ಧಾರವಾಡ: ಜಿಲ್ಲೆಯಲ್ಲಿ ಬರೋಬ್ಬರಿ ಒಂದು ತಿಂಗಳು ವಿಳಂಬವಾದರೂ ಕಡಲೆ ಖರೀದಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಹೆಸರು ನೋಂದಣಿಗೂ ಉತ್ತಮ ಸ್ಪಂದನೆ ರೈತರಿಂದ ಲಭಿಸಿದೆ. ಆದರೆ ಭತ್ತ-ಬೀಳ ಜೋಳ ಖರೀದಿ ಕೇಂದ್ರಗಳಿಗೆ ರೈತರಿಂದ ಸ್ಪಂದನೆ ಸಿಗದಂತಾಗಿದೆ.
ಕಡಲೆ ಖರೀದಿ ಕೇಂದ್ರಗಳಿಗೆ ಒಂದು ತಿಂಗಳಲ್ಲಿ 8300 ರೈತರು ನೋಂದಣಿ ಮಾಡಿಕೊಳ್ಳುವ ಮೂಲಕ ಉತ್ತಮ ಸ್ಪಂದನೆ ಸಿಕ್ಕಿದ್ದರೂ ಕಳೆದ ಬಾರಿಗಿಂತ ಕಡಿಮೆಯೇ. ಕಳೆದ ವರ್ಷ 24 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ವರ್ಷ ಇದರ ಪ್ರಮಾಣ ಕಡಿಮೆ ಆಗುವ ಲಕ್ಷಣಗಳೇ ಇವೆ. ಇದಲ್ಲದೇ ಭತ್ತ-ಬೀಳಿ ಜೋಳ ಖರೀದಿ ಕೇಂದ್ರಗಳಿಗೆ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖರೀದಿ ಕೇಂದ್ರಗಳಲ್ಲಿ ನಿಗದಿ ಮಾಡಿರುವ ಬೆಂಬೆಲೆ ಮಾರುಕಟ್ಟೆಗಿಂತ ಕಡಿಮೆ ಇರುವ ಕಾರಣ ರೈತರು ಹಿಂದೇಟು ಹಾಕುವಂತಾಗಿದೆ.
ನೋಂದಣಿ ಅಷ್ಟಕಷ್ಟೆ: 2020-21ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳನ್ನು ಪ್ರತಿ ಕ್ವಿಂಟಲ್‌ಗೆ 5,100 ರೂ.ಗಳಂತೆ ಖರೀದಿಸಲು ಜಿಲ್ಲೆಯಲ್ಲಿ ಆರಂಭಿಸಿರುವ 15 ಖರೀದಿ ಕೇಂದ್ರಗಳಲ್ಲಿ ಫೆ.15ರಿಂದ ಏ.30 ರವರೆಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಹೆಸರು ನೋಂದಣಿ ಮಾಡಲು ರೂಪಿಸಿದ್ದ ತಂತ್ರಾಂಶವನ್ನು ಕೇಂದ್ರಗಳಿಗೆ ತಲುಪಲು ವಿಳಂಬ ಆಗಿದ್ದರಿಂದ ಫೆ.24ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಏ.30ರ ವರೆಗೆ ಹೆಸರು ನೋಂದಣಿ ಮಾಡಲು ಅವಕಾಶ ಇದೆ. ಈ ಪೈಕಿ ಈವರೆಗೆ (ಮಾ.26) ಜಿಲ್ಲೆಯ 15 ಖರೀದಿ ಕೇಂದ್ರಗಳಲ್ಲಿ 8300 ಜನ ರೈತರು ತಮ್ಮ ಬೆಳೆ ಮಾರಾಟಕ್ಕೆ ಹೆಸರು ನೋಂದಣಿ ಮಾಡಿದ್ದಾರೆ.
ಇನ್ನೂ ಫೆ.22ರಿಂದ ಮೇ 14ರವರೆಗೆ ರೈತರಿಂದ ಕಡಲೆ ಕಾಳುಗಳನ್ನು ಈ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಆಗಬೇಕಿತ್ತು. ಆದರೆ ನೋಂದಣಿ ಪ್ರಕ್ರಿಯೆ ತಡವಾಗಿದ್ದರಿಂದ ಹಾಗೂ ಖರೀದಿ ಆರಂಭಿಸಲು ಅಗತ್ಯ ಸಿದ್ಧತೆ ಕೊರತೆಯಿಂದ ಖರೀದಿ ಪ್ರಕ್ರಿಯೆ ಆರಂಭ ಆಗಿರಲಿಲ್ಲ. ಈಗ ಅಗತ್ಯ ಸಿದ್ಧತೆ ಪೂರ್ಣಗೊಂಡಿದ್ದು, ಒಂದು ತಿಂಗಳ ವಿಳಂಬದ ಬಳಿಕ ಕಳೆದ ಒಂದು ವಾರದಿಂದ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಒಂದು ವಾರದ ಅವಧಿಯಲ್ಲಿ 15 ಸಾವಿರ ಕ್ವಿಂಟಲ್ ನಷ್ಟು ಖರೀದಿ ಆಗಿದ್ದು, ಮೇ 14ರವರೆಗೆ ಖರೀದಿ ಪ್ರಕ್ರಿಯೆ ಇರಲಿದೆ.
ಶಶಿಧರ್ ಬುದ್ನಿ