ವಿಜಯಪುರ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನ ಮಾಡಿದವರು, ವೀರ ಸಾವರ್ಕರ್ ಅವರಂಥ ಸ್ವಾತಂತ್ರ್ಯ ಪ್ರೇಮಿಯನ್ನೂ ಅವಮಾನ ಮಾಡಿದ್ದಾರೆ.
ಭವಿಷ್ಯದಲ್ಲಿ ನೇತಾಜಿ ಶುಭಾಶ್ಚಂದ್ರ ಬೋಸ್, ಚಂದ್ರಶೇಖರ ಆಝಾದ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ ಎಂದು ಹೇಳುವ ಮಟ್ಟಕ್ಕೆ ಹೋಗುತ್ತಾರೆ ಎಂದು ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಅವರು, ಕಾಂಗ್ರೆಸ್ಸಿಗರು ಮಾತ್ರ ಭಾರತ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸುವ ಹುನ್ನಾರದ ವರ್ತನೆ ಇದು ಎಂದು ಕುಟುಕಿದರು.
ಮಹಾತ್ಮಾ ಗಾಂಧೀಜಿ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಸೇನಾನಿಗಳ ಕುರಿತೂ ಗೌರವ ಇರಿಸಿಕೊಳ್ಳಬೇಕು ಎಂದರು.
ಕಾಂಗ್ರೆಸಿಗರು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಒಂದು ಮುಖವನ್ನು ಮಾತ್ರ ಹೇಳುವುದು ಸರಿಯಲ್ಲ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ತಿಳಿಸುವಲ್ಲಿ ಕಾಂಗ್ರೆಸ್ ನಾಯಕರ ವರ್ತನೆ ಅಪಾಯಕಾರಿ ಬೆಳವಣಿಗೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ವೀರ್ ಸಾವರಕರ್, ಸಿದ್ದಗಂಗಾ ಶ್ರೀ ವ್ಯಕ್ತಿತ್ವ ತುಲನೆ ಮಾಡುವುದು ಸರಿಯಲ್ಲ. ಇಬ್ಬರಿಗೂ ಭಾರತ ರತ್ನ ನೀಡುವದರಿಂದ ಪ್ರಶಸ್ತಿಯ ಬೆಲೆ ಹೆಚ್ಚಲಿದೆಯೇ ಹೊರತು ಸಿದ್ದರಾಮಯ್ಯ ತಿಹಾರ್ ಜೈಲಿಗೆ ಹೋಗಲಿ, ಕರಿ ನೀರಿನ ಶಿಕ್ಷೆಯನ್ನ ಹೇಗೆ ಕೊಟ್ಟಿದ್ದರು ಅನ್ನೋದನ್ನ ನೋಡಿದರೆ ಸತ್ಯ ಗೊತ್ತಾಗುತ್ತೆ. ಟಿಪ್ಪು ಸುಲ್ತಾನನ್ನು ವೈಭವಿಕರಿಸಿದ ಮನಸ್ಸುಗಳಿಗೆ ಸಾವರ್ಕರ್ ಹಿಂದೂ ಎನ್ತಿರೋದು ಅಚ್ಚರಿ ಮೂಡಿಸಿದೆ. ಟಿಪ್ಪುಸುಲ್ತಾನನ ವೈಭವಿಕರಿಸುವಾಗ ಸಿದ್ದರಾಮಯ್ಯ ಅವರಿಗೆ ತತ್ವ ಸಿದ್ದಾಂತ ಅಡ್ಡಿ ಆಗಲ್ಲ. ಸಿದ್ದರಾಮಯ್ಯ ತನ್ನ ಹೆಸರಲ್ಲಿ ಸಿದ್ಧರಾಮ ಇಬ್ಬರು ಇದ್ದಾರೆ ಅಂತ ಡೈಲಾಗ್ ಹೊಡಿತಾರೆ. ಈಗ ಹೀಗೆ ಮಾತಾಡುತ್ತಾರೆ. ಸಿದ್ದರಾಮಯ್ಯ ಮಾತಿನ ಹಿಂದೆ ತಂತ್ರಗಾರಿಕೆ ಇದೆ ಎಂದರು.
ರಾಜ್ಯದಲ್ಲಿ ಮತ್ತೆ ಪ್ರವಾಹ ಬಂದಿದ್ದರೂ ಜನರಲ್ಲಿ ಜಾಗೃತೆ ಬಂದಿದೆ. ಅನಾಹುತ ಆಗುವ ಮುನ್ನ ಸುರಕ್ಷಿತ ಸ್ಥಳಗಳಿಗೆ ತೆರಳಿ ಸಾವು ನೋವಾಗದಂತೆ ಜನರು ಮುನ್ನೆಚ್ವರಿಕೆ ವಹಿಸುತ್ತಿದ್ದಾರೆ. ಸರ್ಕಾರ ಪ್ರವಾಹ ಸಂತ್ರಸ್ಥರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ನೈಸರ್ಗಿಕ ಅನಾಹುತ ತಡೆಯಲು ಸರ್ಕಾರದ ಬಳಿ ಏನು ನಿಯಂತ್ರಣ ಯಂತ್ರವಿಲ್ಲ ಎಂದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಎನ್. ಸಿ.ಪಿ. ಪಕ್ಷಕ್ಕಿಂತ ಕಡಿಮೆ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಪಡೆಯಲಿದೆ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಬಿಜೆಪಿ ಶಿವಸೇನೆ ಮೈತ್ರಿ ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತೊಮ್ಮೆ ಭರ್ಜರಿ ಜಯ ಪಡೆದು ಅಧಿಕಾರದಲ್ಲಿ ಮುಂದುವರೆಯಲಿದೆ ಎಂದರು.
ರಾಜ್ಯದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರ ಕೊಡು ಕೊಳ್ಳುವಿಕೆ ಮೂಲಕ ನಡೆಯಬೇಕು. ನೆರೆ ರಾಜ್ಯಗಳು ಸಹೋದರತ್ವದಿಂದ ಪರಸ್ಪರ ಹೊಂದಾಣಿಕೆಯಿಂದ ನಡೆಯಬೇಕು ಎಂದರು.