ಮದ್ದೂರು: ವಿಕಲ ಚೇತನರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ವಾಗಿ ಸದೃಢರಾಗಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎನ್. ಆಶಾಲತಾ ತಿಳಿಸಿದರು.
ಪಟ್ಟಣದ ಕೆ. ಗುರುಶಾಂತಪ್ಪ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರಮಣ ಮಹರ್ಷಿ ಅಂಧರ ಪರಿಷತ್, ಸಮುದಾಯಅಂಗವಿಕಲರ ಪುನರ್ವಸತಿ ಯೋಜನೆ ಮದ್ದೂರು ಘಟಕ ಹಾಗೂ ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಕಾರ್ಯಾಲಯ ಮಂಡ್ಯದ ಆಶ್ರಯದಲ್ಲಿ ಆಯೋಜಿಸಿದ್ದ ಅಂಗವಿಕಲತೆ ತಡೆ ಮತ್ತು ಪುನರ್ವಸತಿ ಶಿಬಿರದಲ್ಲಿ ವಿಕಲಚೇತನರಿಗೆ ಪರಿಕರಗಳನ್ನು ವಿತರಿಸಿ ಮಾತನಾಡಿ, ಕುಷ್ಠ ರೋಗವು ಸೂಕ್ತ ಚಿಕಿತ್ಸೆಯಿಂದ ಗುಣವಾಗುವಂತಹ ಕಾಯಿಲೆ ಯಾಗಿದೆ. ಇದನ್ನು ಶಾಪ ಎಂದು ಭಾವಿಸದೆ ಸೂಕ್ತ ಸಲಹೆ, ಸೂಚನೆ ಪಾಲಿಸಿ ರೋಗದಿಂದ ಮುಕ್ತರಾಗಿ ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:ರೆಡಿಯೋ ಕಾಲರ್ ಕಾರ್ಯಾಚರಣೆ ಯಶಸ್ವಿ
ವಿಕಲ ಚೇತನರು ಸರ್ಕಾರ ಹಾಗೂ ಸಂಘ- ಸಂಸ್ಥೆಗಳು ನೀಡುವ ಸೌಲಭ್ಯ ಬಳಸಿಕೊಂಡು ಆತ್ಮಸ್ಥೈರ್ಯದಿಂಧ ಬದುಕು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ರಮಣ ಮಹರ್ಷಿ ಅಂಧರ ಸಂಸ್ಥೆ ವತಿಯಿಂದ ಉಚಿತವಾಗಿ ಆಹಾರದ ಕಿಟ್, ಹೊದಿಕೆಗಳನ್ನು ಹಾಗೂ ಇಲಾಖೆ ವತಿಯಿಂದ ಔಷಧಿ ಹಾಗೂ ಎಂಸಿಆರ್ ಚಪ್ಪಲಿಗಳನ್ನು ವಿತರಿಸಲಾಯಿತು. ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಧಿಕಾರಿ ಡಾ. ಅಶ್ವಥ್ ಅವರು ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ರಮಣ ಮಹರ್ಷಿ ಅಂಧರ ಪರಿಷತ್ ಸಂಯೋಜಕ ಮಹಂತೇಶ್ , ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಸ್.ಸಿ. ರಮೇಶ್, ಸಂಯೋಜಕಿ ಜಯಂತಿ ಹಾಗೂ ಅಧಿಕಾರಿಗಳಾದ ಚಿಕ್ಕಅರಸಿಗೌಡ, ಮಹಮದ್ ಕುಟ್ಟಿ, ತಮ್ಮೇಗೌಡ ಹಾಜರಿದ್ದರು.