Advertisement
ಯಾವುದೇ ಸಂಸ್ಥೆ ಸರಾಗವಾಗಿ ಕೆಲಸ ಮಾಡಬೇಕಾದರೆ ಅದರ ಮಾನವ ಸಂಪನ್ಮೂಲ ವಿಭಾಗ (ಎಚ್‌ಆರ್- ಹ್ಯೂಮನ್ ರಿಸೋರ್ಸ್) ಸಮರ್ಥವಾಗಿ ತನ್ನ ಕಾರ್ಯ ನಿರ್ವಹಿಸಬೇಕು. ಸಂಬಳ ಸವಲತ್ತುಗಳೂ ಮೊದಲ್ಗೊಂಡು ಸಿಬ್ಬಂದಿ ನಿಯಮಾವಳಿ ಹಾಗೂ ಇತರೆ ಭತ್ಯೆಗಳು, ರಜೆಯ ವಿಚಾರ, ಶಿಸ್ತಿಗೆ ಸಂಬಂಧಿಸಿದ ನಿಯಮಾವಳಿ- ಈ ಎಲ್ಲವನ್ನೂ ರೂಪಿಸುವುದು ಮಾನವ ಸಂಪನ್ಮೂಲ ವಿಭಾಗ. ಸಂಸ್ಥೆ ಸಣ್ಣದಿರಬಹುದು, ಅಥವಾ ಅಂತಾರಾಷ್ಟ್ರೀಯ ಮಟ್ಟದ್ದೇ ಇರಬಹುದು, ಆದರೆ ಅದರ ಬೆನ್ನೆಲುಬಾಗಿ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ಮಾನವ ಸಂಪನ್ಮೂಲ ವಿಭಾಗ. ಉದ್ಯೋಗಿ ಮತ್ತು ಆಡಳಿತ ಮಂಡಳಿಯ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತದೆ ಎಚ್.ಆರ್ ವಿಭಾಗ.
Related Articles
Advertisement
ಕಾನೂನಿನ ಅರಿವೂ ಬೇಕು: ಕಂಪೆನಿಗಳನ್ನು ನಡೆಸುವಾಗ ಕಾನೂನು ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಮಾಲೀಕ ಮತ್ತು ಕೆಲಸಗಾರರ ನಡುವಣ ಉದ್ಯೋಗದಾತ – ಉದ್ಯೋಗಿ ಸಂಬಂಧಗಳು “ಲೇಬರ್’ ಕಾನೂನಿನ ವ್ಯಾಪ್ತಿಯೊಳಗೆ ಬರುತ್ತವೆ. ಹೀಗಾಗಿ, ಮಾನವ ಸಂಪನ್ಮೂಲ ವಿಭಾಗದವರು ಈ ಎರಡೂ ಬದಿಯವರ ಹಿತರಕ್ಷಣೆಯನ್ನು ಮನಸ್ಸಿನಲ್ಲಿರಿಸಿಕೊಂಡು ಕಾನೂನಿನ ಅರಿವಿನೊಂದಿಗೆ ಸೌಹಾರ್ದ ಸಂಬಂಧ ಸ್ಥಾಪನೆ ಮತ್ತು ಪ್ರಗತಿಪಥದ ಪಯಣ ಎರಡನ್ನೂ ಸಾಧಿಸಬೇಕಾಗುತ್ತದೆ. ಉದ್ಯೋಗದಾತರಿಂದ ಉದ್ಯೋಗಿಯ ಶೋಷಣೆಯಾಗದಂತೆ, ಅದೇ ಸಮಯದಲ್ಲಿ ಉದ್ಯೋಗಿಯಿಂದ ಸಂಸ್ಥೆಗೆ ನಷ್ಟವಾಗದಂತೆ ಏR ವಿಭಾಗ ಸಮತೂಕದ ಸಂಬಂಧ ಕಾಪಾಡಿಕೊಳ್ಳುತ್ತದೆ. ಎಚ್.ಆರ್. ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿದವರಿಗೆ, ಪ್ರಾರಂಭದ ಪಗಾರ ಕಡಿಮೆ ಸಿಕ್ಕರೂ ಬಹಳ ಬೇಗ ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಲಕ್ಷವನ್ನೂ ಸಂಪಾದಿಸಬಹುದು.
