Advertisement

ಆಧ್ಯಾತ್ಮಿಕ ಪರಿಚಾರಕರಾಗಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳು

01:21 PM May 23, 2017 | |

ದಾವಣಗೆರೆ: ಅತ್ಯುತ್ತಮ ಶಿಕ್ಷಕ, ಮಹಾನ್‌ ಸಮಾಜ ಸೇವಕ, ಮಾನವೀಯತೆಯ ಆಧ್ಯಾತ್ಮಿಕ ಪರಿಚಾರಕರಾಗಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಫಾದರ್‌ ತೆರೆಸಾ ಎಂದು ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಬಣ್ಣಿಸಿದ್ದಾರೆ. 

Advertisement

ಸೋಮವಾರ ಚಿಂದೋಡಿ ಕಲಾಕ್ಷೇತ್ರದಲ್ಲಿ ನಡೆದ ಬೆಳಗೆರೆ ಕೃಷ್ಣಶಾಸ್ತ್ರಿಗಳ ಜನ್ಮ ಶತಮಾನೋತ್ಸವ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಮಗ್ರ ಸಾಹಿತ್ಯ ಹಾಗೂ ಬೆಳಗೆರೆ ಕೃಷ್ಣಶಾಸ್ತ್ರಿಗಳ ತಾತ್ವಿಕ ವಿಶ್ಲೇಷಣೆ… ಪುಸ್ತಕಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓರ್ವ ಶಿಕ್ಷಕ, ಸಮಾಜ ಸೇವಕ, ಆಧ್ಯಾತ್ಮಿಕ ಪರಿಚಾರಕರಾಗಿದ್ದರು.

ಅವರು ಮಧ್ಯ ಕರ್ನಾಟಕದಲ್ಲಿ ನಡೆದಾಡಿದ ಮಹಾನ್‌ ಸಂತರು ಎಂದರು. ಬೆಳಗೆರೆ ಕೃಷ್ಣಶಾಸ್ತ್ರಿಗಳು ನುಡಿದಂತೆ ನಡೆದವರು. ನಡೆ-ನುಡಿಯನ್ನೇ ಸಾಹಿತ್ಯ ರೂಪದಲ್ಲಿ ಬರೆದವರು. ಸ್ವಾತಂತ್ರ ಪೂರ್ವ ಮತ್ತು ನಂತರದಲ್ಲಿ ಚಳ್ಳಕೆರೆ ತಾಲೂಕಿನ ಬೆಳಗೆರೆಯನ್ನೇ ಕರ್ಮಭೂಮಿ, ಕಾರ್ಯ ಕ್ಷೇತ್ರವನ್ನಾಗಿಸಿಕೊಂಡ ಶ್ರೀ  ಶಾರದಾ ವಿದ್ಯಾಮಂದಿರ ಪ್ರಾರಂಭಿಸಿ, ಹಳ್ಳಿಗಾಡಿನ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದವರು.

ಶಿಕ್ಷಣದ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ ಕಾರಣಕ್ಕೆ 1960-70 ರ ದಶಕದಲ್ಲಿಯೇ ರಾಷ್ಟ್ರ ಪ್ರಶಸ್ತಿಗೆ ಭಾಜನರಾದವರು ಎಂದು ತಿಳಿಸಿದರು. ಬೆಳಗೆರೆಯಂತಹ ಕುಗ್ರಾಮದಲ್ಲಿ ಶಿಕ್ಷಕರಾಗಿ ನಿಷ್ಕಾಮ ಸೇವೆ ಸಲ್ಲಿಸಿದ ಕೃಷ್ಣಶಾಸ್ತ್ರಿಗಳ ಜೀವನವನ್ನು ಶಿಕ್ಷಕ, ಸಮಾಜ ಸೇವಕ ಮತ್ತು ಆಧ್ಯಾತ್ಮಿಕ ಪರಿಚಾರಕ ಎಂಬ ಮೂರು ಆಯಾಮದಲ್ಲಿ ನೋಡಬೇಕಾಗುತ್ತದೆ.

ಗ್ರಾಮಗಳ ಅಭಿವೃದ್ಧಿ ಆಯಾಯ ಗ್ರಾಮಸ್ಥರಿಂದಲೇ ಆಗಬೇಕು ಎಂಬ ಮಹಾತ್ಮಗಾಂಧಿಯವರ ಮಾತಿಗೆ ಬದ್ಧವಾಗಿ ಸಮಾಜ ಸೇವೆಯಲ್ಲೂ ತೊಡಗಿಕೊಂಡವರು. ಕೊನೆ ಕಾಲದಲ್ಲಿ ಹಲವಾರು ಸಮಸ್ಯೆಗಳ ಬಗೆಹರಿಸುವ ಆಧ್ಯಾತ್ಮಿಕ ಪರಿಚಾರಕರಾಗಿದ್ದರು ಎಂದು ತಿಳಿಸಿದರು. 

