ಹಠಕ್ಕೆ ಬಿದ್ದು ಪ್ರೀತಿಸಿದವನನ್ನೇ ಮದುವೆಯಾದವಳಿಗೆ, ಈಗ ಸಂಸಾರದಲ್ಲಿ ವೈರಾಗ್ಯ ಬಂದಂತಾಗಿದೆ. ಇತ್ತೀಚೆಗೆ, ಇವಳು ಯಾವುದೋ ಕಾರಣಕ್ಕೆ ಅತ್ತೆಗೆ ಎದುರುತ್ತರ ಕೊಟ್ಟಿದ್ದಕ್ಕೆ, ಅವರು ಅಳುತ್ತಾ ಕುಳಿತಿದ್ದಾರೆ. ಆಗ ಗಂಡ, ಅಮ್ಮನ ಬಳಿ ಸಾರಿ ಕೇಳು ಎಂದು ಒತ್ತಾಯಿಸಿದ್ದಾನೆ. ಮಾಡದಿದ್ದ ತಪ್ಪಿಗೆ ಅವರು ಬೈದರೆ, ತಾನ್ಯಾಕೆ ಕ್ಷಮೆ ಕೇಳಬೇಕು ಎಂದು ಆಕೆ ವಾದಿಸಿದ್ದಾಳೆ. ಅವನು ತಾಳ್ಮೆಗೆಟ್ಟು ಕೆನ್ನೆಗೆ ಎರಡೇಟು ಹಾಕಿದ್ದಾನೆ. ಆನಂತರದಲ್ಲಿ ಇವಳಿಗೆ ಅವರ ಮನೆಯೇ ಬೇಡವೆನಿಸಿ, ಡೈವೋರ್ಸ್ ಬೇಕು ಎಂದಿದ್ದಾಳೆ.
ಹೆಂಡತಿಯ ಕುಗ್ಗಿದ ಮನಃಸ್ಥಿತಿ ನೋಡಿ, ಅವನೇ ಕೌನ್ಸೆಲಿಂಗ್ ಗೆ ಕರೆದು ತಂದಿದ್ದ. ಕಾಲೇಜಿಗೆ ಚಕ್ಕರ್ ಹೊಡೆದು, ಬೈಕಿನಲ್ಲಿ ಹೊರಟುಬಿಟ್ಟರೆ, ಪ್ರೇಮವೆಂಬ ಭ್ರಮಾ ಪ್ರಪಂಚದಲ್ಲಿ ಅದೆಷ್ಟು ಆತ್ಮವಿಶ್ವಾಸ! ಒಂದು ದಿನ ನೋಡದಿದ್ದರೆ ಸತ್ತೇ ಹೋಗುವಷ್ಟು ಚಡಪಡಿಕೆ. ಮುಂದೆ ಮದುವೆಯಾಗಲು ಸಾಧ್ಯ ವಾಗದಿದ್ದರೆ, ಎಂಬ ಭಯ. ಜೀವಮಾನ ದಲ್ಲಿ ಮುಗಿಯದಷ್ಟು ಪ್ರೀತಿಯ ಧಾರೆ ಹರಿಸಿ, ಮನೆಯವರ ವಿರೋಧವನ್ನು ಲೆಕ್ಕಿಸದೆ ಮದುವೆಯಾಗಿದ್ದ ಜೋಡಿ ಅದು.
ಈ ಪರಿ ಲವ್ ಮಾಡಿದವರು, ಮದುವೆಯ ನಂತರ ಅಸುಖೀಗಳಾಗಿ ಕಿತ್ತಾಡುವುದೇಕೆ ಎಂದು ತಿಳಿಯಲು, ಅಧ್ಯಯನ ಮಾಡಬೇಕಾಗುತ್ತದೆ. ಪ್ರೀತಿ ಎನ್ನುವ ಸ್ವೇಚ್ಛೆಯಲ್ಲಿದ್ದವರಿಗೆ, ಮದುವೆ ಎಂಬ ಜವಾಬ್ದಾರಿಗೆ ಹೊಂದಿ ಕೊಳ್ಳಲು ಸಮಯ ಕೊಡಬೇಕು. ಅದು ಬಿಟ್ಟು, ಭಾನುವಾರಗಳಂದು ನೆಂಟರನ್ನು ಊಟಕ್ಕೆ ಕರೆದು, ಸೊಸೆಯನ್ನು ಕೆಲಸಕ್ಕೆ ಹಚ್ಚಿದರೆ? ನೆಂಟರ ವೇಷದಲ್ಲಿ ಬಂದವರು- “ನಿನ್ನನ್ನು ವರದಕ್ಷಿಣೆಯಿಲ್ಲ ದೆ ಮದುವೆಯಾಗಿರೋದೇ ಹೆಚ್ಚು’ ಎಂಬ ಧೋರಣೆ ತಳೆದು ಮಾತಾಡಿದರೆ… ಆ ಮನೆಗೆ ಬಂದ ಹೆಣ್ಣಿನ ಕಲ್ಪನಾಸೌಧ ಕುಸಿಯುತ್ತದೆ.
