ಗಂಗಾವತಿ: ತಾಲೂಕಿನ ಪ್ರಸಿದ್ಧ ಪ್ರವಾಸಿ ಯಾತ್ರಾ ಸ್ಥಳಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿಂದ ಭಿಕ್ಷಾಟನೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಭಿಕ್ಷಾಟನೆಯನ್ನು ತಡೆಯುವಲ್ಲಿ ಮುಂದಾಗುತ್ತಿಲ್ಲ.
ಕಿಷ್ಕಿಂದಾ ಅಂಜನಾದ್ರಿ, ಪಂಪಾ ಸರೋವರ, ಆದಿಶಕ್ತಿ ದೇಗುಲಗಳಿಗೆ ಬರುವ ಪ್ರವಾಸಿಗರನ್ನು ಅಡ್ಡಗಟ್ಟಿ ಪ್ರವಾಸಿಗರಿಗೆ ಮುಜುಗರವಾಗುವ ರೀತಿಯಲ್ಲಿ ಹಣ ಕೊಡುವಂತೆ ಭಿಕ್ಷುಕರು ಪೀಡಿಸುತ್ತಿದ್ದರೂ ಅಲ್ಲಿರುವ ದೇಗುಲಗಳ ಸಿಬ್ಬಂದಿ ಕ್ರಮಕೈಗೊಳ್ಳುತ್ತಿಲ್ಲ. ಪ್ರವಾಸಿ ತಾಣಗಳಲ್ಲಿ ಭಿಕ್ಷಾಟನೆ ತಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಭಿಕ್ಷಾಟನೆ ನಿಷೇಧವಿದ್ದರೂ ಶನಿವಾರ, ರವಿವಾರ ಮತ್ತು ಮಂಗಳವಾರ ಹುಣ್ಣಿಮೆ, ಅಮವಾಸ್ಯೆಯಂದು ನೂರಾರು ಭಿಕ್ಷುಕರು ಜಿಲ್ಲೆ ಮತ್ತು ಹೊಸಪೇಟೆ, ಕಂಪ್ಲಿ ಭಾಗದಿಂದ ಕಿಷ್ಕಿಂದಾ, ಅಂಜನಾದ್ರಿ ಬೆಟ್ಟ ಪ್ರದೇಶ ಹಾಗೂ ಸುತ್ತಲಿನ ಸ್ಥಳಗಳಿಗೆ ಬೆಳಗ್ಗೆ ಆಗಮಿಸಿ ಇಡೀ ದಿನ ಭಿಕ್ಷಾಟನೆ ನಡೆಸಿ ಸಂಜೆಗೆ 500ರಿಂದ 1000 ರೂ. ವರೆಗೆ ಹಣ ಸಂಗ್ರಹಿಸಿಕೊಂಡು ಹೋಗುತ್ತಿದ್ದು, ಭಿಕ್ಷಾಟನೆ ವೇಳೆ ಮಹಿಳೆಯರು ಮಕ್ಕಳನ್ನು ಎತ್ತಿಕೊಂಡು ಹಣ ನೀಡುವಂತೆ ಕೇಳುತ್ತಾರೆ. ಹಣ ಕೊಡದಿದ್ದರೆ ಕೊಡುವ ತನಕವೂ ಬಿಡದೇ ಪ್ರವಾಸಿಗರ ಹಿಂದೆ ದುಂಬಾಲು ಬೀಳುತ್ತಾರೆ.
