ಉಡುಪಿ : ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿರುವ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಮೂಲಕ ಕಳುಹಿಸುವ ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೆ ಬೆಡ್‌ಗಳು ನಿರಾಕರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಎಚ್ಚರಿಕೆ ನೀಡಿದ್ದಾರೆ.
ಜಿ. ಪಂ. ಕಚೇರಿ ಸಭಾಂಗಣದಲ್ಲಿ ಜರಗಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಗಿಗಳಿಗೆ ಬೆಡ್‌ಗಳನ್ನು ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಅತ್ಯಂತ ಕಠಿನ ಕ್ರಮ ಜರಗಿಸಲಾಗುವುದು. ಎಲ್ಲ ಆಸ್ಪತ್ರೆಗಳು ಸರಕಾರದ ನಿರ್ದೇಶನದಂತೆ ತಮ್ಮಲ್ಲಿನ ವಿವಿಧ ಮಾದರಿಯ ಬೆಡ್‌ಗಳಲ್ಲಿ ನಿಗದಿತ ಸಂಖ್ಯೆ ಬೆಡ್‌ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಜಿಲ್ಲಾಡಳಿತ ಕಳುಹಿಸುವ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸದ್ದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ದ ಕೆಪಿಎಂಇ ಮತ್ತು ವಿಪತ್ತು ನಿರ್ವಹಣಾ ಕಾಯಿದೆಯನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಖಾಸಗಿ ಆಸ್ಪತ್ರೆಗಳು ಐ.ಎಲ್.ಐ ಮತ್ತು ಸಾರಿ ರೋಗಿಗಳ ವಿವರಗಳನ್ನು ತಪ್ಪದೇ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು. ಇದಕ್ಕಾಗಿ ರೂಪಿಸಿರುವ ಪೋರ್ಟಲ್‌ನಲ್ಲಿ ಪ್ರತಿ ದಿನದ ಮಾಹಿತಿ ದಾಖಲಿಸಬೇಕು, ಮಾಹಿತಿ ದಾಖಲಿಸದ ಆಸ್ಪತ್ರೆಗಳ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು.
ಕೋವಿಡ್ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗೆ ತಗಲುವ ವೆಚ್ಚದ ಕುರಿತ ದರಪಟ್ಟಿ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು, ರೋಗಿಯನ್ನು ಒಂದು ಆಸ್ಪತ್ರೆಯಿಂದ ಮತ್ತೂಂದು ಅಸ್ಪತ್ರೆಗೆ ವರ್ಗಾಯಿಸುವಾಗ ಅನಗತ್ಯ ವಿಳಂಬ ಮಾಡಬಾರದು. ರೋಗಿಯನ್ನು ಆಸ್ಪತ್ರೆಗೆ ಸೆರ್ಪಡೆ ಮಾಡಿಕೊಳ್ಳುವ ಮುನ್ನ ಎ.ಬಿ.ಆರ್.ಕೆ. ಯೋಜನೆ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ಸಲಹೆ ನೀಡಿದರು. ಖಾಸಗಿ ಆಸ್ಪತ್ರೆಗಳ ಮೇಲ್ವಿಚಾರಣೆಗೆ ನೇಮಕ ಮಾಡಿರುವ ನೋಡಲ್ ಆಧಿಕಾರಿಗಳು ಆಸ್ಪತ್ರೆಯಲ್ಲಿನ ಸೌಲಭ್ಯಗಳು ಮತ್ತು ಲಭ್ಯವಿರುವ ಬೆಡ್‌ಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ : ಅಣ್ಣಾ ಎನ್ನುವುದು ಬೇಡ ಅಂದರೆ ಸಾಹೇಬರೇ ಎನ್ನುತ್ತೇನೆ: ಕುಮಾರಸ್ವಾಮಿಗೆ ಡಿಕೆಶಿ
ಜಿ. ಪಂ ಸಿಇಒ ಡಾ| ನವೀನ್ ಭಟ್ ವೈ, ಎಡಿಸಿ ಸದಾಶಿವ ಪ್ರಭು, ಡಿಎಚ್‌ಒ ಡಾ| ಎಚ್. ನಾಗಭೂಷಣ ಉಡುಪ, ಕೆಪಿಎಂಇ ನೋಡೆಲ್ ಅಧಿಕಾರಿ ಡಾ| ರಾಮರಾವ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್ ಉಪಸ್ಥಿತರಿದ್ದರು.