ಉಡುಪಿ: ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಹೆಚ್ಚಿಸುವಂತೆ ಮತ್ತು ಬಾಕಿ ಇರುವ ತುಟ್ಟಿ ಭತ್ತೆ ನೀಡಬೇಕೆಂದು ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ ಒತ್ತಾಯಿಸಿದರು.
ನಗರದ ಬೋರ್ಡ್ ಹೈಸ್ಕೂಲ್‌ನಿಂದ ಭಾರತ್ ಬೀಡಿ ವರ್ಕ್ಸ್ ವರೆಗೆ ಸಿಐಟಿಯುನಿಂದ ಶನಿವಾರ ನಡೆದ ಪ್ರತಿಭಟನ ಮೆರವಣಿಗೆ ಸಭೆಯಲ್ಲಿ ಅವರು ಮಾತನಾಡಿದರು.
ಸಿಐಟಿಯು, ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಹೆಚ್ಚಿಸಬೇಕೆಂದು ಒತ್ತಾಯಿಸಿದ ಮೇರೆಗೆ ಮಾಲಕರು, ಕಾರ್ಮಿಕರು ಮತ್ತು ಸರಕಾರದ ಪ್ರತಿನಿಧಿಗಳಿರುವ ಕನಿಷ್ಠ ವೇತನ ಸಲಹಾ ಮಂಡಳಿಯು ಎ. 1ರಿಂದ 1 ಸಾವಿರ ಬೀಡಿ ಕಟ್ಟುವುದಕ್ಕೆ ತುಟ್ಟಿ ಭತ್ತೆ ಸೇರಿ 220.52 ರೂ. ಕೂಲಿ ನೀಡಬೇಕೆಂದು ಆದೇಶ ಹೊರಡಿಸಿದೆ. ಆದರೂ ಕಳೆದೆರಡು ತಿಂಗಳಿನಿಂದ ಹೊಸ ವೇತನ ಜಾರಿಗೊಳಿಸದೆ ಹಿಂದೆ ನೀಡುತ್ತಿದ್ದ ಕೂಲಿ ಮಾತ್ರ ನೀಡಲಾಗುತ್ತಿದೆ. ಅಲ್ಲದೆ 12.75 ರೂ. ಬಾಕಿ ಇರಿಸಿಕೊಂಡಿರುವುದು ನ್ಯಾಯಸಮ್ಮತವಲ್ಲ ಎಂದರು.
ಬೀಡಿ ಮಾಲಕರ ಸಂಘದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತ್ ಬೀಡಿ ವರ್ಕ್ಸ್ ರಾಜ್ಯ ಸರಕಾರದ ಕಾರ್ಮಿಕ ಸಚಿವರ ಮೇಲೆ ಪ್ರಭಾವ ಬೀರಿ ಹೆಚ್ಚುವರಿ ತುಟ್ಟಿ ಭತ್ತೆ ನೀಡುವಂತೆ ಆದೇಶ ತಂದಿದ್ದರೂ, ಇದುವರೆಗೆ ತುಟ್ಟಿ ಭತ್ತೆ ನೀಡಿಲ್ಲ. ಇದರಿಂದಾಗಿ 800 ಬೀಡಿ ಕಟ್ಟುವ ಕಾರ್ಮಿಕರಿಗೆ ಈ ವರೆಗೆ 9,000 ರೂ.ಗೂ ಹೆಚ್ಚು ಹಣ ಬಾಕಿ ಇರಿಸಿಕೊಂಡಂತಾಗುತ್ತದೆ ಎಂದವರು ತಿಳಿಸಿದರು.
ಸಿಐಟಿಯು ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಲಕ್ಷ್ಮಣ ಕೆ., ಸಿಐಟಿಯು ಮುಖಂಡರಾದ ಕವಿರಾಜ, ಕೆ. ಶಂಕರ್, ಎಚ್. ವಿಟuಲ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ, ಸುಗಂಧಿ, ನಳಿನಿ ಮಲ್ಪೆ, ಬೀಡಿ ಕಾರ್ಮಿಕರು ಉಪಸ್ಥಿತರಿದ್ದರು.