ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ನಟ ಕಂ ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ ನೂರನೇ ಚಿತ್ರ ‘ಪುಷ್ಪಕ ವಿಮಾನ’ವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಎಸ್. ರವೀಂದ್ರನಾಥ್ ಸದ್ದಿಲ್ಲದೆ ತಮ್ಮ ಮತ್ತೂಂದು ಚಿತ್ರವನ್ನು ಶುರು ಮಾಡಿದ್ದಾರೆ.
ಅಂದಹಾಗೆ, ರವೀಂದ್ರನಾಥ್ ತಮ್ಮ ನಿರ್ದೇಶನ ಎರಡನೇ ಚಿತ್ರಕ್ಕೆ ‘ಕಂಟ್ರಿಮೇಡ್ ಚಾರಿ’ ಎನ್ನುವ ಟೈಟಲ್ ಇಟ್ಟಿದ್ದು, ಇದೇ ಯುಗಾದಿ ಹಬ್ಬದ ಸಂದರ್ಭದಲ್ಲಿ ಅಧಿಕೃತವಾಗಿ ತಮ್ಮ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದು, ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ಇನ್ನು ‘ಕಂಟ್ರಿಮೇಡ್ ಚಾರಿ’ ಚಿತ್ರವನ್ನು “ಟಾರ್ಚ್ ಬೇರರ್ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ಸುಶೀಲ್ ಸತ್ಯರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಮಾತ್ರ ಬಿಡುಗಡೆ ಮಾಡಿರುವ ನಿರ್ದೇಶಕ ಎಸ್. ರವೀಂದ್ರನಾಥ್, ಚಿತ್ರದ ಪ್ರೀ-ಪ್ರೊಡಕ್ಷನ್‌ನ ಅಂತಿಮ ಹಂತದ ಕೆಲಸದಲ್ಲಿದ್ದಾರೆ.
ಈ ಬಗ್ಗೆ ಮಾತನಾಡುವ ರವೀಂದ್ರನಾಥ್, “ಇದೊಂದು ಪಕ್ಕಾ ದೇಸಿ ಸೊಗಡಿನ ಆ್ಯಕ್ಷನ್-ಥ್ರಿಲ್ಲರ್ ಚಿತ್ರ. ಜೊತೆಗೆ ಇದರಲ್ಲಿ ತಂದೆ-ಮಗನ ನಡುವಿನ ಸಂಬಂಧದ ಚಿತ್ರಣವಿದೆ. ಇದರಲ್ಲಿ ಚಿತ್ರದ ನಾಯಕನ ಹೆಸರು ರಾಘವಾಚಾರಿ. ಅವನನ್ನ ಎಲ್ಲರೂ ಚಾರಿ ಎಂದೇ ಕರೆಯುತ್ತಿರುತ್ತಾರೆ.
ಆ ಹುಡುಗನ ಮ್ಯಾನರಿಸಂ ಏನು, ಅವನ ನಡೆ-ನುಡಿ ಹೇಗಿರುತ್ತದೆ ಅನ್ನೋದೆ ಈ ಚಿತ್ರ. ಒಂದು ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿ ಇರುತ್ತದೆ. ನೋಡುಗರಿಗೆ ಚಿತ್ರ ಕಂಪ್ಲೀಟ್ ಮನರಂಜನೆ ನೀಡುತ್ತದೆ ಎನ್ನುತ್ತಾರೆ.
ಸದ್ಯ “ಕಂಟ್ರಿಮೇಡ್ ಚಾರಿ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಕಲಾವಿದರು, ತಂತ್ರಜ್ಞರ ಅಂತಿಮ ಆಯ್ಕೆ ನಡೆಯುತ್ತಿದೆ. ಇದೇ ತಿಂಗಳಾಂತ್ಯಕ್ಕೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ರವೀಂದ್ರನಾಥ್. ಒಟ್ಟಾರೆ ಸಿಂಪಲ್ ಪೋಸ್ಟರ್ ಮೂಲಕ ಮತ್ತು ಟೈಟಲ್ ಮೂಲಕ “ಕಂಟ್ರಿಮೇಡ್ ಚಾರಿ’ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಚಿತ್ರ ಹೇಗಿರಲಿದೆ ಅನ್ನೋದು ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.