ಬೀಜಿಂಗ್: ಚೀನಾ ರಾಜಧಾನಿಯ ಹಲವು ಜಿಲ್ಲೆಗಳಲ್ಲಿ ದಿಢೀರನೆ ಕೋವಿಡ್ ಪ್ರಕರಣಗಳು ಹೆಚ್ಚಾದ ಪರಿಣಾಮ ಅಧಿಕಾರಿಗಳು ಮಾಲ್ ಗಳನ್ನು ಬಂದ್ ಮಾಡಿಸಿದ್ದು, ಹಲವಾರು ನಿವಾಸಗಳನ್ನು ಲಾಕ್ ಡೌನ್ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: 19ರಂದು “100′ ಚಲನಚಿತ್ರ ರಾಜ್ಯಾದ್ಯಂತ ತೆರೆಗೆ
ಸಂಚಾರ ನಿರ್ಬಂಧ, ಸಾಮೂಹಿಕ ಕೋವಿಡ್ ಪರೀಕ್ಷೆ ಹಾಗೂ ಕಠಿಣ ಲಾಕ್ ಡೌನ್ ಗಳ ಮೂಲಕ ಚೀನಾ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಿತ್ತು. ಆದರೆ ಕಳೆದ ತಿಂಗಳಿನಲ್ಲಿ ದೇಶೀಯ ಸಂಚಾರ ಹೆಚ್ಚಳವಾದ ಪರಿಣಾಮ ಕೋವಿಡ್ ಸೋಂಕು ಹೆಚ್ಚಳವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದರು.
ಬೀಜಿಂಗ್ ನ ಕೇಂದ್ರ ಜಿಲ್ಲೆಗಳಾದ ಚೋಯಾಂಗ್ ಮತ್ತು ಹೈಡಿಯನ್ ನಲ್ಲಿ ಗುರುವಾರ ಬೆಳಗ್ಗೆ ಆರು ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿಗಳ ಸಂಪರ್ಕದಿಂದ ಕೋವಿಡ್ ಹರಡಿರುವುದಾಗಿ ವರದಿ ತಿಳಿಸಿದೆ.
ಡಾಂಗ್ ಚೆಂಗ್ ನಲ್ಲಿರುವ ಮಾಲ್ ಅನ್ನು ಬಂದ್ ಮಾಡಲಾಗಿದೆ ಎಂದು ಬೀಜಿಂಗ್ ಯೂತ್ ಡೈಲಿ ವರದಿ ಮಾಡಿದೆ. ಮಾಲ್ ನೊಳಗಿರುವ ಎಲ್ಲಾ ಗ್ರಾಹಕರು ಮತ್ತು ಸಿಬಂದಿಗಳು ಪೂರ್ಣ ಪ್ರಮಾಣದ ಪರೀಕ್ಷೆ ನಡೆಸುವವರೆಗೆ ಹೊರ ಹೋಗುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾದವರ ಜತೆ ಸುಮಾರು 280 ಮಂದಿ ನಿಕಟ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಚೋಯಾಂಗ್ ಮತ್ತು ಹೈಡಿಯಾನ್ ಜಿಲ್ಲೆಗಳಲ್ಲಿ ಸುಮಾರು 12 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.