Advertisement

ಮಾತಿಗೆ ಮುನ್ನ: ಅವ್ಯಕ್ತಗಳ ನಡುವಿನ ವ್ಯಕ್ತಮಧ್ಯ

06:00 AM Apr 08, 2018 | |

ಕವಿ ಅಡಿಗರ ಮೇಲಿರುವ ಆದರಕ್ಕೆ ಕಾರಣ- ಅವರು ಕನ್ನಡಕ್ಕೆ ಹೊಸ ನುಡಿಗಟ್ಟುಗಳನ್ನು ಕೇಳಿಸಿದರು, ಕಲಿಸಿದರು ಎಂದು ಮಾತ್ರವಲ್ಲ , ಈ ಸಾಧನೆಗಾಗಿ ಅದಾಗಲೇ ತಮಗೆ ಅರ್ಹವಾಗಿಯೇ ದೊರಕಿದ್ದ ವಿಶಾಲವಾದ ಜನಪ್ರಿಯತೆಯನ್ನು ಕಳೆದುಕೊಳ್ಳುವುದಕ್ಕೆ ಸಿದ್ಧರಾದರೆಂದು. ಬೇಂದ್ರೆಯವರು ಅಡಿಗರ ಪ್ರತಿಭೆಯನ್ನು ಗುರುತಿಸಿದ್ದರು. “”ವರ್ಧಿಷ್ಣುವಾದ ಸವಿಮರ್ಶಕ ಕಾವ್ಯ ನಿರ್ಮಾಣೋತ್ಸಾಹದಲ್ಲಿ ಹಳೆಯದನ್ನು ಚೆಲ್ಲಿ ಹೊಸದನ್ನು  ಚಿಗುರಿಸುವ ಋತುವೈಭವವಿರುತ್ತದೆ” ಎಂದು ಅಡಿಗರ ಭಾವತರಂಗದ ಮುನ್ನುಡಿಯಲ್ಲಿಯೇ ಬೇಂದ್ರೆ ಹೇಳಿದ್ದರು.

Advertisement

“ಸವಿಮರ್ಶಕ ಕಾವ್ಯ ನಿರ್ಮಾಣೋತ್ಸಾಹ’ ಎನ್ನುವ ಇಲ್ಲಿನ ಮಾತು ಮಹಣ್ತೀದ್ದು. ಕಾವ್ಯ ನಿರ್ಮಾಣದ ಸೃಜನಕ್ರಿಯೆಯಲ್ಲಿ ವಿಮಶಾìಪ್ರಜ್ಞೆಯು ತನಗೆ ತಿಳಿಯದೇ ಬೆರೆತೇ ಇರುತ್ತದೆ critical insider ಎಂದು ಬೇರೆಯಾಗಿ ಹೇಳಬೇಕಾಗಿಯೇ ಇಲ್ಲವೆನಿಸುತ್ತದೆ. insider ಎಂದರೆ ಸಾಕು. insiderಗೆ ತಿಳಿದಿರುವುದು  ವಿಮರ್ಶೆಯ ಪರಿಭಾಷೆಯಲ್ಲಿ ಇಲ್ಲದಿದ್ದರೂ ಆ ತಿಳುವಳಿಕೆಯಲ್ಲಿ ವಿಮರ್ಶೆ ಸೇರಿಯೇ ಇದೆ. ಸೃಜನಕ್ರಿಯೆ ಎನ್ನುವುದೇ ಎಲ್ಲೋ ಚೆಲ್ಲಿದಂತಿರುವ ಹರಡಿಬಿದ್ದಂತಿರುವ ಭಾವದ ತುಣುಕುಗಳ ನಡುವಣ ಅಗೋಚರ ಸಂಬಂಧವನ್ನು ಬಗೆಯುವುದೇ ಅಲ್ಲವೆ? ವಿಮರ್ಶೆಯ ಅದೃಶ್ಯ ಹಾಜರಿ ಇಲ್ಲಿ ಇದ್ದೇ ಇದೆ. ಬೇಂದ್ರೆಯವರು ಹೇಳಿರುವ ಈ ಮಾತು ಕೂಡ ಬೇಂದ್ರೆಯವರ ಅನುಭವವೇ ಆಗಿದೆ ! ಬೆಳಗನ್ನು ಅದ್ಭುತವಾಗಿ ವರ್ಣಿಸಿ “ಇದು ಬರಿ ಬೆಳಗಲ್ಲೋ ಅಣ್ಣಾ’ ಎನ್ನುವುದು ವಿಮರ್ಶೆಯ ಮಾತಲ್ಲವೆ? ಆದರೂ ಅದು ಬೇರೆಯಾಗಿ ಕೇಳಿಸುತ್ತದೆಯೆ? ಕವನದೊಳಗಿನ ಮಾತಾಗಿಯೇ ಇಲ್ಲವೆ? ಬೇಂದ್ರೆ, ಅಡಿಗರನ್ನು ಮೆಚ್ಚಿದ್ದರು.

