ಬೆಂಗಳೂರು: ಬಕ್ರೀದ್ ಹಬ್ಬ ಸಮೀಪಿಸಿದ್ದು, ರಾಜಧಾನಿಯಲ್ಲಿ ಕುರಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು… ಹೌದು, ಮುಸ್ಲಿಮರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್‌ಗೆ ನಾಲ್ಕು ದಿನ ಬಾಕಿ ಇರುವಂತೆ ಟಗರುಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಚಾಮರಾಜಪೇಟೆ, ಜೆಸಿ ನಗರ, ಫ್ರೆàಜರ್ ಟೌನ್ ದೊಡ್ಡಿ ಬಳಿ, ನೆಲಮಂಗಲ ಸೇರಿದಂತೆ ಹೊರವಲಯದಿಂದ ಕುರಿಗಳನ್ನು ತಂದು ಮಾರಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಜತೆಗೆ ಉತ್ತಮ ತಳಿಯ ಕುರಿ, ಮೇಕೆಗಳನ್ನು ಆನೇಕಲ್, ಮಾಲೂರು, ಹೊಸಕೋಟೆ, ಬನ್ನೂರು ಸಂತೆಗಳಿಗೂ ಹೋಗಿ ತರಲಾಗಿದೆ. ತೂಕ ಹಾಗೂ ತಳಿಯ ಮೇಲೆ ಅದಕ್ಕೆ ಬೆಲೆಯೂ ನಿಗದಿಯಾಗಿದೆ. ಈ ಬಾರಿ ತಮಿಳುನಾಡಿನಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಕುರಿಗಳು ಬಂದಿವೆ. ಆದರೆ, ಮಳೆ ಕಾರಣದಿಂದ ವ್ಯಾಪಾರ ಸ್ವಲ್ಪ ಇಳಿಮುಖವಾಗಿದ್ದು, ಮಾರಾಟಗಾರರು ಕೊನೆಯ ಮೂರು ದಿನಗಳಲ್ಲಿ ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನದ ಸಂತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುರಿ ಮತ್ತು ಮೇಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತರಲಾಗಿದೆ. ಸತತವಾಗಿ ಸುರಿದ ಮಳೆ, ಜೊತೆಗೆ ಬೆಲೆ ಏರಿಕೆ ಬಿಸಿ ಇವೆಲ್ಲ ಕಾರಣಗಳಿಂದ ಇಲ್ಲಿವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪರ ನಡೆದಿಲ್ಲ. ಆದರೆ, ಶನಿವಾರ ಬಕ್ರೀದ್ ಇದ್ದು, ಬುಧವಾರ, ಗುರುವಾರ ಮತ್ತು ಶುಕ್ರವಾರ ಒಳ್ಳೆಯ ವ್ಯಾಪಾರ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.
ವಿಶೇಷ ಸಂತೆ: ಕಳೆದ 40 ವರ್ಷಗಳಿಂದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬಕ್ಕೆ ವಿಶೇಷ ಸಂತೆ ನಡೆಯುತ್ತದೆ. ಹಬ್ಬ ಇನ್ನೂ ಒಂದು ತಿಂಗಳು ಇರುವಾಗಲೇ ಇಲ್ಲಿ ವ್ಯಾಪಾರ ಆರಂಭವಾಗಿರುತ್ತದೆ. ಇಲ್ಲಿಗೆ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶ ಮಾತ್ರವಲ್ಲದೆ ಶಿರಾ, ಮಂಡ್ಯ, ಮಳವಳ್ಳಿ, ಮದ್ದೂರು, ತುಮಕೂರು, ಚಿತ್ರದುರ್ಗ, ಸಿಂಧನೂರು, ಅಮಿನಗಡ ಮತ್ತಿತರ ಕಡೆಗಳಿಂದ ವಿವಿಧ ತಳಿಗಳ ಕುರಿ ಮತ್ತು ಮೇಕೆಗಳನ್ನು ತರಲಾಗುತ್ತದೆ.
30 ಸಾವಿರ ಕುರಿ ಮಾರಾಟ ನಿರೀಕ್ಷೆ: ಸಂತೆ ಆರಂಭವಾಗಿ 15ಕ್ಕೂ ಹೆಚ್ಚು ದಿನ ಕಳೆದಿವೆ. ಪ್ರತಿ ದಿನ 500 ರಿಂದ 1 ಸಾವಿರ ಕುರಿಗಳಂತೆ ಈವರೆಗೆ 13ರಿಂದ 15 ಸಾವಿರ ಕುರಿಗಳು ಬಿಕರಿಯಾಗಿವೆ. ಕೊನೆಯ ಮೂರು ದಿನಗಳಲ್ಲಿ ವ್ಯಾಪರ ಹೆಚ್ಚಾಗುವ ಸಾಧ್ಯತೆಯಿದ್ದು, ಈ ಬಾರಿ ಅಂದಾಜು 25ರಿಂದ 30 ಸಾವಿರ ಕುರಿ ಮತ್ತು ಮೇಕೆಗಳು ಮಾರಾಟ ಆಗುವ ನಿರೀಕ್ಷೆಯಿದೆ. ತಮಿಳುನಾಡಿನಿಂದ 4ರಿಂದ 5 ಸಾವಿರ ಕುರಿಗಳು ಬಂದಿರಬಹುದು. ಕಳೆದ ವರ್ಷಕ್ಕಿಂತ ಬೆಲೆ ಸ್ವಲ್ಪ ಕಡಿಮೆ ಇದೆ.
ಅಲ್ಲದೇ ಮಳೆಯಲ್ಲಿ ನೆನೆದಿದ್ದರಿಂದ ಜ್ವರದಿಂದಾಗಿ ಕುರಿಗಳ ತೂಕ ಕಡಿಮೆ ಆಗುತ್ತದೆ. ಇದರಿಂದ ಬೆಲೆ ಮೇಲೆ ಹೊಡೆತ ಬೀಳುತ್ತದೆ. ಕಳೆದ ವರ್ಷ 10 ಸಾವಿರ ರೂ.ದಿಂದ 1 ಲಕ್ಷ ರೂ.ವರೆಗೆ ಬೆಲೆ ಇತ್ತು. ಆದರೆ, ಈ ಬಾರಿ 7 ಸಾವಿರ ರೂ.ದಿಂದ 80 ಸಾವಿರ ರೂ. ಮಾತ್ರ ಇದೆ ಎಂದು ಬೆಂಗಳೂರಿನ ವ್ಯಾಪಾರಿ ಮಹ್ಮದ್ ಮತೀನ್ ಹೇಳುತ್ತಾರೆ. ಇದೇ ರೀತಿ ಜೆಸಿ ನಗರ ರಸ್ತೆ, ಫ್ರೆàಜರ್‌ಟೌನ್ ದೊಡ್ಡಿ ಬಳಿಯೂ ಕುರಿ ಮತ್ತು ಮೇಕೆಗಳ ಮಾರಾಟ ಭರದಿಂದ ಸಾಗಿದ್ದು, ಹಬ್ಬಕ್ಕೆ “ಖುರ್ಬಾನಿ’ ನೀಡಲು ಮುಸ್ಲಿಂ ಬಾಂಧವರು ಕುರಿ ಮತ್ತು ಮೇಕೆಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.