ಬೆಂಗಳೂರು: ಸಚಿವರಿಗೆ ನೀಡಿದಂತೆಯೇ ಈಗ ನಿಗಮ-ಮಂಡಳಿಗಳ ಅಧ್ಯಕ್ಷರು- ಉಪಾಧ್ಯಕ್ಷ ರಿಗೂ ಟಾಸ್ಕ್ ನೀಡಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇ ಬೇಕು. ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಬೇಕಾಗುತ್ತದೆ ಎಂದು ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕರು ಟಾಸ್ಕ್ ನೀಡಿದ್ದರು. ಹೆಚ್ಚು-ಕಡಿಮೆ ಅಂಥದ್ದೇ ಎಚ್ಚರಿಕೆ ಸಂದೇಶವನ್ನು ಈಗ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರಿಗೂ ರವಾನಿಸಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಿರ್ದೇಶಕರೊಂದಿಗೆ ನಡೆದಸಭೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಕಾಡಿ-ಬೇಡಿ ಅಧಿಕಾರ ಭಾಗ್ಯ ಪಡೆಯುವಲ್ಲಿ ಯಶಸ್ವಿಯಾದ ನಿಗಮ-ಮಂಡಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಈಗ ಅದನ್ನು ಅನುಭವಿಸುವಷ್ಟರಲ್ಲಿ ಚುನಾವಣೆ ಟಾಸ್ಕ್ ಎದುರಾಗಿದೆ. ಒಂದು ವೇಳೆ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗದಿದ್ದರೆ ತಮ್ಮ ಅಧಿಕಾರಕ್ಕೇ ಕುತ್ತು ಬರಲಿದೆ ಎಂಬ ಆತಂಕ ಕಾಡುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ನಿಗಮ- ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸಹಿತ ಪದಾಧಿಕಾರಿಗಳ ಸಾಮರ್ಥ್ಯ ಪ್ರದರ್ಶನವನ್ನೂ ಒರೆಗೆ ಹಚ್ಚಲಾಗುತ್ತದೆ. ತಮ್ಮ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಸಾಧ್ಯವಾದಷ್ಟು ಲೀಡ್ (ಮುನ್ನಡೆ) ಬರುವಂತೆ ಶ್ರಮಿಸಬೇಕು. ಅಧಿಕಾರ ಕೊಟ್ಟಿದ್ದು ಪಕ್ಷಕ್ಕೆ ಶಕ್ತಿ ತುಂಬಲಿ ಅಂತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ 14 ಕ್ಷೇತ್ರಗಳ ಲೋಕಸಭಾ ಚುನಾವಣೆ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಮಾಜಿ ಶಾಸಕರೊಂದಿಗೂ ನಾಯಕರು ಸಮಾಲೋಚನೆ ನಡೆಸಿ ದರು. ಈ ವೇಳೆ ಪ್ರತಿಯೊಬ್ಬರೂ ಚುನಾವಣೆ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಅನಗತ್ಯವಾಗಿ ಕ್ಷೇತ್ರಬಿಟ್ಟು ಹೋಗಬಾರದು. ಅಲ್ಲಿಯೇ ಇದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲ ರೀತಿಯ ಕಾರ್ಯತಂತ್ರ ರೂಪಿಸಬೇಕು ಎಂದು ಸೂಚಿಸಿದ್ದಾರೆ.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪಗಳಿ ದ್ದರೂ ಅವುಗಳನ್ನು ಬದಿಗೊತ್ತಿ ಗೆಲುವಿಗೆ ಶ್ರಮಿಸಬೇಕು. ಗ್ಯಾರಂಟಿ ಯೋಜನೆಗಾಗಿಯೇ ಸಾವಿರಾರು ಕೋ.ರೂ. ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ವನ್ನೂ ಕೊಡಲಾಗುತ್ತಿದೆ. ಪಕ್ಷವು ತಮಗೆ ಬೇಕಾದ್ದನ್ನು ನೀಡಿದೆ. ಅದಕ್ಕೆ ಪ್ರತಿಯಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುನ್ನಡೆ ಬರದಿದ್ದರೆ ಕೆಲಸ ಮಾಡಿಲ್ಲ ಎಂದರ್ಥ
ಇನ್ನು ಇದಕ್ಕೂ ಮುನ್ನ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಾವು ಎಷ್ಟೇ ದೊಡ್ಡವರಾದರೂ ಕಾರ್ಯಕರ್ತರು. ಹೀಗಾಗಿ ಸ್ವಾಭಿಮಾನ ಬಿಡಬೇಕು. ನೀವು ನಿಮ್ಮ ಬೂತ್‌ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲಿಲ್ಲವಾದರೆ ನೀವು ನಾಯಕರಲ್ಲ, ನೀವು ಕೆಲಸ ಮಾಡಿಲ್ಲ ಎಂದೇ ಅರ್ಥ. ಹೀಗಾಗಿ ನೀವು ನಿಮ್ಮ ಬೂತ್‌ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರುವ ಮೂಲಕ ಪಕ್ಷ ಬಲಪಡಿಸಬೇಕು ಎಂದು ಹೇಳಿದರು.