ಕಟ್ಟುವೆವು ನಾವು ಸಂಗ್ರಹಕ್ಕೆ ಮುನ್ನುಡಿ ಬರೆದ ಪು.ತಿ.ನ., ಮೋಹನ ಮುರಲಿಯ ಆ ಎರಡು ಸಾಲುಗಳನ್ನು- “”ಏನಿದೇನಿದು ಹೊರಳುಗಣ್ಣಿನ ತೇಲು ನೋಟದ ಸೂಚನೆ- ಯಾವ ಸುಮಧುರ ಯಾತನೆ ಯಾವ ದಿವ್ಯದ ಯಾಚನೆ” ಎಂಬ ಸಾಲುಗಳನ್ನುದ್ಧರಿಸಿ ಹೀಗೆ ಬರೆದರು. “”ಅನುರಕ್ತನಾದ ಸಂತನು ಇದ್ದಕ್ಕಿದ್ದ ಹಾಗೆಯೇ ವಿರಕ್ತನಾಗುವ ಬಗೆಯನ್ನು ಕಂಡು ದಿಗಿಲುಬಿದ್ದ ಪ್ರೇಯಸಿಯೇ ಕರುಣಾಕ್ರಂದನ ಈ ಗೀತದಲ್ಲಿ ಹೊಳಹು ಹಾಕಿದೆ. ಈ ದಿವ್ಯಗೀತೆಯನ್ನು ಬರೆದ ಕವಿ, ಕವಿಯಲ್ಲದಿದ್ದರೆ ಮತ್ತಾರು?” ಅಡಿಗರು ಎಷ್ಟು ಪ್ರಸಿದ್ಧರಾಗಿದ್ದರು ಎಂದು ಸೂಚಿಸುತ್ತಿದ್ದೇನೆ ಅಷ್ಟೇ. “ಹೊರಳುಗಣ್ಣಿನ ತೇಲು ನೋಟ’ದಲ್ಲಿ ಇದನ್ನು ಬರೆದ ಕವಿ, ಇದುವರೆಗಿನ ಕಾವ್ಯಮಾರ್ಗವನ್ನೇ ಬಿಟ್ಟು ಇನ್ನೊಂದು ದಿಕ್ಕಿಗೆ ಹೊರಳುತ್ತಿರುವ ಸೂಚನೆಯನ್ನು ಯಾರು ಊಹಿಸಲು ಸಾಧ್ಯವಿತ್ತು? ಅನುರಕ್ತನು ವಿರಕ್ತನಾಗುವುದನ್ನು ಪು.ತಿ.ನ. ಊಹಿಸಿದ್ದರು. ಅಂಥ ಊಹೆಗೆ ಪರಂಪರೆಯ ಹಿನ್ನೆಲೆ ಇತ್ತು.

“”ಹೊಸನೀರು ಇನ್ನೂ ಅವರನ್ನು ಹೊಗುತ್ತಲೇ ಇದೆ” ಎಂದು ಕಣಿ ನುಡಿದಂತೆ, ಏನನ್ನೋ ಅನಿರೀಕ್ಷಿತವನ್ನು ಊಹಿಸಿದಂತೆ ತನ್ನೆಲ್ಲ ಸೂಕ್ಷ್ಮತೆಯಿಂದ ಬೇಂದ್ರೆ ತಮ್ಮ ಮುನ್ನುಡಿಯಲ್ಲಿ ಹೇಳಿದರಾದರೂ ಈ ಮಾತನ್ನು ಬೆಳೆಸದೆ ಅಡಿಗರ ಕಾವ್ಯ ತನ್ನ ರಭಸದಂತೆ ಪ್ರಶಾಂತಿಯನ್ನೂ ಪಡೆಯಲಿ ಎಂದು ಹಿರಿಯ ಕವಿ ಸಹಜವಾಗಿ ಹಾರೈಸಿದರು. ಈ ಪ್ರಶಾಂತಿಯನ್ನು  ಪಡೆಯುವುದಕ್ಕೆ ಮಾತ್ರ; ಕಾವ್ಯ ಇನ್ನಷ್ಟು ಅಶಾಂತವಾಗಬೇಕಿತ್ತು. ಕ್ಷೋಭೆಗೊಳಗಾಗಬೇಕಿತ್ತು. ಹೊರಳುವಿಕೆಯ ಸೂಚನೆಯಲ್ಲಿ ಸುಮಧುರ ಯಾತನೆ ಎಂಬ ಮಾತಿದ್ದರೂ- ಅದು ಕಟು ಮಧುರ ಯಾತನೆಯೇ ನಿಜ. “ದಿವ್ಯದ ಯಾಚನೆ’ ಎಂಬ ಮಾತಿದ್ದರೂ ಅದು ನಿಜದಲ್ಲಿ ಮಣ್ಣಿನ ವಾಸನೆಯತ್ತ ತುಡಿಯುವ ಯಾಚನೆಯಾಗಿತ್ತು! ಮತ್ತು ಈ ತುಡಿತಕ್ಕಾಗಿ ಇರುವುದೆಲ್ಲವ ಬಿಟ್ಟು- ಕೊಡಬೇಕಾದ ದೊಡ್ಡ ಮನೋಸಿದ್ಧತೆಯನ್ನು ಗಳಿಸಿಕೊಳ್ಳುವ ಹಾದಿಯಲ್ಲಿತ್ತು! ಒಂದು ಹಾದಿಯಲ್ಲಿ  ನಡೆದು ಕೀರ್ತಿವಂತನಾದ ಕವಿ; ಆ ಕೀರ್ತಿ ಶರೀರವನ್ನೇ ಮರೆತು- “ಕೀರ್ತಿ ಶರೀರ’, “ಯಶಃ ಕಾಯೆ’ ಎಂಬ ನುಡಿಗಟ್ಟನ್ನು ಸೃಜಿಸಿದ ಪರಂಪರೆಯಲ್ಲಿ ಇದೆಷ್ಟು ಕಷ್ಟವೆಂದು ಬಲ್ಲವರೇ ಬಲ್ಲರು- ಹೊಸಹುಟ್ಟು ಪಡೆದುದಕ್ಕಾಗಿ ಅಡಿಗರು ಆದರಣೀಯರು. ಅಡಿಗರೇ ಒಂದೆಡೆ ಬರೆದಿದ್ದಾರೆ: “”ನಾನು ಹೊಸ ರೀತಿಯಲ್ಲಿ ಬರೆಯುತ್ತ ಅದನ್ನು ಜನ ಸ್ವೀಕರಿಸುವಂತೆ ಮಾಡಲು ಹೆಣಗುತ್ತ ಹೋದದ್ದರಿಂದ ಮೊದಮೊದಲು ಭಾರೀ ವಿರೋಧವನ್ನು ಎದುರಿಸಬೇಕಾಯಿತು.

