Advertisement
ಆದರೆ 20 ವರ್ಷಗಳ ನಂತರ ಬೆಳಗಾವಿ ಕೋಟೆಯನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಕಾಂಗ್ರೆಸ್ ಕನಸು ಕಡೆಯ ಕ್ಷಣದಲ್ಲಿ ನುಚ್ಚುನೂರಾಗಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಕ್ಷೇತ್ರದಲ್ಲಿ ಬಹುಶಃ ಈ ರೀತಿಯ ಚುನಾವಣಾ ಫಲಿತಾಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅಂತಿಮ ಸುತ್ತಿನವರೆಗೆ ಜಯ ಯಾರದು ಎಂದು ಖಚಿತವಾಗಿ ಹೇಳದ ಸ್ಥಿತಿ ಇತ್ತು. ವಿಜಯಲಕ್ಷ್ಮಿಯ ಹೊಯ್ದಾಟ ಅಂತಿದಿತ್ತ ನಡೆದೇ ಇತ್ತು. ಆದರೆ ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳ ಸಹಾಯದಿಂದ 85 ಸುತ್ತುಗಳವರೆಗೆ ನಡೆದ ಸುದೀರ್ಘ ಮತ ಎಣಿಕೆಯಲ್ಲಿ ಮಂಗಲಾ ಅಂಗಡಿ ಅಂಚೆ ಮತಗಳು ಸೇರಿದಂತೆ ಒಟ್ಟು 5240 ಮತಗಳ ಅಂತರದಿಂದ ಜಯದ ನಗೆ ಬೀರಿದರು. ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳು ಬಿಜೆಪಿ ಮಾನ ಕಾಪಾಡಿದವು.
Related Articles
Advertisement
ಮಂಗಲಾ ಅಂಗಡಿ ಕೇವಲ ಗೋಕಾಕ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಬೆಂಬಲಿತ ಅಭ್ಯರ್ಥಿ ಶುಭಂ ಶೇಳಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದರು.
ಬದಲಾದ ಚಿತ್ರ: ಸತೀಶ ಜಾರಕಿಹೊಳಿ ಮುನ್ನಡೆ ಪಡೆದಿದ್ದರೂ ಅದು ಗೆಲುವಿಗೆ ಸಾಕಾಗಲಿಲ್ಲ. 79ನೇ ಸುತ್ತಿನ ಮತಗಳ ಎಣಿಕೆ ನಂತರ ಫಲಿತಾಂಶದ ಚಿತ್ರವೇ ಬದಲಾಯಿತು. ಸತೀಶ ಜಾರಕಿಹೊಳಿ ಅವರ ಮುನ್ನಡೆ 2000ದಿಂದ ಒಮ್ಮೆಲೇ 400ಕ್ಕೆ ಇಳಿಯಿತು. ಇಲ್ಲಿಂದ ಅವರ ಸೋಲಿನ ಸುಳಿವು ಸ್ಪಷ್ಟವಾಯಿತು. ಆನಂತರ ನಡೆದಿದ್ದು ಸಂಪೂರ್ಣ ಮಂಗಲಾ ಅಂಗಡಿ ಅವರ ಆಟ. ಕೊನೆಯ ಆರು ಸುತ್ತುಗಳಲ್ಲಿ ಎಲ್ಲ ಅಡೆತಡೆಗಳನ್ನು ದಾಟಿದ ಮಂಗಲಾ ಅಂಗಡಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾದರು. ಅಷ್ಟೇ ಅಲ್ಲ ತಮ್ಮ ಸೋಲಿನ ಆತಂಕವನ್ನು ಗೆಲುವಿನ ನಗೆಯಲ್ಲಿ ಬದಲಾಯಿಸಿಕೊಂಡರು.
ಮಂಗಲಾ ಅಂಗಡಿ ಅವರ ಜಯದಲ್ಲಿ ಹೆಚ್ಚು ನೆರವು ನೀಡಿದ್ದು ಗೋಕಾಕ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತದಾರರು. ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲ ತಮ್ಮ ಪಕ್ಷ ನಿಷ್ಠೆಯನ್ನು ಮುಂದುವರಿಸಿದರೆ, ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಅನುಪಸ್ಥಿತಿಯಲ್ಲೂ ಕ್ಷೇತ್ರದ ಜನರು ತಮ್ಮ ಮನೆ ಮಗಳು ಮಂಗಲಾ ಅಂಗಡಿ ಪರವಾಗಿ ನಿಂತು ಹೆಚ್ಚು ಮುನ್ನಡೆ ದೊರಕಿಸಿಕೊಟ್ಟರು. ಗೋಕಾಕದಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಬಿಜೆಪಿಗೆ ಸಿಕ್ಕಿತು. ಅದೇ ರೀತಿ ಬೆಳಗಾವಿ ದಕ್ಷಿಣದಲ್ಲಿ ಸಹ 20 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಸಿಕ್ಕಿದ್ದು ಮಂಗಲಾ ಅವರ ಗೆಲುವಿಗೆ ಕಾರಣವಾಯಿತು.