Advertisement

ಚಳ್ಳಕೆರೆ ತಾಲೂಕು ಒಳಗೊಂಡಂತೆ ಅನೇಕ ಭಾಗದಲ್ಲಿ ಗಾಢವಾದ ಪ್ರಭಾವ ಹೊಂದಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೆ ಅಲ್ಲಿನ ಜನರು ಅಪಾರ ಗೌರವ ನೀಡುತ್ತಿದ್ದರು. ಸುಳ್ಳು ಹೇಳುವುದಕ್ಕೂ ಅಂಜುತ್ತಿದ್ದರು. ಮಾಡಿದ್ದಂತಹ ತಪ್ಪನ್ನು ಅವರ ಮುಂದೆ ಹೇಳಿಕೊಂಡು ತಪ್ಪು ಮಾಡದೆ ನಡೆದುಕೊಳ್ಳುವ ಪ್ರತಿಜ್ಞೆ ಮಾಡಿ, ಅದರಂತೆ ನಡೆದುಕೊಳ್ಳುತ್ತಿದ್ದರು.

ಅಂತಹ ಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು. ಬೆಳಗೆರೆ ಕೃಷ್ಣಶಾಸ್ತ್ರಿಗಳು ಸದಾ ಶುಭ್ರ ಶ್ವೇತ ವಸ್ತ್ರಧಾರಿಯಾಗಿರುತ್ತಿದ್ದರು. ಸಾತ್ವಿಕತೆ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವ ಬಿಳಿಯ ಬಣ್ಣದಂತೆ ಅವರು ಜೀವನ ಸಾಗಿಸಿದರು. ಯಾರ ಮನೆಗೆ ಆಗಲಿ ಅವರೇ ಹೋಗುತ್ತಿದ್ದರು. ದೊಡ್ಡವರು, ಚಿಕ್ಕವರು ಯಾರೇ ಇರಲಿ ಅವರಾಗಿಯೇ ನಮಸ್ಕರಿಸುತ್ತಿದ್ದರು.

ಅಂತಹ ಮುಗ್ಧ ಮನಸ್ಸು ಅವರದಾಗಿತ್ತು. ಕನ್ನಡದ ವರಕವಿ ಬೇಂದ್ರೆ, ಕನ್ನಡದ ಆಸ್ತಿ ಮಾಸ್ತಿ, ಡಿ.ವಿ. ಗುಂಡಪ್ಪರಂತಹ ಮಹಾನ್‌ ದಿಗ್ಗಜರೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುವಷ್ಟು ಸಲುಗೆ ಹೊಂದಿದ್ದರು. ಅವರೊಬ್ಬ ನಡೆದಾಡುವ ಜಂಗಮರಾಗಿದ್ದರು ಎಂದು ತಿಳಿಸಿದರು. 

ಬೆಳಗೆರೆ ಕೃಷ್ಣಶಾಸ್ತ್ರಿಗಳು ಹಳ್ಳಿ ಮೇಷ್ಟು, ಹಳ್ಳಿ ಚಿತ್ರ… ಒಳಗೊಂಡಂತೆ ಕೆಲವಾರು ನಾಟಕ ಬರೆದಿದ್ದಲ್ಲದೆ ತಾವು ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದರು. ಹಿರಿಯೂರಿನಲ್ಲಿ ನಾಟಕದ ಪ್ರದರ್ಶನದ ಮೂಲಕ ಇಡೀ ಜನರ ಮನಗೆದಿದ್ದರು.

ಅವರಂತಹ ಒಳ್ಳೆಯ ವ್ಯಕ್ತಿಗಳ ಬಗ್ಗೆ ಸ್ಮರಣೆ ಮಾಡುವುದರಿಂದ ನಾವೂ ಸಹ ಒಂದಿಷ್ಟು ಒಳ್ಳೆಯ ಅಂಶ ಕಲಿಯಲಿಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ವರ್ತಕ ಆರ್‌.ಆರ್‌. ರಮೇಶ್‌ಬಾಬು ಮಾತನಾಡಿ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಮಾತನಾಡುವುದು ಇಡೀ ಆಕಾಶವನ್ನು ಕನ್ನಡಿಯಲ್ಲಿ ನೋಡುವ ಪ್ರಯತ್ನದಂತಾಗುತ್ತದೆ. 

ಅಪರೂಪದ ಸರಳ ವ್ಯಕ್ತಿತ್ವದ ಬೆಳಗೆರೆ ಕೃಷ್ಣಶಾಸ್ತ್ರಿಗಳು ನುಡಿದಂತೆ ನಡೆಯುತ್ತಿದ್ದರು. ಅತ್ಯಂತ ಅಪರೂಪದ ಶಿಕ್ಷಕ, ಸಮಾಜ ಸೇವಕರಾಗಿದ್ದವರು ಜಾತಿ ನೋಡಿದವರಲ್ಲ ಎಂದು ಸ್ಮರಿಸಿದರು. ಶ್ರೀಪಾದ ಪೂಜಾರ್‌ರವರ ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಮಗ್ರ ಸಾಹಿತ್ಯ ಹಾಗೂ ಬೆಳಗೆರೆ ಕೃಷ್ಣಶಾಸ್ತ್ರಿಗಳ ತಾತ್ವಿಕ ವಿಶ್ಲೇಷಣೆ… ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು.

ನಾಗರತ್ನ ಜಗದೀಶ್‌ ಕಾರ್ಯಕ್ರಮ ನಿರೂಪಿಸಿದರು. ನೀವು- ನಾವು ತಂಡದವರು ಬೆಳಗೆರೆ ಕೃಷ್ಣಶಾಸ್ತ್ರಿಯವರ ಹಳ್ಳಿ ಮೇಷ್ಟು,…ನಾಟಕ ಪ್ರದರ್ಶಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next