ತಿರಸ್ಕರಿಸಿದರು. ಗೇಲಿ ಮಾಡಿದರು. ಪ್ರತಿಕ್ರಿಯೆಯಾಗಿ ಆಗಾಗ ನಾನು ಕೊಂಚ ಸೈರಣೆ ಕಳೆದುಕೊಂಡುದುಂಟು. ಅನೇಕ ಸಜ್ಜನರೂ ಕೂಡ ಈ ಹೊಸ ರೀತಿಯ ಕಾವ್ಯವನ್ನು ನೋಡಿ ಓದಿ ಹಳೆಯ ರೀತಿಯಲ್ಲೇ ಅರ್ಥಮಾಡಿಕೊಳ್ಳಲು ಬಯಸಿ ಸೋತು ಉಪೇಕ್ಷಿಸಿದ್ದೂ ಬಯ್ದದ್ದೂ ಸಹಜವೇ”. ಇವೆಲ್ಲವನ್ನು ಕವಿ ಊಹಿಸಿದ್ದರು ಮೊದಲೇ. ಊಹಿಸಿದಂತೆಯೇ ನಡೆಯಿತು. ಸ್ವಲ್ಪ ಹೆಚ್ಚಾಗಿಯೇ ನಡೆಯಿತು. ಆದರೆ ಕವಿ ಎದೆಗೆಡಲಿಲ್ಲ. ಅಡಿಗರೇ ಬರೆದಂತೆ: “”ಕಾವ್ಯ ನಿಜವಾಗಿಯೂ ನಮ್ಮ ಅಂತರಂಗ ಪ್ರಪಂಚಕ್ಕೆ ಸೇರಿದ್ದು; ಕೊನೆಗೊಳ್ಳುವ ಬದುಕಿಗಲ್ಲ. ಬಹುಶಃ ನಮ್ಮಲ್ಲಿ ಇರಬಹುದಾದ ಅಮರತ್ವದ ಅಂಶಕ್ಕೂ ಅದಕ್ಕೂ ಸಂಬಂಧವಿರಬೇಕು. (ಯಾಕೋ ಅಲ್ಲಮನ ಮಾತು “”ಆಯುಷ್ಯವು ಹಿರಿದು-ಭಾಷೆಯು ಕಿರಿದು” ಎಂಬ ಮಾತು ನೆನಪಾಗುತ್ತದೆ.) ಹಾಗಿಲ್ಲದಿದ್ದರೂ ಕಾವ್ಯ ನಮ್ಮ ಹಿಂದಿನಿಂದಲೂ ಬಂದಿದ್ದು, ಇಂದೂ ಇದ್ದು, ಮುಂದಕ್ಕೂ ಸಾಗುವಂಥ ವಿಶಾಲವಾದ ಮಾನವಜೀವನಕ್ಕೆ ಸಂಬಂಧಿಸಿದ್ದು. ಇದು ಕೇವಲ ಮುಂದಿನ ತಲೆಮಾರಿನವರಿಗಾಗಿ ಅಷ್ಟೇ ಅಲ್ಲ ; ಮುಂದಿನ ತಲೆಮಾರುಗಳಿಗಾಗಿಯೂ ಕೂಡ. ಹೊಗಳಿಕೆ, ತೆಗಳಿಕೆ, ಕಷ್ಟನಷ್ಟ, ಅನಾದರ, ಉಪೇಕ್ಷೆ , ತಿರಸ್ಕಾರ ಈ ಎಲ್ಲವನ್ನು ಮೀರಿ ನಿಲ್ಲಬಲ್ಲ ತಾಳ್ಮೆಯನ್ನು ಕಲಿತುಕೊಂಡು ಈ ಬದುಕಿನಲ್ಲಿ ಅಲ್ಲವಾದರೆ ಮುಂದೆ ತಾನು ಮೃತನಾದ ಮೇಲೆ ಯವುದಾದರೊಂದು ಕಾಲದಲ್ಲಿ ತನ್ನ ಕಾವ್ಯ ಸ್ವೀಕೃತವಾಗಿ ಸಫ‌ಲವಾಗುತ್ತದೆ ಎಂಬ ನಂಬಿಕೆಯಿಂದ ಬದುಕಲು ಕಲಿಯಬೇಕು” ಅಂದರೆ ತನ್ನ ಚಚಿsಛಿncಛಿನಲ್ಲಿಯೂ ತನ್ನ ಕಾವ್ಯ ಸಫ‌ಲವಾಗಬಹುದು. ಆಗಬೇಕಾದರೆ ಈಗಿನ ತನ್ನ ಟrಛಿsಛಿncಛಿ ಅನ್ನು ; ವ್ಯಕ್ತಿತ್ವವನ್ನು ಶೋಧಿಸಿಕೊಂಡೇ ತನ್ನ ಕಾವ್ಯವನ್ನು ಬರೆೆಯಬೇಕಾಗುತ್ತದೆ. ತನ್ನ ಕಾವ್ಯವನ್ನು ತಾನೇ ಹುಡುಕಿ ಪಡೆಯಬೇಕಾಗುತ್ತದೆ. ಇದೊಂದು ಹೊಸ ಹುಟ್ಟೇ ನಿಜ. ಮತ್ತೆ ಭವಭೂತಿಯ ನೆನಪಾಗುತ್ತದೆ. ತನ್ನ ಸಮಾನಧರ್ಮ ಎಂದಾದರೂ ಹುಟ್ಟಿ ಬಂದಾನು ಎಂದರೆ ಅದು ತಾನು ಈಗ ಪಡೆದ ಹೊಸಹುಟ್ಟಿನ ಕಾಣೆಯೇ ಆಗಿದೆ!

