Advertisement
ಹೌದು. ಮಳೆಗಾಲದಲ್ಲಿ ಅಬ್ಬರಿಸಿ ಬೊಬ್ಬಿರಿದು ರೈತರನ್ನು ಹಿಗ್ಗಾ ಮುಗ್ಗಾ ಹಣ್ಣಾಗಿಸಿದ್ದ ಬೇಡ್ತಿಹಳ್ಳದ ದೈತ್ಯ ಒಡಲು ಇದೀಗ ಬತ್ತಿ ಹೋಗಿದ್ದು ಬೇಡ್ತಿ ಕೊಳ್ಳದ ಕೊಳವೆಬಾವಿಗಳಿಗೆ ಮತ್ತೆ ಬಿಕ್ಕಳಿಕೆ ಶುರುವಾಗಿದೆ. ಅಷ್ಟೇಯಲ್ಲ, ಪಶುಪಕ್ಷಿ ಮತ್ತು ಜೀವ ವೈವಿಧ್ಯಕ್ಕೆ ಬೇಡ್ತಿ ಒಡಲು ಬರಿದಾಗಿದ್ದು ತೀವ್ರ ಅಘಾತ ಮೂಡಿಸಿದೆ.
Related Articles
Advertisement
ಅವುಗಳ ಪೈಕಿ 29 ಸಾವಿರ ರೈತರ ಹೊಲಗಳಲ್ಲಿನ ಕೊಳವೆಬಾವಿಗಳು ಕಳೆದ ಮೂರು ವರ್ಷ ಚೆನ್ನಾಗಿ ಮಳೆಯಾಗಿದ್ದರಿಂದ ಮತ್ತೆ ನೀರು ಚೆಲ್ಲುತ್ತಿವೆ. ಆದರೆ ಬೇಡ್ತಿ ಒಡಲು ಬರಿದಾಗುತ್ತಿದ್ದಂತೆಯೇ ಇಲ್ಲಿನ ಕೊಳವೆಬಾವಿಗಳು ಬಿಕ್ಕಲು ಆರಂಭಿಸುತ್ತವೆ. 2021ರ ಡಿಸೆಂಬರ್ ತಿಂಗಳವರೆಗೂ ಇಲ್ಲಿ ಮಳೆ ಬಿದ್ದು, ಬೇಡ್ತಿ ತುಂಬಿ ಹರಿದಿದೆ. ಆದರೆ ಕೇವಲ ಮೂರೇ ತಿಂಗಳಲ್ಲಿ ಹಳ್ಳದಲ್ಲಿನ ನೀರು ಸಂಪೂರ್ಣ ಬತ್ತಿ ಹೋಗಿ ಮತ್ತೆ ಪಶುಪಕ್ಷಿಗಳು ನೀರಿಗಾಗಿ ಬಾಯಿ ತೆರೆಯುವ ಸ್ಥಿತಿ ನಿರ್ಮಾಣವಾಗಿದೆ.
ಕೈಗೂಡಲಿಲ್ಲ ಚೆಕ್‌ಡ್ಯಾಂ ಕ್ರಾಂತಿ : ಕಳೆದ 5 ವರ್ಷಗಳಲ್ಲಿ ಧಾರವಾಡ ಜಿಪಂ ವತಿಯಿಂದ ಬೇಡ್ತಿ ಹಳ್ಳಕ್ಕೆ ಅಲ್ಲಲ್ಲಿ 25ಕ್ಕೂ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಆದರೆ ಕಳೆದ ವರ್ಷದ ಪ್ರವಾಹದಲ್ಲಿ ಈ ಚೆಕ್ ಡ್ಯಾಂಗಳು ಅಕ್ಕಪಕ್ಕದ ಹೊಲದ ಮಣ್ಣನ್ನು ಕೊಚ್ಚಿ ಹೋಗುವಂತೆ ಮಾಡಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವೈಜ್ಞಾನಿಕ ಯೋಜನೆ ಸಿದ್ಧಪಡಿಸಿ ಅಗತ್ಯ ಬೀಳುವಲ್ಲಿ ಕಿರು ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಅಗತ್ಯವಿದೆ.