ಎಲ್ಲಾ ಆತ್ತೆಯಂದಿರೂ ಉದಾರಿಗಳಲ್ಲ. ಕೆಲವರಿಗೆ ನಿಜಕ್ಕೂ ಪ್ರಳಯಾಂತಕ ಬುದ್ಧಿ ಇರುತ್ತದೆ. (ಕೆಲವರು ನಿಜಕ್ಕೂ ಒಳ್ಳೆಯವರಿರುತ್ತಾ ರೆ) ನವ ದಂಪತಿಗೆ ಕೆಲವರು ಏಕಾಂತದ ಸುಖವನ್ನೂ ಕಲ್ಪಿಸಿಕೊಡುವುದಿಲ್ಲ. ಕಾಫಿ ಕೊಡುವ ನೆಪದಲ್ಲಿ ಕೋಣೆಗೆ ಬಂದವರು, ಎದ್ದೇ ಹೋಗುವುದಿಲ್ಲ. ಅವನಿಗೆ, ಕಾಫಿ ತಂದುಕೊಟ್ಟ ತಾಯಿಯ ಮೇಲೆ ಅಭಿಮಾನ. ಆದರೆ, ಇವಳು ಗಂಡನ ಜೊತೆ ಸರಸ ತಪ್ಪಿತಲ್ಲಾ ಎಂದು ಕುದಿಯುತ್ತಾಳೆ. ಪ್ರೀತಿ ಎನ್ನುವ ಅಫಿಮು ಸಿಗದೇ, ಸೊಸೆ ರೆಬೆಲ್ ಆಗಿ ಒಂಟಿತನ ಅನುಭವಿಸುತ್ತಾಳೆ.
ತನ್ನ ಪ್ರೀತಿಯ ವಿಚಾರವನ್ನು ತಾಯಿ ಒಪ್ಪಿಬಿಡುತ್ತಾಳಲ್ಲ; ಆ ಹೊತ್ತಿನಲ್ಲಿ ತಾಯಿಯ ಉದಾರ ಮನಸ್ಸಿಗೆ ಮಗ ಮಾರು ಹೋಗುತ್ತಾನೆ. ಅವನಿಗೆ ತಾಯಿಯ ದೊಡ್ಡತನದ ಬಗ್ಗೆ ಗರ್ವಭಾವ. ಸೊಸೆಯ ಬಗ್ಗೆ ಆಕೆಯಲ್ಲಿ ಅಸೂಯೆ ಮೂಡಬಹುದೆಂದು ಆತ ಯೋಚಿಸಲಾರ. ಹಾಗಾಗಿ, ತಾಯಿಯ ಬಗ್ಗೆ ದೂರು ಹೇಳಿದಷ್ಟೂ, ಆತ ಹೆಂಡತಿಯಿಂದ ದೂರವಾಗುತ್ತಾ ನೆ. ಹೆಂಡತಿ ಚಿಕ್ಕವಳು, ಆಕೆಯೇ ಮೊದಲು ಕ್ಷಮೆ ಕೇಳಬೇಕು ಎಂಬ ಜಿದ್ದಿನಲ್ಲಿರುತ್ತಾನೆ. ಸಮಸ್ಯೆ ಉಲ್ಬಣವಾಗುವುದು ಆಗಲೇ. ಆಪ್ತ ಸಮಾಲೋಚನೆಯ ನಂತರ, ಇಬ್ಬರೂ ಸಂಬಂಧಗಳ ಹಂದರವನ್ನು ಅರ್ಥಮಾಡಿಕೊಂಡರು.
ಮನೆಯ ಮಹಿಳೆಯರ ಚೂಪುಗಾರಿಕೆ ತಿಳಿದ ಮೇಲೆ, ಎಲ್ಲರನ್ನೂ, ಎಲ್ಲವನ್ನೂ ನಿಭಾಯಿಸುವ ಹೊಣೆಗಾರಿಕೆಯನ್ನು ಆತ ಅರಿತುಕೊಂಡ. ಅತ್ತೆಯ ಇಗೋ ಸರಿ ಮಾಡಲು, ಅವಳು ಕ್ಷಮಾಪಣೆ ಕೇಳುವುದಾಗಿ ಒಪ್ಪಿಕೊಂಡಳು. ಆ ಸಂದರ್ಭ ಮರುಕಳಿಸದ ಹಾಗೆ ನೋಡಿಕೊಳ್ಳುತ್ತೇನೆಂಬ ಆಶ್ವಾಸನೆಯನ್ನು ಅವನು ನೀಡಿದ. ಸುಮಧುರ ಸಂಬಂಧಗಳ ಬೆಸುಗೆ, ದೇಹದ ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ಎಲ್ಲರೂ ಒಗ್ಗಟ್ಟಿನಲ್ಲಿ ಇದ್ದಾಗ, ಬದುಕು ಬಂಗಾರವಾಗುತ್ತದೆ.
* ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