ಅವಳು ನೋಡಿದರೂ ನೋಡದ ಹಾಗೆ ಸ್ವಲ್ಪ ದೂರ ಹೋಗಿ ಮೊಪೆಡ್ ನಿಲ್ಲಿಸಿ “ಬನ್ನಿ’ ಎಂದು ಕರೆದಳು. ನನ್ನ ಹೆಗಲಿಗಿದ್ದ ಬ್ಯಾಗನ್ನು ಗಟ್ಟಿಯಾಗಿ ಹಿಡಿದು ಓಡಿ ಹೋದೆ. ಅವಳನ್ನು ಕ್ಲೋಸಪ್‌ನಲ್ಲಿ ನೋಡಿದ ತಕ್ಷಣ, ದೇವಲೋಕದ ಊರ್ವಶಿಯೇ ನನಗೆ ಸಹಾಯ ಮಾಡಲೆಂದು ಬಂದಿದ್ದಾಳೆ ಎಂದು ಅನಿಸಿದ್ದಂತೂ ನಿಜ.
ನಮ್ಮ ವಿಭಾಗದ ಎರಡನೇ ಸೆಮಿಸ್ಟರ್ ಎಕ್ಸಾಂ ನಡೆಯುತ್ತಿದ್ದವು. ಈಗಾಗಲೇ 5 ಎಕ್ಸಾಂಗಳು ಮುಗಿದಿದ್ದವು. ಆವತ್ತು ಕೊನೆಯ ಎಕ್ಸಾಂ ಇತ್ತು. ನಾನು ಕಾಕತಿ ಬಸ್ ತಂಗುದಾಣದಲ್ಲಿ ರಾಣಿ ಚೆನ್ನಮ್ಮ ವಿವಿಯ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ನಮ್ಮ ವಿವಿಯ ಬಸ್ ಧಾರವಾಡದ ಮಳೆ ಹಾಗೆ! ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ. 10 ಗಂಟೆಗೆ ಎಕ್ಸಾಂ ಬೇರೆ ಇತ್ತು. ಈ ಗೊಂದಲದಲ್ಲಿದ್ದಾಗ ಪಿಂಕ್ ಚೂಡಿದಾರ ಧರಿಸಿದ ಬೆಡಗಿಯೊಬ್ಬಳು ಬಿಳಿ ಬಣ್ಣದ ಡಿಯೋದಲ್ಲಿ ಬರುತ್ತಿರುವುದನ್ನು ನೋಡಿದೆ. ಈ ಹುಡುಗಿಯನ್ನು ಡ್ರಾಪ್ ಕೇಳಿದರೆ ಕೊಡುತ್ತಾಳಾ? ಖಂಡಿತಾ ಇಲ್ಲಾ ಎಂದು ವಿವೇಕ ಹೇಳುತ್ತಿತ್ತು. ಆದರೂ, ಪ್ರಯತ್ನ ಪಡುವುದರಲ್ಲೇನು ತಪ್ಪು? ಎಂದು ಮನಸ್ಸು ಹೇಳುತ್ತಿತ್ತು. ಗಟ್ಟಿ ಮನಸ್ಸು ಮಾಡಿ ಡ್ರಾಪ್ ಪ್ಲೀಸ್ ಎಂದು ಕೈ ಸನ್ನೆ ಮಾಡಿದೆ. ಅವಳು ನೋಡಿದರೂ ನೋಡದ ಹಾಗೆ ಸ್ವಲ್ಪ ದೂರ ಹೋಗಿ ಮೊಪೆಡ್ ನಿಲ್ಲಿಸಿ “ಬನ್ನಿ’ ಎಂದು ಕರೆದಳು. ನನ್ನ ಹೆಗಲಿಗಿದ್ದ ಬ್ಯಾಗನ್ನು ಗಟ್ಟಿಯಾಗಿ ಹಿಡಿದು ಓಡಿ ಹೋದೆ. ಅವಳನ್ನು ಕ್ಲೋಸಪ್‌ನಲ್ಲಿ ನೋಡಿದ ತಕ್ಷಣ, ದೇವಲೋಕದ ಊರ್ವಶಿಯೇ ನನಗೆ ಸಹಾಯ ಮಾಡಲೆಂದು ಬಂದಿದ್ದಾಳೆ ಎಂದು ಅನಿಸಿದ್ದಂತೂ ನಿಜ.
