Advertisement

ಸ್ಮಶಾನ ಒತ್ತುವರಿ; ಶವ ಸಂಸ್ಕಾರಕ್ಕೆ ವರಿ!

12:23 PM Jan 05, 2020 | Naveen |

ಬಳಗಾನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಸಮುದಾಯದವರಿಗೆ ಸೇರಿದ 8 ಸ್ಮಶಾನಗಳಿವೆ. ಕೆಲ ಸ್ಮಶಾನಗಳು ಒತ್ತುವರಿಯಾಗಿದ್ದು, ಜಾಗೆ ಕೊರತೆಯಿಂದಾಗಿ ಶವ ಸಂಸ್ಕಾರ ಮಾಡುವುದೇ ಸಮಸ್ಯೆ ಆಗಿದೆ. ಪಟ್ಟಣದಲ್ಲಿ ಮೂಲಭೂತ ಸಮಸ್ಯೆಗಳ ಜತೆ ಸ್ಮಶಾನಕ್ಕೂ ಜಾಗೆ ಕೊರತೆ ಎದುರಾಗಿದೆ.

Advertisement

ಬಳಗಾನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀ ಕ್ಯಾಂಪ್‌ನಲ್ಲಿ ಸುಮಾರು 1 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಯಾರಾದರೂ ಮೃತಪಟ್ಟರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಉಪ್ಪಳೇಶ್ವರ ನಗರದ ಬಳಿಯ ಸ್ಮಶಾನದಲ್ಲಿ ಶವ ಹೂಳಬೇಕು, ಇಲ್ಲವೇ ಹಿರೇಹಳ್ಳದ ದಡದಲ್ಲಿ ಸುಡಬೇಕು. ಇಲ್ಲಿನ ಜನ ಶವ ಸಂಸ್ಕಾರಕ್ಕಾಗಿ 2-3 ಕಿ.ಮೀ. ನಡೆದುಕೊಂಡು ಬರಬೇಕಿದೆ.
ಬಳಗಾನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾರಾಯಣ ನಗರ ಕ್ಯಾಂಪ್‌ನಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಹೊಲವಿದ್ದವರು ತಮ್ಮ ಹೊಲಗಳಲ್ಲೇ ಶವ ಸಂಸ್ಕಾರ ನೆರವೇರಿಸುತ್ತಾರೆ. ಜಮೀನು ಇಲ್ಲದವರು ಪಟ್ಟಣದ ಹಿರೇಹಳ್ಳ ಅವಲಂಬಿಸುವಂತಾಗಿದೆ.

ಎಲ್ಲೆಲ್ಲಿ ಸ್ಮಶಾನ: ಉಪ್ಪಳೇಶ್ವರ ನಗರದಲ್ಲಿ ಲಿಂಗಾಯತ ಸಮುದಾಯದ ಸ್ಮಶಾನವಿದೆ. ಇದರ ಪಕ್ಕವೇ ಇತರೆ ವರ್ಗಗಳ ಸಮುದಾಯದವರ ಸ್ಮಶಾನವಿದೆ. ವೀರಶೈವ ಲಿಂಗಾಯತ ಸೇರಿ ಇತರೆ ಸಮುದಾಯದವರಿಗಾಗಿ ಹಳ್ಳದ ದಂಡೆಯ ಮಾರುತಿ ದೇವಸ್ಥಾನ ಹಿಂದುಗಡೆ ಇರುವ ಸ್ಮಶಾನವಿದೆ. ಪಣುವಿನ ಹತ್ತಿರದಲ್ಲಿ ಹಿಂದುಳಿದ ವರ್ಗದವರ ಹಾಗೂ ಇತರೆ ಸಮುದಾಯದವರ ಸ್ಮಶಾನವಿದೆ. ಪೊಲೀಸ್‌ ಗೌಡರ ಸಮುದಾಯದವರಿಗೆ ಸಿದ್ದಪ್ಪ ಮಠದ ಬಳಿ ಸ್ಮಶಾನವಿದೆ. ಸರಕಾರಿ ಆಸ್ಪತ್ರೆ ಹತ್ತಿರ ವಿವಿಧ ಗೌಡರ ಸಮುದಾಯಕ್ಕೆ ಸೇರಿದ ವೈಯಕ್ತಿಕ ಸ್ಮಶಾನವಿದೆ. ಹಳ್ಳದ ಆಚೆ ದಡದಲ್ಲಿ ದೇವಾಂಗ ಸಮುದಾಯದ ಸ್ಮಶಾನ ಮತ್ತು ಹರಿಜನ ವಾಡದಲ್ಲಿ ಹರಿಜನ ಗಿರಿಜನರ ಸಮುದಾಯದವರ ಸ್ಮಶಾನವಿದೆ. ಇದರಲ್ಲಿ ಕೆಲವು ಸರ್ಕಾರಿ ಜಾಗೆಯಲ್ಲಿದ್ದರೆ ಮತ್ತೆ ಕೆಲವರ ಖಾಸಗಿ ಜಮೀನಿನಲ್ಲಿವೆ. ಈ ಪೈಕಿ ಕೆಲ ಸ್ಮಶಾನಗಳು ಒತ್ತುವರಿಯಾಗಿವೆ. ನಿರ್ವಹಣೆ ಕೊರತೆಯಿಂದ ಸ್ಮಶಾನದಲ್ಲಿ ಜಾಲಿಗಿಡಗಳು ಬೆಳೆದಿವೆ.

