Advertisement

ಕೈ ಸದಸ್ಯನ ಗೈರಿನಿಂದ ಕಮಲಕ್ಕೆ ಒಲಿದ ಪಪಂ ಅಧ್ಯಕ ಸ್ಥಾನ

06:50 PM Oct 02, 2021 | Team Udayavani |

ಹುಳಿಯಾರು: ಹುಳಿಯಾರು ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಫಲಿತಾಂಶ ಹೊರಬಿದಿದ್ದು, ಕಾಂಗ್ರೆಸ್‌ ಸದಸ್ಯ ರಾಜುಬಡಗಿ ಗೈರಾಗಿದ್ದರಿಂದ ಬಿಜೆಪಿಗೆ ಪಪಂ ಗಾದಿ ಒಲಿದಿದೆ.

Advertisement

ಹುಳಿಯಾರು ಪಪಂ ನೂತನ ಅಧ್ಯಕ್ಷರಾಗಿ ಕೆಎಂಎಲ್‌ ಕಿರಣ್‌ ಕುಮಾರ್‌ ಹಾಗೂ ಶ್ರುತಿ ಸನತ್‌ ಆಯ್ಕೆಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಒಂದು ಗಂಟೆಗಳ ಕಾಲ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಕೆಎಂಎಲ್‌ ಕಿರಣ್‌ ಕುಮಾರ್‌, ಕಾಂಗ್ರೆಸ್‌ನಿಂದ ದಸ್ತಗೀರ್‌ ಸಾಬ್‌ ಹಾಗೂ ಪಕ್ಷೇತರವಾಗಿ ಸೈಯದ್‌ ಜಹೀರ್‌ ಸಾಬ್‌ ಸೇರಿದಂತೆ ಒಟ್ಟು 3 ಮಂದಿ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ:-ಮತಾಂತರ ನಿಷೇಧ ಕಾಯ್ದೆಗಾಗಿ ಸೈದಾಪುರ ಬಂದ್‌

ಉಪಾಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶ್ರುತಿ ಸನತ್‌, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರೀತಿ ರಾಘವೇಂದ್ರ ಸೇರಿದಂತೆ ಒಟ್ಟು ಇಬ್ಬರು ತಮ್ಮ ನಾಮಪತ್ರ ಸಲ್ಲಿಸಿದರು.

ಒಟ್ಟು 16 ಮಂದಿ ಸಂಖ್ಯಾಬಲವುಳ್ಳ ಪಂಚಾಯಿತಿಯಲ್ಲಿ ಹಾಲಿ ಶಾಸಕರ ಹಾಗೂ ಸಂಸದರ ಮತವು ಸೇರಿ 18 ಮತಗಳು ಚಲಾವಣೆಯಾಗಬೇಕಿತ್ತು. ಈ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ ಗಂಗಾಧರಯ್ಯ (ಬಡಗಿ ರಾಜು) ಅವರ ಗೈರಾಗಿ ಒಟ್ಟು 15 ಮಂದಿ ಸದಸ್ಯರು ಪಾಲ್ಗೊಂಡಿದ್ದರು.

Advertisement

ಬಿಜೆಪಿಯಿಂದ ಆಯ್ಕೆಯಾದ 6 ಮಂದಿ ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯೆಯ ಬೆಂಬಲ ಹಾಗೂ ಶಾಸಕರು, ಸಂಸದರ ಮತ ಸೇರಿ ಒಟ್ಟು 9 ಮತಗಳು ಚಲಾವಣೆಗೊಂಡಿತು. ಹಾಗೆಯೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಿಂದ ಕಾಂಗ್ರೆಸ್‌ನ 5 ಸದಸ್ಯರಲ್ಲಿ 4 ಸದಸ್ಯರು, ಜೆಡಿಎಸ್‌ನ 3 ಸದಸ್ಯರು ಮತ್ತು 1 ಪಕ್ಷೇತರ ಸದಸ್ಯನ ಬೆಂಬಲ ಸೇರಿ ಒಟ್ಟು 8 ಮತಗಳು ಚಲಾವಣೆಗೊಂಡವು. 17 ಮತಗಳ ಸಂಖ್ಯಾ ಬಲಕ್ಕೆ ಬಿಜೆಪಿ ಅಭ್ಯರ್ಥಿಗೆ 9 ಮತ, ಮೈತ್ರಿ ಕೂಟದ ಅಭ್ಯರ್ಥಿಗೆ 8 ಮತದ ಮೂಲಕ 1 ಮತದ ಅಂತರದಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಹೀಗಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆಎಂಎಲ್‌ ಕಿರಣ್‌ಕುಮಾರ್‌ ಅಧ್ಯಕ್ಷರಾಗಿ, ಶ್ರುತಿ ಸನತ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ ತೇಜಸ್ವಿನಿ ಕಾರ್ಯನಿರ್ವಹಿಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್‌.ಬಸವರಾಜು ಪಾಲ್ಗೊಂಡಿದ್ದರು.

ಗೈರಾದ ಬಡಗಿ ರಾಜು-

ಪಪಂ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ವಿವಿಧ ರೀತಿಯ ಲೆಕ್ಕಾಚಾರ ನಡೆಯುತ್ತಿತ್ತು. ಕ್ಷೇತ್ರ ಅಭ್ಯರ್ಥಿಗಳ ಸೇರ್ಪಡೆ ಹಾಗೂ ಮೈತ್ರಿ ಲೆಕ್ಕಚಾರದೊಂದಿಗೆ ಗದ್ದಿಗೆ ಏರಲೇಬೇಕೆಂಬ ಹಣಾಹಣಿ ನಡೆದಿತ್ತು. ಪಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಸದಸ್ಯ ರಾಜು ಬಡಗಿ ನಾಟ್‌ರೀಚಬಲ್‌ ಆಗಿ ಯಾರ ಕೈಗೂ ಸಿಗದೆ, ಏನಾಗಿದೆ ಎಂಬ ಮಾಹಿತಿ ತಿಳಿಯದೆ, ಕಾಂಗ್ರೆಸ್‌ನಿಂದ ವಿಪ್‌ ಜಾರಿ ಮಾಡಿದ್ದರೂ, ಹಾಜರಾಗದೆ ಚುನಾವಣೆಯ ಚಿತ್ರಣವೇ ಬದಲಾಗಿ, ಬಿಜೆಪಿಗೆ ಗೆಲುವಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next