Advertisement

ಅಡಿಗರ ಅತ್ಯುತ್ತಮ ಭಾಷ್ಯಕಾರರಾದ ಅನಂತಮೂರ್ತಿಯವರ ಮಾತುಗಳಿವು: “”ಅಡಿಗರಂತೆ ಸತ್ತು ಮರುಹುಟ್ಟು ಪಡೆದ ಕನ್ನಡದ ಕವಿ ಇನ್ನೊಬ್ಬನಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ತಾನು ಪಡೆದಿದ್ದ ಮಾತಿನ ಗೇಯತೆಯನ್ನೂ ಅದರಿಂದ ಪಡೆದಿದ್ದ ಜನಾನುರಾಗವನ್ನೂ ತನ್ನ ಆವರೆಗಿನ ಒಟ್ಟು ವಾಕ್‌ಸಿದ್ಧಿಯನ್ನೂ ನಿರಾಕರಿಸಿ ಅವರು ತನಗೆ ತಾನೇ ಹೊಸಬರಾದರು. ವಾಗ್ಮಿಯಾದ ರಾಜಕಾರಣಿ ತನ್ನ ನೆರೆಯವನನ್ನು ಮೋಸ ಮಾಡಲು ಯತ್ನಿಸಿದರೆ, ಭಾವತಿರೇಕದ ಲಂಪಟ ಕವಿ ತನ್ನನ್ನೇ ವಂಚಿಸಿಕೊಳ್ಳುತ್ತಾನೆ. ಆದ್ದರಿಂದ ಓದುಗರನ್ನು ಪುಸಲಾಯಿಸುವ ಉದ್ದೇಶದ ಮಾತುಗಾರಿಕೆಯನ್ನು ಅಡಿಗರು ತ್ಯಜಿಸಿದರು. ಅಧ್ಯಯನಶೀಲನಾದ ಓದುಗ ತನ್ನ ಬರವಣಿಗೆಗೆ ಒದಗಿಬರುವಂತೆ ಪ್ರೇರೇಪಿಸುವ “ಉಪಾಯ’ವಾಗಿ ಕಾವ್ಯರಚನೆ ಮಾಡಿದರು”

ಮುಂದಿನ ತಲೆಮಾರಿಗೂ ಕವಿತೆಯು ಅರ್ಥಪೂರ್ಣವಾಗುವಂತೆ ಮಾಡುವ ಅಂಶವು ಒಂದು ಕವಿತೆಯಲ್ಲಿ ಹೇಗೆ ವ್ಯಕ್ತವಾಗುತ್ತದೆ? ಹಳೆಯದನ್ನು ಮತ್ತೆ ಯಾರೂ ಊಹಿಸಿರದ ರೀತಿಯಲ್ಲಿ ಉಜ್ವಲಗೊಳಿಸುವ ಮೂಲಕ ಅದು ವ್ಯಕ್ತವಾಗುತ್ತದೆ ಎನ್ನಬಹುದು. ಇದೊಂದು ಸೋಜಿಗ! ಉದಾಹರಣೆಗೆ ಅಡಿಗರ ಪ್ರಸಿದ್ಧವಾದ ಶ್ರೀರಾಮನವಮಿಯ ದಿವಸ ಎಂಬ ಕವನದ ಮೊದಲ ಚೌಪದಿಯನ್ನೇ ನೋಡಬಹುದು. ಅದು ಹೀಗಿದೆ:

