಿ ಜೈ, ಹರ್ ಹರ್ ಮಹಾದೇವ, ಸಂಗೊಳ್ಳಿ ರಾಯಣ್ಣಗೆ ಜೈ ಎಂಬ ಘೋಷಣೆಗಳು ಮೊಳಗಿದವು.

ಕಿತ್ತೂರು ಉತ್ಸವದ ರಾಜ್ಯದಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಚನ್ನಮ್ಮನ ಕಿತ್ತೂರಿನ ಚನ್ನಮ್ಮನ ವೃತ್ತದಲ್ಲಿ ಬರಮಾಡಿಕೊಂಡು ಸಂಸ್ಥಾನದ‌ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲ ಗಣ್ಯರು ಪುಷ್ಪಾಲಂಕೃತ ಅಶ್ವಾರೂಢ ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಉತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಆಕರ್ಷಕ ಜಾನಪದ ಕಲಾವಾಹಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.

Advertisement

ಚನ್ನಮ್ಮನ ಕಿತ್ತೂರಿನ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಅಮಟೂರ ಬಾಳಪ್ಪ ಮತ್ತು ಶೂರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು.

ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್(ರಾಜು) ಸೇಠ್, ವಿಧಾನಪರಿಷತ್ ಸದಸ್ಯ ಚನ್ಮರಾಜ ಹಟ್ಟಿಹೊಳಿ, ರಾಜಗುರು ಸಂಸ್ಥಾನ‌ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ ಪಿ ಭೀಮಾಶಂಕರ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರು ಇದ್ದರು.

ಕಿತ್ತೂರು ವಿಜಯೋತ್ಸವ ಮೆರವಣಿಗೆಯಲ್ಲಿ ಆಕರ್ಷಿಸಿದ ಕಲಾತಂಡಗಳು

ಬೆಳಗಾವಿ (ಚ.ಕಿತ್ತೂರು): ಕ್ರಾಂತಿಯ ನೆಲ ಕಿತ್ತೂರಿನಲ್ಲಿ 200ನೇ ವರ್ಷದ ಐತಿಹಾಸಿಕ ವಿಜಯೋತ್ಸವ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಜನಾಕರ್ಷಿಸಿದವು. ಉತ್ಸವದಲ್ಲಿ ಕಂಡು ಬಂದ‌ ಜನಸಾಗರ ಕಿತ್ತೂರು ನಾಡಿನ ಇತಿಹಾಸವನ್ನು ನೆನಪಿಸಿತು.

ಅಪಾರ ಸಂಖ್ಯೆಯಲ್ಲಿ ಜನಸಾಗರ ಕಿತ್ತೂರಿನ ನಾಡಿಗೆ ಹರಿದು ಬಂದಿದ್ದು, ಎಲ್ಲಿ ನೋಡಿದರಲ್ಲಿ ಜನಸಾಗರವೇ ಕಂಡು ಬರುತ್ತಿದೆ. ಉತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಆಕರ್ಷಕ ಜಾನಪದ ಕಲಾವಾಹಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.

ಕಿತ್ತೂರು ಚನ್ನಮ್ಮ ವೃತ್ತದಿಂದ ಆರಂಭಗೊಂಡ ಜಾನಪದ ಕಲಾ ವಾಹಿನಿಯು ನಿಚ್ಚಣಿಕಿ ಮಠದ ಆವರಣದವರೆಗೆ ಸಂಚರಿಸಿತು.

ಚಿಟ್ಟಿಮೇಳ, ಮಹಿಳಾ ವೀರಗಾಸೆ, ಈಶ್ವರ ವೇಷ, ಗಾರುಡಿ ಗೊಂಬೆ, ಮೀನು ನೃತ್ಯ, ಮಹಿಳಾ ಡೊಳ್ಳು ಕುಣಿತ, ಚೆಂಡೆವಾದ್ಯ, ಕುದುರೆ ಕುಣಿತ, ಕಂಸಾಳೆ, ನಂದಿಧ್ವಜ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಕರಡಿಮಜಲು, ಕಂಸಾಳೆ, ಜಗ್ಗಲಗಿ ಸೇರಿದಂತೆ ವಿವಿಧ ಪ್ರಕಾರಗಳ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜನಮನ ಆಕರ್ಷಿಸಿದವು. ಅಲ್ಲದೇ ವಿವಿಧ ಇಲಾಖೆಗಳ ಸ್ತಬ್ಥಚಿತ್ರಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡು ಸರ್ಕಾರದಪ ವಿವಿಧ‌ ಯೋಜನೆಗಳು, ಸೇವಾಸೌಲಭ್ಯಗಳ ಕುರಿತು‌ ಜಾಗೃತಿ ಮೂಡಿಸಿದವು.

ನಂತರ ಫಲಪುಷ್ಪ ಪ್ರದರ್ಶನ ಮತ್ತು ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಾಯಿತು. ಕಿತ್ತೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next