ಬೀದರ: ಜನಪದ ನಮ್ಮ ಸಂಸ್ಕೃತಿಯ ಬೇರು. ಹಾಗೆಯೇ ಜಾನಪದ ವಿಶಿಷ್ಟ ಸಾಹಿತ್ಯದ ಬೇರು. ಭಾರತ ಜಾನಪದ ಸಾಹಿತ್ಯದ ತೊಟ್ಟಿಲು ಎಂದು ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ, ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ರಾಣಿ ಸತ್ಯಮೂರ್ತಿ ಬಣ್ಣಿಸಿದರು.
ನಗರದ ಕರ್ನಾಟಕ ಸಾಹಿತ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಜನಪದ ಸಾಹಿತ್ಯ ಉತ್ಸವ ಮತ್ತು ಎರಡನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಪದರು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಬದುಕಿರಲಿಲ್ಲ. ಸಮಷ್ಠಿಯ ಹಿತವನ್ನು ಕಾಪಾಡಲು ಜೀವದ ಹಂಗು ತೊರೆದ ಅನೇಕ ನಿದರ್ಶನಗಳನ್ನು ಜಾನಪದ ಸಾಹಿತ್ಯದಲ್ಲಿ ಕಾಣಬಹುದು. ಜನ ಬದುಕಲಿ ಎಂದು ಸಾಹಿತ್ಯ ಕಟ್ಟಿದವರು ಜನಪದರು ಎಂದು ಹೇಳಿದರು.
ಜಾನಪದ ಕಲೆಗಳು ಬರೀ ಸಂತಸವನ್ನಷ್ಟೇ ಕೊಡಲಿಲ್ಲ. ಆರೋಗ್ಯಕರ ಸಮಾಜದ ಕಾವಲುಗಾರನಂತೆಯೂ ಅವು ಕೆಲಸ ಮಾಡಿವೆ. ಕಾಲಕ್ಕೆ ಅನುಗುಣವಾಗಿ ಕಲೆ ಬದಲಾಗಬೇಕು. ಆದರೆ, ಈ ಬದಲಾವಣೆಯಲ್ಲಿ ಕಲೆಯ ಮೂಲದ್ರವ್ಯ ಉಳಿಸಿಕೊಳ್ಳಲು ಆಗುತ್ತಿಲ್ಲ. ಕಲೆ ಉಳಿಯಬೇಕು ಎಂದರೆ, ಕಲಾವಿದರನ್ನು ಮೊದಲು ಉಳಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಕಲೆಯನ್ನು ಗೌರವಿಸುವ ಕಾರ್ಯವೂ ಆಗಬೇಕಾಗಿದೆ. ಶಾಲಾ ಪಠ್ಯದಲ್ಲಿ ಜಾನಪದ ಕಲೆ, ಸಾಹಿತ್ಯವನ್ನು ಪರಿಚಯಿಸಬೇಕು. ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಕಲೆಗಳ ಪ್ರಾಯೋಗಿಕ ಶಿಕ್ಷಣ ನೀಡುವಂತಾಗಬೇಕು. ಹೀಗೆ ಮಾಡಿದ್ದಲ್ಲಿ ಮಾತ್ರ ಕಲೆ, ಕಲಾವಿದರನ್ನು ಉಳಿಸಿಕೊಳ್ಳಲು, ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಜಾನಪದ ಪರಿಷತ್ ಕಲ್ಯಾಣ ಕರ್ನಾಟಕ ಸಂಯೋಜಕ ಡಾ. ಜಗನ್ನಾಥ ಹೆಬ್ಟಾಳೆ ಮಾತನಾಡಿ, ನಗರದಲ್ಲಿ ಅಂತಾರಾಷ್ಟ್ರೀಯ ಜಾನಪದ ಉತ್ಸವ ನಡೆಸಲು ಸಿದ್ಧತೆ ನಡೆಯುತ್ತಿದ್ದು, ದೇಶದ ಎಲ್ಲ ರಾಜ್ಯಗಳ ಜತೆಗೆ ವಿದೇಶಗಳ 2500ಕ್ಕೂ ಅಧಿಕ ಕಲಾವಿದರನ್ನು ಆಹ್ವಾನಿಸಲಾಗುತ್ತದೆ. ನಗರದಲ್ಲಿ ಪ್ರತ್ಯೇಕ ಜಾನಪದ ಭವನ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ನೆಲಮೂಲದ ಈ ಸಂಸ್ಕೃತಿಯನ್ನು ಉಳಿಸಿಕೊಳ್ಳುವ, ಬೆಳೆಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಉದ್ಯಮಿ ಬಸವರಾಜ ಧನ್ನೂರ್ ಮಾತನಾಡಿ, ನಿಜವಾದ ಭಾರತ ಜಾನಪದದಲ್ಲಿದೆ. ಸಾರ್ಥಕ ಬದುಕು ಸಾಗಿಸಲು ಏನೇನು ಬೇಕೋ ಅದೆಲ್ಲವೂ ಜಾನಪದ ಸಾಹಿತ್ಯದಲ್ಲಿದೆ. ಸುಂದರ, ಸಾರ್ಥಕ ಬದುಕು ಸಾಗಿಸಲು ಜಾನಪದ ಸಾಹಿತ್ಯ ಪ್ರೇರಣೆ ನೀಡುತ್ತದೆ. ರಾಣಿ ಸತ್ಯಮೂರ್ತಿ ಅವರ ಕಲಾ ಸೇವೆ ಅನನ್ಯವಾಗಿದೆ. ಕಲೆ, ಕಲಾವಿದರನ್ನು ಬೆಳೆಸಲು ಅವರು ಬದ್ಧತೆಯಿಂದ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು. ಜಾನಪದ ಸಾಹಿತಿ ಕಾಶಿನಾಥರೆಡ್ಡಿ ಸಮ್ಮೇಳನ ಉದ್ಘಾಟಿಸಿದರು.
ಉದ್ಯಮಿ ಬಸವರಾಜ ಧನ್ನೂರ್ ಅವರು ಎಸ್. ಬಿ. ಕುಚಬಾಳ್ ಅವರ ಕವನ ಸಂಕಲನ ಬಿಡುಗಡೆ ಮಾಡಿದರು. ಪ್ರೊ| ಶಿವಶರಣಪ್ಪ ಹುಗ್ಗೆ ಪಾಟೀಲ, ಎಸ್. ಪ್ರಭು, ಎಸ್.ಬಿ. ಕುಚಬಾಳ್, ಡಾ|ರಾಜಕುಮಾರ ಹೆಬ್ಟಾಳೆ, ಕೆ.ಸತ್ಯಮೂರ್ತಿ, ನಿಜಲಿಂಗಪ್ಪ ತಗಾರೆ ಇದ್ದರು.
ಭವ್ಯ ಮೆರವಣಿಗೆ
ಉದ್ಘಾಟನಾ ಸಮಾರಂಭಕ್ಕೆ ಮುನ್ನ ಜನವಾಡಾ ರಸ್ತೆಯ ಜಾನಪದ ವಿವಿ ಪ್ರಾದೇಶಿಕ ಕೇಂದ್ರದಿಂದ ಕರ್ನಾಟಕ ಸಾಹಿತ್ಯ ಸಂಘದವರೆಗೆ ಜಾನಪದ ಕಲಾ ಮೆರವಣಿಗೆ ನಡೆಯಿತು. ಮಹಿಳಾ ಕೋಲಾಟ, ಭಜನಾ ತಂಡ, ಡೊಳ್ಳು ಕುಣಿತ, ಗೊಂಬೆ ಕುಣಿತ, ಲಂಬಾಣಿ ನೃತ್ಯ ಸೇರಿದಂತೆ ಹತ್ತಾರು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ರಾಮಕೃಷ್ಣನ್ ಸಾಳೆ ಚಾಲನೆ ನೀಡಿದರು.