“”ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ ಪನಿವಾರ ಕೋಸಂಬರಿ;
ಕರಬೂಜ ಸಿದೊಟುಗಳ ಹೋಳು, ಸೀಕರಣೆ
ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ”
ನಿಖರವಾದ ಒಂದು ಶ್ರೀರಾಮನವಮಿಯ ದಿವಸ ಏನು ನಡೆಯುತ್ತಿದೆ? “ರಾಮನಾಮಾಮೃತ’ ಎನ್ನುವ ರಮ್ಯ ಸಾಲೊಂದು ಇಣುಕುತ್ತಿದೆ. ನಿಜ. ಆದರೆ, ಅಮೃತದ ಉಲ್ಲೇಖ ಬಂದ ಮೇಲೆ ಉಳಿದ ತಿಂಡಿತೀರ್ಥಗಳ ಮಾತೇಕೆ? ಇಲ್ಲಾದರೋ ತಿಂಡಿತೀರ್ಥಗಳ ಹಣ್ಣುಹಂಪಲುಗಳ ಹೆಸರೆತ್ತಿದ ಆದುದರಿಂದಲೇ ಬಾಯಿ°àರು ಸುರಿಸುವ ದಟ್ಟ ಉಲ್ಲೇಖವಿದೆ. ಏಕೆಂದರೆ, ನಮಗಾದರೋ ಇವೇ ಅಮೃತಪ್ರಾಯವಾಗಿದೆಯಲ್ಲವೆ? ರಾಮನವಮಿಯ ದಿವಸ ಎಂದಾಗಲೂ ಇದೇ ನಮ್ಮ ನೆನಪು. ಇದೊಂದು ವ್ಯಂಗ್ಯವೆನ್ನಿ. ಆದರೆ, ಇದೇ ನಮ್ಮ ವರ್ತಮಾನ. ಅಂದರೆ ಇದೇ ನಮ್ಮ ಪಾಡು. ಅನುದಿನದ ಪಾಡು. ಇದಕ್ಕೆ ರಾಮನವಮಿಯ ದಿವಸವೂ ಹೊರತಲ್ಲ. ಈ ಪಾಡನ್ನು ಮರೆತು ಕವಿತೆ ರಾಮಭಜನೆಯ ಏಕತಾರಿ ಮೀಟದು ! ಮೀಟಿದರೆ, ಮೀಟುವುದು ಸುಲಭ ಮತ್ತು ಜನರಂಜಕ-ಆದರೆ ಹಾಗೆ ಮಾಡಿದರೆ ಕವಿತೆಯೇ ಸುಳ್ಳಾಗುತ್ತದೆ. ಹಾಗಾದರೆ ಮುಂದೇನು? ಈ ಪಾಡನ್ನು ದಾಟುವುದು ಹೇಗೆ? ಇದೇನು  ನಮ್ಮ ಪಾಡು ಎಂಬ ಚಿಂತೆಯಲ್ಲೇ ಹೊಸ ಹೊಳಹಿನ ಬೀಜವಿದೆ; ಇರಬಹುದು. ಆದುದರಿಂದಲೇ ನಮ್ಮ ಪಾಡನ್ನು ಮರೆಮಾಚಿ ನಮಗೆ ನಾವೇ ಸುಳ್ಳಾಗಬಾರದು. ಚಿಂತಿಸಿದರೆ, ವರ್ತಮಾನವೇ ಇನ್ನೊಂದು ರೀತಿಯಲ್ಲಿ ನಮ್ಮ ಮುಂದೆ ತೆರೆದುಕೊಳ್ಳಬಹುದು. ನಾಲ್ಕನೆಯ ಸಾಲು “ವ್ಯಕ್ತ ಮಧ್ಯ’ ಎಂಬ ಪದದಿಂದ ತೊಡಗಿದೆ. ಭಗವದ್ಗೀತೆಯಲ್ಲಿ ಈ ಪದ ಬಂದಿದೆ.

“ವ್ಯಕ್ತ ಮಧ್ಯ’ ಎಂಬ ಪದವನ್ನೇ ಅದೇ ಅರ್ಥದಲ್ಲಿ “ಭಾವ ಮಧ್ಯ’ ಎಂದು ಮಹಾಭಾರತದಲ್ಲಿ ಕರೆದುದುಂಟು. “ವ್ಯಕ್ತ ಮಧ್ಯ’ ಎಂದರೇನು ಎಂದು ಕೇಳುವಿರೋ? ವರ್ತಮಾನ-ಟrಛಿsಛಿnಠಿ ಎನ್ನುವುದನ್ನೇ ವ್ಯಕ್ತ ಮಧ್ಯವು ಸೂಚಿಸುವುದು. ಹಾಗೆ ಸೂಚಿಸುವಾಗ ಶಾಸ್ತ್ರೀಯವಾಗಿ ಸೂಚಿಸುವುದು. ಹೇಗೆಂದರೆ- ನಾವು ಹುಟ್ಟುವ ಮುನ್ನ ಎಲ್ಲಿದ್ದೆವು, ಏನಾಗಿದ್ದೆವು- ಅದು ಅವ್ಯಕ್ತ. ಸತ್ತಮೇಲೆ ಏನಾಗುವೆವು- ಅದೂ ಅವ್ಯಕ್ತ. ಹೀಗೆ ಈ ಎರಡು ಬಗೆಯ ಅವ್ಯಕ್ತಗಳ ನಡುವೆ ಈ ನಮ್ಮ ಬದುಕು ನಡೆದಿದೆಯಾಗಿ, ಬದುಕಿನ ಈ ವರ್ತಮಾನವನ್ನು “ವ್ಯಕ್ತ ಮಧ್ಯ’ ಎಂದು ಕರೆದಿದ್ದಾರೆ. ಹುಟ್ಟು-ಸಾವುಗಳ ನಡುವೆ ನಮ್ಮ ಅನುಭವಕ್ಕೆ ಬಂದ ನಡುವಣ ಅನುಭವವಿದು. ನಮಗೆ ಗೋಚರವಾದ್ದು ಇಷ್ಟೇ. ತಾಂತ್ರಿಕವಾಗಿ ಇಷ್ಟು ಪರಿಷ್ಕಾರವಾದ ಪದವಿದು. ಇರಬಹುದು. ಆದರೆ ಈಗೇಕೆ ಈ ಪದ? ಏಕೆಂದರೆ ತಿಂಡಿತೀರ್ಥಗಳ ಹಂಬಲದಲ್ಲಿ ಚಿಲ್ಲರೆಯಾಗಿ ಕಳೆದುಹೋಗುತ್ತಿದೆಯಲ್ಲ ವರ್ತಮಾನ? ಆದರೆ, ವರ್ತಮಾನದ ಮಹಣ್ತೀ ಇಷ್ಟೇ ಅಲ್ಲ. ವರ್ತಮಾನವು ಎರಡು ಅವ್ಯಕ್ತದೊಡನೆ ನಂಟನ್ನು ಹೊಂದಿದೆ. ಇದನ್ನು ಮಧ್ಯ ಎಂದು ಏಕೆ ಕರೆದರೆಂದರೆ, ನಡುವಿಗೆ ತುದಿ -ಬುಡಗಳ ನಂಟು ಯಾವಾಗಲೂ ಇದೆ ಎಂದು ಸೂಚಿಸಲು. ಆದುದರಿಂದಲೇ ಇದು ವ್ಯಕ್ತ ಮಧ್ಯ. ವರ್ತಮಾನವನ್ನು ವ್ಯಕ್ತಮಧ್ಯವಾಗಿ ನೋಡಿದಾಗ ಮಾತ್ರ ಇದರ ಮಹಣ್ತೀ ತಿಳಿಯುವುದು.

ಅಂದರೆ, ಅವ್ಯಕ್ತದ ಅರಿವನ್ನು ಪಡೆಯುವ ಸಾಧ್ಯತೆ ವ್ಯಕ್ತಮಧ್ಯಕ್ಕೆ ಯಾವಾಗಲೂ ಇದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ- ಅವ್ಯಕ್ತವು ತನ್ನಲ್ಲಿ ಪ್ರಕಟಗೊಳ್ಳುವುದನ್ನು ಈ ವ್ಯಕ್ತವಾದ ಬದುಕು ಕಾದುಕೊಂಡಿದೆ ಎನ್ನಬಹುದು. ಶಬರಿ ರಾಮನಿಗೆ ಕಾದಂತೆ! ಈ ಕಾಯುವಿಕೆಯಿಂದಾಗಿಯೇ ಶಬರಿ-ರಾಮ ಭೇಟಿಯಾದ ದಿವಸವೇ ನಿಜವಾದ ಶ್ರೀರಾಮನವಮಿ ದಿವಸ. ಶಬರಿ ರಾಮನಿಗೆ ಹಣ್ಣುಗಳನ್ನು ನೀಡಿದಳಂತೆ. ನಿನಗಾಗಿ ಈ ಜೀವ ಇಷ್ಟು ದಿನ ಕಾದುಕೊಂಡಿತ್ತು ಎಂದಳಂತೆ. ನೋಡಿಯಾಯಿತು, ಇನ್ನು ಆರಾಮವಾಯಿತು. ಆತ್ಮಾರಾಮವಾಯಿತು. ವ್ಯಕ್ತ ಮಧ್ಯದ ಅವಧಿ ಮುಗಿಯಿತು. ಇನ್ನು ಅವ್ಯಕ್ತಕ್ಕೆ ಸಲ್ಲುವ ಹೊತ್ತು ಬಂತು ಎನ್ನುತ್ತ, ಬೆಂಕಿಯನ್ನು ಹೊಕ್ಕು ಉರಿದುಬಿಟ್ಟಳಂತೆ.

