ಕಲಬುರಗಿ: ನಗರದ ಹೊರವಲಯದ ಮಾಧವ ಗೋಶಾಲೆಯಲ್ಲಿ ದೇಶಿ ಗೋವಿನ ಸೆಗಣಿಯಿಂದ ತಯಾರಿಸಲಾಗುವ ಜೈವಿಕ ಗೊಬ್ಬರ ಮತ್ತು ಪಂಚಗವ್ಯ ಔಷಧಿ ತಯಾರಿಕಾ ಘಟಕಕ್ಕೆ ವಿಶ್ವ ಹಿಂದು ಪರಿಷತ್‌ನ ಗೌರವಾಧ್ಯಕ್ಷ ಲಿಂಗರಾಜ ಅಪ್ಪಾ ಚಾಲನೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ರಮೇಶ ಸ್ವಾಮಿ ಮಾತನಾಡಿ, ಈಗಾಗಲೇ ಈ ಗೋಶಾಲೆಯಿಂದ 19 ಗೋವಂಶವನ್ನು ರೈತರಿಗೆ ಉಚಿತವಾಗಿ ಒಪ್ಪಂದದ ಮೂಲಕ ನೀಡಲಾಗಿದೆ. ಅದಲ್ಲದೆ, ಶಾಲೆಯಲ್ಲಿ ಇರುವ ಅಂಗವಿಕಲ 22 ಗೋವುಗಳಿಗೆ ಸೇವೆ ಮಾಡಲಾಗುತ್ತಿದೆ.
ಶಾಲೆಯಲ್ಲಿ ಸಿಗುವ ಗೋಮೂತ್ರ ಮತ್ತು ಗೋಮಯದಿಂದ ತಯಾರು ಮಾಡಿರುವ ಗೊಬ್ಬರ, ಕೀಟನಾಶಕ ಮತ್ತು ಇನ್ನಿತರ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವುದರ ಮೂಲಕ ಆರ್ಥಿಕ ವೆಚ್ಚ ನಿರ್ವಹಿಸುವ ಯೋಜನೆ ಮಾಡಲಾಗಿದೆ. ಮಾಧವ ಗೋಶಾಲೆಯಲ್ಲಿ ಶುದ್ಧ ವಿಭೂತಿಯೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.
ಅದಲ್ಲದೆ, ಘನ ಜೀವಾಮೃತ, ನಡೆಫ್ ಕಾಂಪೋಸ್ಟ್ ಮತ್ತು ಎರೆ ಹುಳು ಗೊಬ್ಬರವನ್ನು ಮೊದಲ ಹಂತದಲ್ಲಿ ತಯಾರಿಸುವುದು ಎಂದು ಹೇಳಿದರು. ಗೋವು ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿ ರಾಯಚೂರು ಕೃಷಿ ವಿವಿ ಡೀನ್ ಜಿ.ಆರ್. ಪಾಟೀಲ, ಜೈವಿಕ ಗೊಬ್ಬರದ ಬಳಕೆ ಮತ್ತು ಈ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಸವಿವರವಾಗಿ ವಿವರಿಸಿದರು.
ಹಿರಿಯ ಕೃಷಿ ತಜ್ಞ ಗುಂಡಪ್ಪಗೊಳ, ಗೋವಿಜ್ಞಾನಿ ಸುಧೀಂದ್ರ ದೇಶಪಾಂಡೆ, ಗುರುಶಾಂತ ಟೆಂಗಳಿ, ಶಾಂತಕುಮಾರ ಬಿರಾದಾರ, ಶಾಂತಕುಮಾರ ಖೇಮಜಿ, ಹಣಮಂತರಾವ ಪಾಟೀಲ ಇದ್ದರು.