ಮುಖ್ಯ ಕರ್ತವ್ಯಗಳುಸಿಬ್ಬಂದಿಯ ನೇಮಕಾತಿ: ಸಂಸ್ಥೆಗೆ ಸರಿಹೊಂದುವ ಸಿಬ್ಬಂದಿಯನ್ನು ಆಯ್ಕೆ ಮಾಡುವುದು HR ಸಿಬ್ಬಂದಿಯ ಮುಖ್ಯ ಕರ್ತವ್ಯ. ಸಿಕ್ಕ ಸಿಕ್ಕಂತೆ ಇದನ್ನು ಮಾಡಲಾಗುವುದಿಲ್ಲ. ಅಭ್ಯರ್ಥಿಯನ್ನು ಹಲವಾರು ಆಯಾಮಗಳಲ್ಲಿ ಅಳೆದು, ಆತನ ಕಾರ್ಯಕ್ಷಮತೆ ಪರೀಕ್ಷಿಸಿದ ನಂತರವೇ ಸಂಸ್ಥೆಗೆ ಸೇರಿಸಿಕೊಳ್ಳಬೇಕಾಗುತ್ತದೆ. ಸಂಬಳ – ಭತ್ಯೆ ನಿರ್ವಹಣೆ: ಆಯ್ಕೆಯಾದ ಸಿಬ್ಬಂದಿಗೆ ಸಮಾಧಾನವಾಗುವಂತೆ, ಸಂಸ್ಥೆಗೆ ಹೊರೆಯಾಗದಂತೆ ಸಂಬಳ- ಭತ್ಯೆಗಳನ್ನು ನಿಗದಿಪಡಿಸುವುದು HR ವಿಭಾಗದ ಜವಾಬ್ದಾರಿ. ಜೊತೆಗೆ ಪಿ.ಎಫ್., ಬೋನಸ್ ಇತ್ಯಾದಿಗಳ ಬಗ್ಗೆ ಪೂರ್ಣ ತಿಳಿವಳಿಕೆ ಹೊಂದಿರುವುದು ಎಚ್.ಆರ್ ವಿಭಾಗದವರ ಜವಾಬ್ದಾರಿ. ತರಬೇತಿ ಮತ್ತು ಪ್ರಗತಿ: ಸಿಬ್ಬಂದಿಗಳಿಗೆ ಕಂಪೆನಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ, ಅವರ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗುವಂತೆ ಮತ್ತು ಕಂಪೆನಿಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ಮಾನವ ಸಂಪನ್ಮೂಲ ವಿಭಾಗ ಹಮ್ಮಿಕೊಳ್ಳಬೇಕು. ಕಂಪೆನಿಗೆ, ತರಬೇತಿ ಕೈಪಿಡಿ (Training Planner)ಯನ್ನು ಕೂಡಾ ಮಾಡಿಕೊಡಬೇಕಾಗುತ್ತದೆ. ಎಚ್.ಆರ್ ಆಗಬಯಸುವವರು ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪಡೆದಿರಬೇಕು. ಮನೆಯಲ್ಲಿ ತಾಯಿಯಾದವಳು ಹೇಗೆ ಕುಟುಂಬದ ಸದಸ್ಯರ ಬೇಕು ಬೇಡಗಳನ್ನು ತಿಳಿದುಕೊಳ್ಳುತ್ತಾಳ್ಳೋ, ಅದೇ ರೀತಿ ಒಂದು ಸಂಸ್ಥೆಯಲ್ಲಿ ಎಚ್.ಆರ್.ಗಳು ಉದ್ಯೋಗಿಗಳ ನೋವು ನಲಿವುಗಳಲ್ಲಿ ಭಾಗಿಯಾಗುತ್ತಾರೆ. ಸಂಸ್ಥೆಯಲ್ಲಿ ಕೌಟುಂಬಿಕ ವಾತಾವರಣವನ್ನು ನಿರ್ಮಿಸುವುದರಿಂದ ಉದ್ಯೋಗಿಗಳ ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಇದರಿಂದ ಸಂಸ್ಥೆಗೂ ಪ್ರಯೋಜನವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಎಲ್ಲರನ್ನೂ ಖುಷಿಯಾಗಿಡುವುದೇ ನಮ್ಮ ಕೆಲಸ.
-ಅಕ್ಷತಾ ದೇವರಾಜ್, ಎಚ್. ಆರ್, ಎಂ.ಎನ್.ಸಿ. * ರಘು ವಿ.