Advertisement

ತೊಗರಿ ಖರೀದಿ ಕೇಂದ್ರಗಳು ರೈತ ಸ್ನೇಹಿಯಾಗಲಿ

05:04 PM Jan 28, 2018 | Team Udayavani |

ರಾಯಚೂರು: ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳ ಬಗ್ಗೆ ದೂರುಗಳು ಹೆಚ್ಚಾಗಿ ಬರುತ್ತಿವೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ಕೇಂದ್ರಗಳು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಿ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಂಸದ ಬಿ.ವಿ.ನಾಯಕ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕವಿತಾಳದಲ್ಲಿ ತೊಗರಿ ಖರೀದಿ ಕೇಂದ್ರ ಕೆಲಸ ಮಾಡುತ್ತಿಲ್ಲ ಎಂದು ರೈತರು ದೂರಿದ್ದಾರೆ. ನಿಯಮಾನುಸಾರ ರೈತರಿಂದ ತೊಗರಿ ಖರೀದಿಸಬೇಕು. ಮಾರಾಟಕ್ಕೆ ನೋಂದಣಿ ಕಾಲಾವಕಾಶ ಹೆಚ್ಚಿಸಬೇಕು. ಅಲ್ಲದೇ, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆದಿದ್ದು, ಕೂಡಲೇ ಬೆಂಬಲ ಬೆಲೆ ನೀಡಿ ಖರೀದಿಗೆ ಮುಂದಾಗಿ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ತೊಗರಿ ಮಾರಾಟಕ್ಕೆ ನೋಂದಾಯಿಸಿದ ರೈತರ ಸಂಖ್ಯೆ ಹೆಚ್ಚಾಗಿದೆ. ಆದರೂ ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾಗಿ ತಿಳಿಸಿದರು.

ಸಂಸದ ಸಂಗಣ್ಣ ಮಾತನಾಡಿ, ಕೃಷಿ ಹೊಂಡ, ಚೆಕ್‌ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿಶತ ಪ್ರಗತಿ ಸಾಧಿಸಬೇಕು. ಶೌಚಗೃಹ ನಿರ್ಮಾಣ ಗುರಿ ತಲುಪಿ. ಫಲಾನುವಿಗಳಿಗೆ ಸಕಾಲಕ್ಕೆ ಹಣ ಪಾವತಿಸುವಂತೆ ಸೂಚಿಸಿದರು.

Advertisement

ಪಂಚಾಯತ್‌ ರಾಜ್‌ ಇಲಾಖೆ ಎಇಇ ಮಾತನಾಡಿ, ಉದ್ಯೋಗ ಖಾತರಿಯಡಿ ಪ್ರಸಕ್ತ ವರ್ಷ 71.8 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಿದ್ದು, ಈಗಾಗಲೇ ಶೇ.51.74ರಷ್ಟು ಸಾಧನೆಯಾಗಿದೆ. ಮಾರ್ಚ್‌ ಅಂತ್ಯಕ್ಕೆ ನಿಗದಿತ ಗುರಿ ತಲುಪಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ 38 ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿ ಮುಗಿಸಲಾಗಿದೆ. 76 ಪ್ರಗತಿಯಲ್ಲಿವೆ ಎಂದರು.

ಜಿಪಂ ಸಿಇಒ ಅಭಿರಾಮ್‌ ಜಿ. ಶಂಕರ ಮಾತನಾಡಿ, ಜಿಲ್ಲೆಯಲ್ಲಿ 94,807 ಶೌಚಗೃಹ ನಿರ್ಮಿಸಲು ಆದೇಶ ನೀಡಿದ್ದು, 26,616 ಮುಗಿದಿವೆ. ಶೌಚಗೃಹ ನಿರ್ಮಿಸಿಕೊಂಡವರಿಗೆ ಹಣ  ವತಿಸಲು ಪಿಡಿಒ ಹಾಗೂ ಅಧ್ಯಕ್ಷರು ಕಂಪ್ಯೂಟರ್‌ ಸಾಫ್ಟ್‌ವೇರ್‌ನಲ್ಲಿ ಒಪ್ಪಿಗೆ ಕೊಟ್ಟ ಬಳಿಕ ಅದು ಕೇಂದ್ರಕ್ಕೆ ತೆರಳುತ್ತದೆ. ಅಲ್ಲಿನ ಸರ್ವರ್‌ನಲ್ಲಿ ಎಲ್ಲ ಜಿಲ್ಲೆಗಳ ಬಿಲ್‌ಗ‌ಳು ಬಂದಿರುವುದರಿಂದ, ನಿತ್ಯ ಐದು ಸಾವಿರ ಬಿಲ್‌ ಮಾತ್ರ ಪಾವತಿ ಆಗುತ್ತಿವೆ. ಇದರಿಂದ ಫಲಾನುಭವಿಗಳಿಗೆ ಹಣ ಬರುವುದು ವಿಳಂಬವಾಗುತ್ತಿದೆ. ಈ ಕುರಿತು ಕ್ರಮಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಡಾ| ಡಿ.ಕಿರಣಕುಮಾರ್‌ ಮಾತನಾಡಿ, 2016-17ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಫಸಲ್‌ಬಿಮಾ ಯೋಜನೆಯಡಿ 78,187 ಅರ್ಜಿ ನೋಂದಣಿಯಾಗಿದ್ದು, 4.65 ಕೋಟಿ ಹಣ ಪಾವತಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮಾಹಿತಿಯನ್ನು ಎಲ್ಲ ಜನಪ್ರತಿನಿಧಿ ಗಳಿಗೆ ನೀಡಲಾಗಿದೆ ಎಂದು ವಿವರಿಸಿದರು.

ಜೆಸ್ಕಾಂ ಎಂಜಿನಿಯರ್‌ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ 346 ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಬಾಕಿ ಇದೆ. ಕಾಮಗಾರಿಗಾಗಿ ಈಗಾಗಲೇ ಗುತ್ತಿಗೆ ನೀಡಿದ್ದು, 100 ಈಗಾಗಲೇ ಮುಗಿದಿವೆ. ಇನ್ನುಳಿದ ಕೆಲಸಗಳನ್ನು ಮಾರ್ಚ್‌ಗೆ ಮುಗಿಸುವುದಾಗಿ ತಿಳಿಸಿದರು.

ನಂತರ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯಿತು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶಪ್ಪ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜ್‌ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next