ಸ್ಕೂಟಿ ಮೇಲೆ ಕುಳಿತಾಗ ಏನೋ ಒಂಥರದ ಉಲ್ಲಾಸ. ಯಾರೋ ಕಚಗುಳಿ ಇಡುತ್ತಿರುವಂತೆ ಭಾಸವಾಗುತ್ತಿತ್ತು. “ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ’ ಎಂಬ ಹಾಡು ನೆನಪಾಗಿದ್ದೇ ಆಗ. ಅವಳ ರೇಷ್ಮೆಯಂಥ ಕೂದಲು ನನ್ನ ಮುಖದ ಮೇಲೆ ಚೆಲ್ಲಾಟ ಆಡುತ್ತಿದ್ದವು. ಅವಳು ಮುಡಿದಿದ್ದ ಮಲ್ಲಿಗೆಯ ಸುಗಂಧ ಘಂ ಎಂದು ಮೂಗಿಗೆ ತಾಕುತ್ತಿತ್ತು. ನಾನು ಹಾಗೆಯೇ ಹಗಲುಗನಸಿನಲ್ಲಿ ಮುಳುಗಿ ಹೋದೆ. ಅವಳೇ “ನಿಮ್ಮನ್ನು ಎಲ್ಲಿಗೆ ಬಿಡಬೇಕು?’ ಎಂದು ಕೇಳಿ ನನ್ನನ್ನು ಎಚ್ಚರಿಸಿದಳು. “ಯೂನಿವರ್ಸಿಟಿವರೆಗೆ’ ಅಂದೆ, ಅದಕ್ಕೆ ಅವಳು “ಓಹ್, ನಾನೂ ಅಲ್ಲಿಗೇ ಹೊರಟಿರುವೆ’ ಎಂದಳು. ಆಗ ನನ್ನ ಮನಸ್ಸಿಗೆ ಆದ ಖುಷಿಯನ್ನು ಪದಗಳಲ್ಲಿ ಬಣ್ಣಿಸಲಾಗದು.
ನಾನು ಪೆದ್ದು ಪೆದ್ದು ಪ್ರಶ್ನೆಗಳನ್ನು ಕೇಳಲು ಶುರುಮಾಡಿದೆ. “ನೀವು ಎಕ್ಸಾಂ ಬರೆಯಲು ಹೊರಟಿದ್ದೀರಾ?’, “ಯಾವ ವಿಭಾಗ?’, “ನಿಮ್ಮನ್ನು ನಾನು ವಿವಿಯಲ್ಲಿ ಇದೇ ಮೊದಲ ಸಲ ನೋಡುತ್ತಿರುವುದು’… ಹೀಗೆ ವಿಶ್ವವಿದ್ಯಾಲಯ ಮುಟ್ಟುವವರಗೂ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ. ಅವಳು ನನ್ನ ಎಲ್ಲ ಪ್ರಶ್ನೆಗಳಿಗೆ “ಹೂಂ’ ಎಂದು ತಲೆ ಅಲ್ಲಾಡಿಸುತ್ತಿದ್ದಳು.
ಯುನಿವರ್ಸಿಟಿ ಕಂಡಿದ್ದೇ ತಡ “ಥ್ಯಾಂಕ್ ಯು’ ಎಂದು ಧನ್ಯವಾದ ಹೇಳಿ ಪರೀಕ್ಷೆ ಬರೆಯಲು ಓಡಿದೆ. ಎಕ್ಸಾಂ ಆರಂಭವಾಗಲು ಇನ್ನೂ ಸಮಯ ಇತ್ತು. ನನ್ನ ಹಾಲ್‌ಟಿಕೆಟ್ ನಂಬರ್ ಪ್ರಕಾರ ಹೋಗಿ ಕುಳಿತುಕೊಂಡೆ. ಸ್ವಲ್ಪ ಹೊತ್ತಿನ ನಂತರ ಎಲ್ಲರೂ ನನ್ನನ್ನೇ ನೋಡುತ್ತಿರುವುದನ್ನು ಗಮನಿಸಿದೆ. ಹಿಂತಿರುಗಿ ನೋಡಿದರೆ ನನಗೆ ಡ್ರಾಪ್ ಕೊಟ್ಟಿದ್ದ ಹುಡುಗಿ ನಿಂತಿದ್ದಳು. ನನ್ನನ್ನು ನೋಡಿ ಮುಗುಳ್ನಕ್ಕಳು. ಅವಳನ್ನು ನೋಡಿ ನನಗೆ ಆಶ್ಚರ್ಯವಾಯಿತು ಅವಳೂ ಪರೀಕ್ಷೆ ಬರೆಯಲು ಬಂದಿದ್ದಾಳಲ್ಲ ಅಂತ. ಆಮೇಲೆ ಗೊತ್ತಾಯಿತು: ಅವಳು ಬಂದಿದ್ದು ಪರೀಕ್ಷೆ ಬರೆಯಲು ಅಲ್ಲ, ಅವಳೇ ನಮ್ಮ ರೂಂ ಸೂಪರ್‌ವೈಸರ್ ಅಂತ!
ಆರೀಫ್ ವಾಲೀಕಾರ, ಬೆಳಗಾವಿ