ಮೈಸೂರು: ನಗರದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಗೋಮಾಂಸ ಸೇವನೆ ಮಾಡಿದ್ದ ಸಂಘಟನೆಯೊಂದರ ಕ್ರಮಕ್ಕೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೆ ಕಾರ್ಯಕ್ರಮದ ಆಯೋಜಕರು ಹಾಗೂ ಸಭಾಂಗಣದ ಉಸ್ತುವಾರಿಗಳಿಗೆ ಜಿಲ್ಲಾಡಳಿತದ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಚಾರ್ವಾಕ ಸೋಷಿಯಲ್ ಅಂಡ್ ಕಲ್ಚರಲ್ ಟ್ರಸ್ಟ್, ಎವಿಎಸ್‌ಎಸ್ ಸಂಸ್ಥೆ ವತಿಯಿಂದ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ್ದ ಆಹಾರದ ಹಕ್ಕು-ವ್ಯಕ್ತಿ ಸ್ವಾತಂತ್ರ್ಯ ವಿಷಯ ಕುರಿತ ಸಂವಾದ ಕಾರ್ಯಕ್ರಮದ ಉದ್ಘಾಟನೆಗೆ ಗೋಮಾಂಸವನ್ನು ಬಳಸುವ ಜತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೂ ಸಹ ಸೇವನೆ ಮಾಡಲು ಗೋಮಾಂಸವನ್ನು ನೀಡಲಾಗಿತ್ತು.
ಸಂಘಟನೆಯ ಈ ಕ್ರಮಕ್ಕೆ ಬಿಜೆಪಿ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಅನುಮತಿ ಇಲ್ಲದೆ ಕಾರ್ಯಕ್ರಮದಲ್ಲಿ ಗೋಮಾಂಸ ಸೇವನೆ ಮಾಡಿದ್ದಕ್ಕೆ ಕಾರ್ಯಕ್ರಮ ಆಯೋಜಕರು ಮತ್ತು ಸಭಾಂಗಣದ ಉಸ್ತುವಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸರ್ಕಾರದ ಯಾವುದೇ ಸಭಾಂಗಣದಲ್ಲಿ ಗೋಮಾಂಸ ಸೇರಿದಂತೆ ಯಾವುದೇ ಮಾಂಸಾಹಾರ ಸೇವನೆ ಅಥವಾ ಬಡಿಸುವಂತಿಲ್ಲ.
ಹೀಗಿದ್ದರೂ ಕಾರ್ಯಕ್ರಮದ ಉದ್ಘಾಟನೆಗೆ ಗೋಮಾಂಸ ಬಳಕೆ ಮಾಡಿದ್ದಲ್ಲದೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೂ ಸಹ ಇದನ್ನು ಬಡಿಸಲಾಗಿದೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಕಲಾಮಂದಿರದ ಮನೆಯಂಗಳದಲ್ಲಿ ಗೋಮಾಂಸ ಸೇವಿಸಿದ್ದು, ಕಾನೂನಿನ ಉಲ್ಲಂಘನೆಯಾಗಿದೆ. ಹೀಗಾಗಿ ಸಂಬಂಧಪಟ್ಟ ಸಂಸ್ಥೆಯವರಿಗೆ ಜಿಲ್ಲಾಡಳಿತದಿಂದ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.
ಬ್ಲಾÂಕ್‌ಲಿಸ್ಟ್‌ಗೆ ಸೇರ್ಪಡೆ: ಚಾರ್ವಾಕ ಸಂಸ್ಥೆಯವರು ಮೂರು ದಿನಗಳ ಕಾರ್ಯಕ್ರಮ ನಡೆಸಲು ಆನ್‌ಲೈನ್ ಮೂಲಕ ಮನೆಯಂಗಳ ಸಭಾಂಗಣವನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಕೊನೆ ದಿನದ ಕಾರ್ಯಕ್ರಮದಲ್ಲಿ ಗೋಮಾಂಸ ಸೇವನೆ ಮಾಡಿರುವುದು, ಕಾನೂನು ಉಲ್ಲಂಘನೆಯಾಗಿದೆ. ಈ ಹಿನ್ನೆಲೆಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮವಹಿಸುವ ಜತೆಗೆ ಸಂಬಂಧಪಟ್ಟ ಸಂಸ್ಥೆಯನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ ಮುಂದೆ ಕಾರ್ಯಕ್ರಮ ನಡೆಸದಂತೆ ಕ್ರಮಕೈ ೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪತಿಳಿಸಿದ್ದಾರೆ.
ಗಂಜಲ ಸಿಂಪಡಿಸಿ ಸ್ವಚ್ಛಗೊಳಿಸಿದರು: ಕಲಾಮಂದಿರದ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಮಾಂಸ ಸೇವನೆ ಮಾಡಿದ್ದ ಚಾರ್ವಾಕ ಸಂಸ್ಥೆಯ ಕ್ರಮ ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮ ನಡೆದ ಸಭಾಂಗಣವನ್ನು ಗಂಜಲಹಾಕಿ ಸ್ವಚ್ಛಗೊಳಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಲಾಮಂದಿರದಲ್ಲಿ ಜಮಾಯಿಸಿದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಲಾಮಂದಿರದ ಮುಖ್ಯದ್ವಾರ, ಮನೆಯಂಗಳ ಸಭಾಂಗಣಕ್ಕೆ ಗೋ ಮೂತ್ರವನ್ನು ಮಾವಿನ ಸೊಪ್ಪಿನಿಂದ ಪ್ರೋಕ್ಷಣೆ ಮಾಡುವ ಮೂಲಕ ಸ್ವಚ್ಛಗೊಳಿಸಿ, ಪ್ರತಿಭಟನೆ ನಡೆಸಿದರು.
ಇದೇ ವೇಳೆ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ, ಮಾಂಸಾಹಾರ ಸೇವನೆಗೆ ಅವಕಾಶ ನೀಡಿದ್ದನ್ನು ಖಂಡಿಸಿದ ಪ್ರತಿಭಟನಾಕಾರರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪರ ವಿರುದ್ಧ ಹರಿಹಾಯ್ದರಲ್ಲದೆ, ಅವರೊಂದಿಗೆ ವಾಗ್ವಾದ ನಡೆಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಅಷ್ಟರಲ್ಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.