ಪ್ರವಾಸಿ ತಾಣಗಳಲ್ಲಿ ಇತ್ತೀಚೆಗೆ ಭಿಕ್ಷಾಟನೆ ದಂಧೆ ಹೆಚ್ಚಾಗಿದ್ದು, ಭಿಕ್ಷೆ ಬೇಡುವವರನ್ನು ಸಂರಕ್ಷಣೆ ಮಾಡುವ ಕೇಂದ್ರ ಬಳ್ಳಾರಿಯಲ್ಲಿದ್ದು, ಇಂತಹ ಕೇಂದ್ರ ಕೊಪ್ಪಳ ಅಥವಾ ಗಂಗಾವತಿಯಲ್ಲೂ ರಾಜ್ಯ ಸರಕಾರ ಆರಂಭ ಮಾಡುವ ಮೂಲಕ ಭಿಕ್ಷೆ ಬೇಡುವವರನ್ನು ಸಂರಕ್ಷಣೆ ಮಾಡಿ ಆಶ್ರಯ ಕೇಂದ್ರದಲ್ಲಿರಿಸಿ ಅವರಿಗೆ ಊಟ, ವಸತಿ ಹಾಗೂ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಬೇಕಿದೆ.
ಸರಕಾರ ಭಿಕ್ಷಾಟನೆಯನ್ನು ನಿಷೇಧ ಮಾಡಿದ್ದರೂ ಕಿಷ್ಕಿಂದಾ ಅಂಜನಾದ್ರಿಯ ಸುತ್ತಲಿನ ಪ್ರವಾಸಿ ತಾಣಗಳಲ್ಲಿ ವ್ಯಾಪಕವಾದ ಭಿಕ್ಷಾಟನೆ ನಡೆಯುತ್ತಿದೆ. ಚಿಕ್ಕಮಕ್ಕಳನ್ನು ಕರೆದುಕೊಂಡು ಮಹಿಳೆಯರು ಇಲ್ಲಿಗೆ ಆಗಮಿಸಿ ಪ್ರವಾಸಿಗರ ಹತ್ತಿರ ಭಿಕ್ಷೆಗಾಗಿ ಪೀಡಿಸುತ್ತಾರೆ. ಇದರಿಂದ ಪ್ರವಾಸಿಗರಿಗೆ ಮುಜುಗರವಾಗುತ್ತಿದೆ. ಈ ಬಗ್ಗೆ ದೇವಾಲಯಗಳ ಆಡಳಿತಾಧಿಕಾರಿಗಳು ಕೂಡಲೇ ಕ್ರಮ ವಹಿಸುವ ಮೂಲಕ ಭಿಕ್ಷಾಟನೆ ತಪ್ಪಿಸಬೇಕಿದೆ. –
ದೇವೆಂದ್ರ ಚಿಕ್ಕರಾಂಪುರ
ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಭಿಕ್ಷಾಟನೆ ಕುರಿತು ದೂರುಗಳಿದ್ದು, ಇಲ್ಲಿಗೆ ದೇಶ, ವಿದೇಶದ ಪ್ರವಾಸಿಗರು ಆಗಮಿಸುವ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುವವರು ಹಣ ನೀಡುವಂತೆ ಪೀಡಿಸುವ ಮೂಲಕ ಮುಜುಗರ ಉಂಟು ಮಾಡುವ ಸಂಭವವಿದೆ. ದೇವಾಲಯಗಳ ಸಿಬ್ಬಂದಿಗೆ ಭಿಕ್ಷಾಟನೆ ತಡೆಯುವಂತೆ ಸೂಚನೆ ನೀಡಲಾಗಿದೆ. ಭಿಕ್ಷುಕರು ಮತ್ತು ನಿರ್ಗತಿಕರ ಕೇಂದ್ರಕ್ಕೂ ಮಾಹಿತಿ ನೀಡಿ ಇಲ್ಲಿರುವ ಭಿಕ್ಷುಕರು, ನಿರ್ಗತಿಕರನ್ನು ಸಂರಕ್ಷಣೆ ಮಾಡುವಂತೆ ಕೋರಲಾಗುತ್ತದೆ. –
ಬಸವಣ್ಣೆಪ್ಪ ಕಲಶೆಟ್ಟಿ, ಸಹಾಯಕ ಆಯುಕ್ತರು, ಕೊಪ್ಪಳ
-ಕೆ. ನಿಂಗಜ್ಜ