ಕವಿತೆಯ ನಾಲ್ಕನೆಯ ಸಾಲು ವರ್ತಮಾನವನ್ನು ಯಾವುದೋ ಸಾರ್ಥಕ ಕ್ಷಣಕ್ಕಾಗಿ ಕಾಯುತ್ತಿರುವ ಕಾಲವೂ ಹೌದು ಎಂದು ಇನ್ನೊಂದು ನೆಲೆಗೆ ಒಯ್ಯುತ್ತದೆ. ವ್ಯಕ್ತ ಮಧ್ಯ ಎಂದ ಸಾರ್ಥಕವಾದ ಪದಕ್ಕಾಗಿ ಕವಿತೆಯೂ ಕಾಯುತ್ತಿತ್ತು ಎಂದೂ ಧ್ವನಿಸುತ್ತದೆ. ಮೊದಲ ನಾಲ್ಕು ಸಾಲು ಕವಿತೆಯ ಮುಂದಿನ ಬೆಳವಣಿಗೆಗಾಗಿ ಒಂದು ಚಿಮ್ಮುಹಲಗೆಯಂತೆ ಒದಗಿಬರುತ್ತಿದೆ.

ಕವಿತೆಯನ್ನು ಇಡಿಯಾಗಿ ನಾನು ವಿಶ್ಲೇಷಿಸ ಹೊರಡುವುದಿಲ್ಲ. ಅದು ಇಲ್ಲಿ ನನ್ನ ಉದ್ದೇಶವಲ್ಲ. ಎಲ್ಲ ಕಾಲಗಳನ್ನೂ ಬೆಸೆಯುವ ಪ್ರಯತ್ನದಲ್ಲಿ ಕವಿತೆ ಪಡೆಯಬಹುದಾದ ಜೀವಂತಿಕೆಯೊಂದೇ ಕವಿಗೆ ಮುಖ್ಯ ಎನ್ನುವ ಅಡಿಗರ ಶ್ರದ್ಧೆಯನ್ನು ಸೂಚಿಸುತ್ತಿದ್ದೇನೆ ಅಷ್ಟೆ. ಆಯುಷ್ಯವು ಹಿರಿದು-ಭಾಷೆಯು ಕಿರಿದು ಎನ್ನುವ ಅಲ್ಲಮನ ಮಾತನ್ನು ಮತ್ತೆ ನೆನೆದರೆ, ಹಿರಿಯ ಆಯುಷ್ಯದ ನಡುವೆ ಕಿರಿಯ ಭಾಷೆಯು ಸುತ್ತಿಸುಳಿದು ಅನುಭವಗಳನ್ನು ಹೇಗೆ ಹೆಣೆಯಬಹುದು ಎನ್ನುವುದನ್ನು ಅಡಿಗರು ತೋರಿಸುತ್ತಿದ್ದಾರೆ ಎನ್ನಬಹುದು!

ಕಾಲಗಳನ್ನು ಬೆಸೆಯುತ್ತ ಹೋದಂತೆ, ಕವಿಗೆ ತನ್ನ ಪ್ರಾಚೀನತೆಯ ದರ್ಶನವಾಗಬಹುದು. ತಾನು ಎಲ್ಲರಿಂದಲೂ ಹಳಬನೆನ್ನುವ ದರ್ಶನ ಆಗಬಹುದು. ಆಗ ದೇವರೆಂಬ ಕಲ್ಪನೆ ಕೂಡ ಕಾಲದಲ್ಲಿ ಈಚೆಗೆ ಮೂಡಿಬಂದ ಎಳೆಯ ಕಲ್ಪನೆ ಎಂಬಂತೆ ತೋರಿ, ದೇವರು ತನ್ನ ಮುಂದೆ ಆಡುತ್ತಿರುವ ಎಳೆಯ ಮುಗ್ಧ ಎನ್ನುವ ಭಾವ ಉಂಟಾಗಬಹುದು. ಬಸವಣ್ಣನವರ ಅಂಥದೊಂದು ವಚನವಿದೆ: 

