ಉಪ್ಪಿನಂಗಡಿ: ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದ ಚರಂಡಿ ನೀರು ಇಲ್ಲಿನ ಕೆಲವು ಹೊಟೇಲ್, ಅಂಗಡಿಗಳಿಗೆ ನುಗ್ಗಿದ್ದು ಎಚ್ಚೆತ್ತ ಗ್ರಾ.ಪಂ. ಆಡಳಿತ ಹೆದ್ದಾರಿ ಇಲಾಖೆ ಗುತ್ತಿಗೆದಾರರಿಂದ ಮುಚ್ಚಿದ ಚರಂಡಿಯ ಹೂಳೆತ್ತುವ ಕೆಲಸ ನಡೆಸಿತು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಸನಿಹದಲ್ಲಿ ಪಟ್ಟಣದ ಎಲ್ಲ ಹೊಟೇಲ್ ಹಾಗೂ ಇತರ ಉದ್ಯಮಗಳ ತ್ಯಾಜ್ಯ ನೀರು ಹರಿಯುವ ಚರಂಡಿ ಚತುಷ್ಪಥ ಕಾಮಗಾರಿಗಾಗಿ ಮಣ್ಣು ಹಾಕಿ ಮುಚ್ಚಿದ್ದು ಪೇಟೆಯಲ್ಲಿ ಕೃತಕ ನೆರೆಗೆ ಕಾರಣವಾಗಿತ್ತು.
ಮಂಗಳವಾರ ಬೆಳಗಿನ ಜಾವ ಸ್ಕಂದ ಹೊಟೇಲ್‌ಗೆ ನೀರು ನುಗ್ಗಿ ವಿದ್ಯುತ್ ಉಪಕರಣಗಳ ಸಹಿತ ಇತರ ಸಾಮಗ್ರಿಗಳಿಗೆ ಹಾನಿಯಾಗಿತ್ತು. ಸುಮಾರು ಎರಡು ಲಕ್ಷ ರೂ. ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಸರಕಾರಿ ಮಾದರಿ ಶಾಲೆಯ ಆವರಣಕ್ಕೂ ಕೃತಕ ನೆರೆ ನೀರು ನುಗ್ಗಿತ್ತು. ಪರಿಸ್ಥಿತಿಯನ್ನು ಸಂಬಂಧಿಸಿದವರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯ ಯು.ಟಿ ತೌಸಿಫ್, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರ ಗಮನಕ್ಕೆ ತಂದರು.
ಎಚ್ಚರಿಸಿದ್ದ ಉದಯವಾಣಿ
ಸ್ಥಳ ಪರಿಶೀಲನೆ ನಡೆಸಿದ ಅವರು ಹೆದ್ದಾರಿ ಇಲಾಖೆಯ ಗುತ್ತಿಗೆದಾರರನ್ನು ಸಂಪರ್ಕಿಸಿ ಚರಂಡಿಗೆ ಹಾಕಿದ ಮಣ್ಣು ತೆರವುಗೊಳಿಸುವ ಕಾಮಗಾರಿ ನಡೆಸುವಂತೆ ಸೂಚಿಸಿದರು. ಅದರಂತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಉದಯವಾಣಿ ಸುದಿನ ಕೆಲವು ದಿನಗಳ ಹಿಂದೆ ಇಲ್ಲಿನ ಗಂಭೀರ ಪರಿಸ್ಥಿತಿಯ ಬಗ್ಗೆ ವರದಿ ಮಾಡಿ ಆಡಳಿತವನ್ನು ಎಚ್ಚರಿಸಿತ್ತು.