ಬೇಡ್ತಿಗೆ ಉಪ ಹಳ್ಳಗಳಾಗಿರುವ ಸಣ್ಣಹಳ್ಳ, ಜ್ಯಾತಕ್ಯಾನ ಹಳ್ಳ, ಮುಳ್ಳಮೂರಿ ಹಳ್ಳ, ಡೋರಿಹಳ್ಳ, ಡೊಂಕುಹಳ್ಳ ಸೇರಿದಂತೆ 11 ಹಳ್ಳಗಳು ಮಳೆಗಾಲದಲ್ಲಿ ವಿಪರೀತ ತುಂಬಿ ಹರಿದು, ಚಳಿಗಾಲಕ್ಕೆ ಮತ್ತೆ ಬತ್ತಿ ಹೋಗುತ್ತಿವೆ. ಇದನ್ನು ತಡೆಯಲು ಇಲ್ಲಿ ಕಿರು ನೀರು ಇಂಗಿಸುವ ಸಣ್ಣ ಸಣ್ಣ ಚೆಕ್ ಡ್ಯಾಂಗಳನ್ನು ನಿರ್ಮಿಸುವುದು ಸೂಕ್ತ ಎಂದು ಜಲತಜ್ಞ ಡಾ|ರಾಜೇಂದ್ರ ಸಿಂಗ್ 2003ರಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿಸಿದ್ದಾರೆ.
ಪಕ್ಷಿ ಸಂಕುಲ,ಜೀವ ವೈವಿಧ್ಯ ವಿಲವಿಲ: ಬೇಡ್ತಿ ಮುಗದ ಕೆರೆಯಿಂದ ತನ್ನ ಹುಟ್ಟನ್ನು ಗುರುತಿಸಿಕೊಳ್ಳುವ ಹಳ್ಳವಾಗಿದ್ದು, ಪ್ರತಿವರ್ಷ ಇಲ್ಲಿ 8 ಟಿಎಂಸಿ ಅಡಿ ನೀರು ಹರಿದು ಹೋಗುತ್ತದೆ. ನೀರಸಾಗರ ಕೆರೆಗೆ ಪ್ರಧಾನ ನೀರು ಪೂರೈಕೆ ಹಳ್ಳ ಇದಾಗಿದ್ದು, ಬೇಡ್ತಿ ಮೇಲೆರದೇ ಹೋದರೆ ನೀರಸಾಗರದ ಅಂಗಳದಲ್ಲಿ ಬರೀ ಕರಿಮಣ್ಣಷ್ಟೇ ಕಾಣುತ್ತದೆ. ಇಂತಿಪ್ಪ ಬೇಡ್ತಿ ಕೊಳ್ಳ ಪಕ್ಷಿ ಸಂಕುಲ ಮತ್ತು ಜೀವ ವೈವಿಧ್ಯತೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಗುಬ್ಬಚ್ಚಿ ಸಂಕುಲಕ್ಕೆ ಇದೇ ಅತ್ಯಂತ ದೊಡ್ಡ ಆಶ್ರಯ ನೀಡಿದೆ. ಅಕ್ಕಪಕ್ಕದ ಹೊಲಗಳಲ್ಲಿ ಬಿತ್ತನೆಯಾಗುವ ಜೋಳ, ಭತ್ತ, ಹೆಸರು, ಅವರೆ, ಶೇಂಗಾ, ಸೋಯಾ, ಕಾಯಿಪಲ್ಲೆ ಸೇರಿದಂತೆ ವಿವಿಧ ಬೆಳೆಗಳೇ ಪಕ್ಷಿ ಸಂಕುಲ ತನ್ನ ವೈವಿಧ್ಯತೆ ಕಾಯ್ದುಕೊಳ್ಳಲು ಅತ್ಯಂತ ಅನುಕೂಲಕಾರಿ.