ಗ್ರಾಪಂ ಅವಧಿಯಲ್ಲಿ ಲಕ್ಷಾಂತರ ರೂ. ಅನುದಾನ ವ್ಯಯಿಸಿ ಕೆಲ ಸ್ಮಶಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಪಟ್ಟಣದ ಮುಸ್ಲಿಂ ಸಮುದಾಯದ ಖಬರಸ್ಥಾನ ಬಸ್‌ ನಿಲ್ದಾಣದ ಹತ್ತಿರ ಇದ್ದು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯಿಂದ ಲಕ್ಷಾಂತರ ರೂ. ಅನುದಾನ ಪಡೆದು ಮಂಡಳಿ ಮತ್ತು ಸಮುದಾಯದ ನಿರ್ವಹಣೆ ಮಾಡಲಾಗುತ್ತಿದೆ. ಇದಲ್ಲದೇ ಶಾಹಿಜಾಮೀಯಾ ಮಸೀದಿ ಹತ್ತಿರ ಮುಸ್ಲಿಮ್‌ ಸಮುದಾಯದ ಮತ್ತೂಂದು ಖಬರಸ್ಥಾನ ಇದೆ. ಗ್ರಾಪಂ ಅವಧಿ ಯಲ್ಲಿ ಅನುದಾನ ಪಡೆದು ಅಭಿವೃದ್ಧಿ ಮಾಡಲಾಗಿದ್ದು, ಇನ್ನೂ ಅಭಿವೃದ್ಧಿ ಆಗಬೇಕಿದೆ.

ಇತರೆ ಎಲ್ಲ ಸಮುದಾಯಗಳ ಮುಖಂಡರುಗಳು ಶವ ಸಂಸ್ಕಾರ ಸಂದರ್ಭದಲ್ಲಿ ಸ್ಮಶಾನ ಅಭಿವೃದ್ಧಿಯ ಮಾತನಾಡಿ ಮನೆ ಸೇರಿ ಮತ್ತೆ ಮರೆತುಬಿಡುತ್ತಾರೆ. ಸರಕಾರ ಸ್ಮಶಾನ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸಬೇಕು. ಬಿಡುಗಡೆಯಾದ ಅನುದಾನ ಸದ್ಭಳಕೆಯಾಗಿ ಸ್ಮಶಾನಗಳು ಮುಕ್ತಿಧಾಮವಾಗಿ ಮಾರ್ಪಡುವಂತೆ ಸಂಬಂಧಿಸಿದ ಸಮುದಾಯದ ಮುಖಂಡರು, ಅಧಿಕಾರಿಗಳು ಶ್ರಮಿಸಬೇಕಿದೆ.

Advertisement

ಲಕ್ಷ್ಮೀ ಕ್ಯಾಂಪ್‌ನಲ್ಲಿ ಸ್ಮಶಾನದ ಅವಶ್ಯಕತೆ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಅವಧಿಯಲ್ಲಿ ಮತ್ತು ಈಗ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಸ್ಮಶಾನಕ್ಕೆ ಜಾಗೆ ಒದಗಿಸುವಂತೆ ಮನವಿ ಮಾಡಿದ್ದೇವೆ.
ಅಮರೇಶ ಲಡ್ಡಿನ್‌,
ಲಕ್ಷ್ಮೀ ಕ್ಯಾಂಪ್‌ ನಿವಾಸಿ

ಕೆಲವು ತಿಂಗಳ ಹಿಂದೆ ಕ್ಯಾಂಪ್‌ನ ಜನತೆ ಪಪಂ ಮುಂದೆ ವಿವಿಧ ಸಂಘಟನೆಗಳೊಂದಿಗೆ ಸೇರಿ ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ ನೆಡಸಲಾಗಿತ್ತು. 2 ವರ್ಷ ಹಿಂದೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಲಾಗಿತ್ತು. ಆಗಲೂ ಸ್ಮಶಾನಕ್ಕೆ ಜಾಗೆ ಒದಗಿಸಲು ಬೇಡಿಕೆ ಸಲ್ಲಿಸಲಾಗಿತ್ತು. ತಹಶೀಲ್ದಾರ್‌, ಪಪಂ ಮುಖ್ಯಾಧಿಕಾರಿ, ಮುಖಂಡರು ಭೇಟಿ ನೀಡಿ ಸ್ಮಶಾನಕ್ಕೆ ಭೂಮಿ ಖರೀದಿಸಿ ನೀಡುವುದಾಗಿ ಭರವಸೆ ನೀಡಿದ್ದರು. ಇಲ್ಲಿಯವರೆಗೂ ಬೇಡಿಕೆ ಈಡೇರಿಲ್ಲ.
ಸೂರ್ಯಚಂದ್ರರಾವ್‌,
ನಾರಾಯಣನಗರ ಕ್ಯಾಂಪ್‌ ನಿವಾಸಿ

„ಹನುಮೇಶ ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next