ಹಾವೇರಿ: ರಾಜ್ಯದ ಬೇಡ ಜಂಗಮರಿಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಪಡೆಲು ಒತ್ತಾಯಿಸಿ ಫೆ.19 ರಂದು ದಾವಣಗೇರಿ ಜಿಲ್ಲೆಯ ಚನ್ನಗಿರಿಯಲ್ಲಿ ಏರ್ಪಡಿಸಿರುವ ಬೃಹತ್ ಬೇಡಜಂಗಮ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸುವಂತೆ ಜಿಲ್ಲಾ ಬೇಡಜಂಗಮ ಸಮಾಜದ ಅಧ್ಯಕ್ಷ ಎಂ.ಎಂ ಹಿರೇಮಠ ಕರೆ ನೀಡಿದರು.
ನಗರದ ರೇಣುಕ ಮಂದಿರದಲ್ಲಿ ಏರ್ಪಡಿಸಿದ್ದ ಹಾವೇರಿ ಜಿಲ್ಲಾ ಬೇಡಜಂಗಮರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಅತೀ ಹಿಂದುಳಿದ ಜಾತಿಗಳಲ್ಲಿ ಬೇಡಜಂಗಮ ಸಮಾಜವೂ ಒಂದು. ಆದ್ದರಿಂದ ಕೇಂದ್ರ ಸರಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿ ಬೇಡಜಂಗಮ ಜಾತಿಯ ಬಗ್ಗೆ ನಮೂದಿಸಿದೆ. ಅಲ್ಲದೇ, ಸೂರ್ಯನಾಥ ಕಾಮತರ ವರದಿಯಲ್ಲಿ ಮತ್ತು ಕೋರ್ಟ್ ಆದೇಶದಲ್ಲೂ ರಾಜ್ಯದ ಮಾಮೂಲಿ ಜಂಗಮರೇ ಬೇಡ ಜಂಗಮರು ಎಂದು ಸ್ಪಷ್ಟವಾಗಿ ತಿಳಿಸಲಾಗದೆ. ಆದರೆ, ಕೆಲವು ಪ್ರಭಾವಿ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಸರಕಾರ ಮತ್ತು ಅಧಿ ಕಾರಿಗಳುಬೇಡಜಂಗಮರಿಗೆ ಸಿಗಬೇಕಾಗಿರುವ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಜಂಗಮರೆಲ್ಲರೂ ಸಂಘಟನೆಯ ಮುಂಖಾತರ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ. ಫೆ.19 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಏರ್ಪಡಿಸಿರುವ ಸಮಾವೇಶದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಬೇಡಜಂಗಮ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಮಠದ ಮಾತನಾಡಿ, ಬೇಡಜಂಗಮರು ಯಾರ ಹಕ್ಕನ್ನು ಕಿತ್ತುಕೊಂಡಿಲ್ಲ. ಆದರೆ, ತಮಗೆ ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಸಂಘಟನೆಯ ಮುಂಖಾತರ ಹೋರಾಟ ಮಾಡಬೇಕಾಗಿದೆ. ಸಾಂವಿಧಾನಿಕ ಹಕ್ಕೊತ್ತಾಯದ ನಮ್ಮ ನೋಟ ಸರ್ಕಾರದ ಕಡೆಗೆ ಎನ್ನುವ ರಾಜ್ಯ ಮಟ್ಟದ 2ನೇ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮತ್ತು ಈ ವರ್ಷದ ಮೊದಲನೇ ಸಮಾವೇಶವನ್ನು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಬೇಡಜಂಗಮ ಸಮಾಜ ಬಾಂಧವರು ಸೇರಿ ಸರಕಾರಕ್ಕೆ ಜಂಗಮರ ಶಕ್ತಿ ಪ್ರದರ್ಶನ ಮಾಡಲಾಗಿದೆ ಎಂದರು.
ಸಭೆಯಲ್ಲಿ ಶಿವಯೋಗಿ ಹುಲಿಕಂತಿಮಠ, ಗುರುನಾಥಯ್ಯ ಮಳ್ಳೂರಮಠ, ರಾಜು ಲಕ್ಷ್ಮೇಶ್ವರಮಠ, ಕುಮಾರಸ್ವಾಮಿ ಹಿರೇಮಠ, ಶಿವಬಸಯ್ಯ ವಿರಕ್ತಮಠ, ಸಿದ್ದಯ್ಯ ಗೌರಿಮಠ, ಎಸ್.ಪಿ. ಮುದೇನೂರಮಠ, ಗುರುಶಾಂತಯ್ಯ ಹಿರೇಮಠ, ಚಂದ್ರಶೇಖರಯ್ಯ ಗುಂಡೂರಮಠ, ಶಂಕ್ರಯ್ಯ ಹೆಬ್ಬಳ್ಳಿಮಠ, ರುದ್ರಯ್ಯ ಮಡ್ಲಿಮಠ, ಜಿ.ಎಸ್. ಚನ್ನಾಪುರಮಠ, ಕೊಟ್ರಯ್ಯ ಚರಂತಿಮಠ ಇತರರು ಪಾಲ್ಗೊಂಡಿದರು. ರಾಜು ಕಲ್ಯಾಣಮಠ ನಿರೂಪಿಸಿ, ಗುರಬಸಯ್ಯ ಚಪ್ಪರದಹಳ್ಳಿಮಠ ವಂದಿಸಿದರು.