ಧಾರವಾಡ ಜಿಲ್ಲೆಯ ಪಾಲಿಗೆ ಮುಗದ ಕೆರೆಯ ಕೋಡಿಯಿಂದ ನೀರಸಾಗರ ಕೆರೆಯ ಕೋಡಿವರೆಗೂ ಹರಿಯುವ ದೊಡ್ಡ ಹಳ್ಳವನ್ನೇ ಬೇಡ್ತಿಹಳ್ಳ ಎಂದು ಕರೆಯುತ್ತ ಬಂದಿದ್ದಾರೆ. ನೀರಸಾಗರಕ್ಕೆ ಶೇ.78 ನೀರು ಪೂರೈಸುವ ಏಕೈಕ ದೊಡ್ಡ ಹಳ್ಳವೇ ಈ ಬೇಡ್ತಿಹಳ್ಳ. ಶಾಲ್ಮಲಾ ಕೊಳ್ಳಕೂಡ ಬೇಡ್ತಿಯ ಒಡಲೇಯಾದರೂ ಅದು ಗುಪ್ತಗಾಮಿನಿಯಾಗಿದೆ. ಆದರೆ ಮಳೆಗಾಲದಲ್ಲಿ ಉಕ್ಕಿ ಹರಿಯುವ ಬೇಡ್ತಿಹಳ್ಳದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಷ್ಟೇ 5 ಟಿಎಂಸಿ ಅಡಿ ನೀರಿದೆ. ಯಾವುದೇ ದೊಡ್ಡ ನದಿ ಹರಿವು ಇಲ್ಲದೇ ಧಾರವಾಡ ಜಿಲ್ಲೆಯ ಪಶ್ಚಿಮ ತಾಲೂಕುಗಳಿಗೆ ಈ ನೀರನ್ನು ಚೆಕ್‌ಡ್ಯಾಂಗಳು, ಸಣ್ಣ ಕೆರೆಗಳನ್ನು ನಿರ್ಮಿಸಿ ಹಿಡಿದಿಟ್ಟುಕೊಳ್ಳವ ಯೋಜನೆ ಮುಂದಿನ ದಿನಗಳಲ್ಲಿ ಅಗತ್ಯವಾಗಿ ಬೇಕು ಎನ್ನುತ್ತಾರೆ ಈ ಭಾಗದ ನೀರಾವರಿ ತಜ್ಞರು.
ಬೇಡ್ತಿ ಹಳ್ಳ ಸೇರಿದಂತೆ ಸುತ್ತಲಿನ ಸಣ್ಣ ಹಳ್ಳಗಳ ನೀರನ್ನು ಸ್ಥಳೀಯವಾಗಿ ಅಂತರ್ಜಲ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುವುದು ಸೂಕ್ತ. ಕಾರಣ ಮಳೆಗಾಲದಲ್ಲಿ ಇಲ್ಲಿ ಯಥೇತ್ಛವಾಗಿ ನೀರು ಸುಮ್ಮನೆ ಹರಿದು ಹೋಗುತ್ತದೆ. ಈ ನೀರಿನ ಸದ್ಬಳಕೆ ಅಗತ್ಯವಿದೆ.
-ಶಂಕರ ಕುಂಬಿ, ಪರಿಸರವಾದಿ
ಜಿಲ್ಲೆಯಲ್ಲಿ ಹೊರ ಜಿಲ್ಲೆಗಳ ನದಿಯಿಂದ ನೀರು ಹರಿಸುವ ಅನಿವಾರ್ಯತೆ ಇದ್ದೇ ಇದೆ. ಆದರೆ ಜಿಲ್ಲೆಯಲ್ಲೇ ಬಿದ್ದು ಸುಮ್ಮನೆ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಕಿರು ಜಲಬಳಕೆ ಯೋಜನೆ ಜಾರಿಗೊಳಿಸಬೇಕು. ಇದರಿಂದ ರೈತರಿಗೆ ಮತ್ತು ಪರಿಸರಕ್ಕೆ ಅನುಕೂಲವಾಗಲಿದೆ.
-ಶ್ರೀಶೈಲಗೌಡ ಕಮತರ, ಹೋರಾಟಗಾರ
–ಡಾ|ಬಸವರಾಜ ಹೊಂಗಲ್