“”ಕಾಳಿಯ ಕಂಕಾಳದಿಂದ ಮುನ್ನ
ಹರಿ ವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ ಮುನ್ನ ಮುನ್ನ
ಅಂದಂದಿಗೆ ಎಳೆಯ ನೀನು; ಹಳೆಯ ನಾನು
ಮಹಾದಾನಿ ಕೂಡಲ ಸಂಗಮದೇವಾ”
ಕಾಳಿಯ ಕಂಕಾಳ ಇತ್ಯಾದಿ ಪುರಾಣಗಳನ್ನೆಲ್ಲ ದಾಟಿ ಹಿಂದೆ ಹೋದರೆ- ಮುನ್ನ ಮುನ್ನ ಮುನ್ನ ಎಂದು ಮೂರು ಸಲ ಒತ್ತಿ ಹೇಳುವರು ಬಸವಣ್ಣ- ಏನಿತ್ತು ಆ ಪೂರ್ವಕಾಲದಲ್ಲಿ? ಅಲ್ಲಿ ಎಳೆಯ ಮುಗ್ಧತೆಯೊಂದಿತ್ತು. ಇದನ್ನು ಮುಗ್ಧತೆ ಎಂದು ಗುರುತಿಸಿದ ಇನ್ನೊಂದು ಹಳೆಯ ಜೀವವಿತ್ತು. ನಾನು ಆ ಹಳೆಯ ಮನುಷ್ಯ; ನೀನು ನನ್ನ ಕಣ್ಣಮುಂದಿನ ಎಳೆಯ ಮುಗ್ಧ ಎಂದು ಕೂಡಲ ಸಂಗನಿಗೆ ಬಸವಣ್ಣ ಹೇಳುವರು. ಹಿಂದಕ್ಕೆ ನಡೆದರೆ ಎಳೆ ಮುಗ್ಧತೆಯನ್ನು ನೋಡುವಲ್ಲಿಯವರೆಗೆ ನಡೆಯಬೇಕೋ ಏನೋ! ಮತ್ತು ಎಳೆಯನನ್ನು ಕಂಡಾಗ ತಾನು ಹಳೆಯನೆನ್ನುವ ಭಾವ ಉಂಟಾಗಿ, ತಾನು ಎಲ್ಲ ಕಾಲಗಳಲ್ಲೂ ಇದ್ದವನು ಎಂಬ ಅರಿವಾಗಿ ಎಲ್ಲ ಕಾಲಗಳನ್ನೂ ಭಾಷೆಯಲ್ಲಿ ಬೆಸೆಯಲಾಗುವುದೋ ಏನೋ! ಬಸವಣ್ಣನವರ ವಚನದ ಪ್ರಸ್ತಾವವೇಕೆಂದರೆ ಈ ವಚನಕ್ಕೆ cಟnಠಿrಚsಠಿ ಆಗಿಯೂ ಸಂವಾದಿಯಾದಂತೆ ಇರುವ, ಭಿನ್ನವಾಗಿಯೂ ಹತ್ತಿರವಿರುವ ಅಡಿಗರ ಪದ್ಯವನ್ನು ನೆನಪಿಸಲು. ಕವಿತೆಯ ಹೆಸರು ನನ್ನ ಅವತಾರ ಎಂದು. ಈ ಕವಿತೆಯಲ್ಲಿ ತಾನು ರಾಮ; ಕೃಷ್ಣ ; ಬುದ್ಧ ; ಗಾಂಧಿಯವರ ಜೊತೆಗೆ ಇದ್ದೆ ಎನ್ನುತ್ತಾರೆ. ಅವರ ಬಳಿಯಲ್ಲೇ ಇದ್ದೆ; ಅವರಂತೆಯೇ ಬಾಲ್ಯ ತುಂಟಾಟ, ಯೌವನಗಳನ್ನೆಲ್ಲ ಅನುಭವಿಸಿದೆ ಎನ್ನುತ್ತಾರೆ. ಅವರ ಮಾತುಗಳನ್ನು ಕೇಳುತ್ತಲೇ ಬೆಳೆದವನು ತಾನು; ಆದರೆ ನಾನು ನಿಜವಾಗಿ ಬೆಳೆಯಲೇ ಇಲ್ಲ; ನನ್ನ ಮನ ಅರಳಲೇ ಇಲ್ಲ ಎನ್ನುತ್ತಾರೆ.

“”ನಾನು ಅವನು ಒಂದೆ ಲೋಹ
ಕಬ್ಬಿಣ-ಕರಿಕಬ್ಬಿಣ
ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ”
ಈ ಕವಿತೆ ಅಡಿಗರ ಉತ್ತಮ ಕವಿತೆಗಳಲ್ಲಿ ಒಂದು ಎಂದಲ್ಲ. ಆದರೆ, ರಾಮನಂಥವರನ್ನು ನೋಡಿ ಅವರ ವಿಕಾಸವನ್ನು ಕಂಡು ಚಕಿತಗೊಂಡರೂ ಅವರ ಬಳಿಯೇ ಇದ್ದ ತನ್ನಂಥವರ ವೈಫ‌ಲ್ಯವೂ ಇನ್ನೊಂದು ರೀತಿಯಲ್ಲಿ ಆಶ್ಚರ್ಯವೇ ಎನ್ನುತ್ತದೆ ಕವಿತೆ. ಮುನ್ನ ಮುನ್ನ ಮುನ್ನ ಎಷ್ಟು ನಡೆದರೂ ಅದು ವೈಫ‌ಲ್ಯ ಮೂಲವನ್ನೇ ಅರಸಿದಂತಾಗಬಹುದು! ಕಾಲವನ್ನು ಬೆಸೆಯಬೇಕು ನಿಜ. ಆದರೆ ಕಾಲವನ್ನು ಬೆಸೆಯುವುದು ಎಲ್ಲದಕ್ಕೂ ಪರಿಹಾರ ಎಂಬ ಪೂರ್ವ ನಿರ್ಣಯವೂ ಸರಿಯಲ್ಲ ಎನ್ನುತ್ತದೆ ಕವಿತೆ. ಇದು ಆಧುನಿಕ ನಿಲುವು.

ಲಕ್ಷ್ಮೀಶ ತೋಳ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next