Advertisement

ನಾಗರಿಕರಲ್ಲಿ ವಿಶ್ವಾಸ ಬೆಳೆಸಲು ಬೀಟ್‌ ಪದ್ಧತಿ

12:44 PM Apr 22, 2017 | |

ದಾವಣಗೆರೆ: ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಯಲ್ಲಿನ ಶೇ.90ರಷ್ಟು ಸಿಬ್ಬಂದಿಗೆ ಜವಾಬ್ದಾರಿ ವಹಿಸುವ ಜೊತೆಗೆ ನಾಗರಿಕರೊಂದಿಗೆ ಉತ್ತಮ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ರೂಪಕ್‌ ಕುಮಾರ್‌ ದತ್ತಾ ತಿಳಿಸಿದ್ದಾರೆ. 

Advertisement

ಶುಕ್ರವಾರ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ನೂತನ ಸಭಾಂಗಣ, ವೆಬ್‌ಸೈಟ್‌ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್‌ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ರಾಜ್ಯದ್ಯಾಂತ ನೂತನ ಬೀಟ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರತಿ ಪ್ರದೇಶದಲ್ಲೂ ಬೀಟ್‌ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಪೇದೆ, ಮುಖ್ಯಪೇದೆಗಳನ್ನು ಬೀಟ್‌ ಅಧಿಕಾರಿಗಳು ಎಂದು ನಿಯೋಜಿಸಲಾಗಿದೆ ಎಂದು ತಿಳಿಸಿದರು. 

ಬೀಟ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಗಸ್ತು ಜವಾಬ್ದಾರಿ ಜೊತೆಗೆ ಅಕ್ರಮ ಚಟುವಟಕೆ ಬಗ್ಗೆ ಠಾಣಾಧಿಕಾರಿಗಳ ಗಮನಕ್ಕೆ ತರುವರು. ನೂತನ ಬೀಟ್‌ ವ್ಯವಸ್ಥೆಯಲ್ಲಿ ನಾಗರಿಕರ ಸಮಿತಿ ರಚಿಸಲಾಗುವುದು. ಬೀಟ್‌ ಅಧಿಕಾರಿಗಳು ಅಪರಾಧ, ಅಕ್ರಮ ಚಟುವಟಿಕೆ ನಿಯಂತ್ರಣದ ಜೊತೆಗೆ ಸಾರ್ವಜನಿಕರ ದುಖಃ ದುಮ್ಮಾನಗಳ ಬಗ್ಗೆ ಗಮನ ನೀಡುವರು.

ತಮ್ಮ ವ್ಯಾಪ್ತಿಗೂ ಮೀರಿದ ಪ್ರಕರಣ ಇದ್ದಲ್ಲಿ ಠಾಣಾಧಿಕಾರಿ ಗಮನಕ್ಕೆ ತಂದು ಸಾರ್ವಜನಿಕರು ನಿರ್ಭಯದಿಂದ ಠಾಣೆಗೆ ಬಂದು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತಾಗಲು ಸೇತುವೆಯಾಗಿ ಕೆಲಸ ಮಾಡುವರು. ಇದರಿಂದ ಪೊಲೀಸ್‌ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ, ನಂಬಿಕೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. 

ಇನ್ನು ಮುಂದೆ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌, ಮುಖ್ಯ ಪೇದೆಗಳಿಗೆ ಚಿಕ್ಕ ಪುಟ್ಟ ಅಪಘಾತ, ಗಾಯಗೊಂಡ ಪ್ರಕರಣ ಬಗ್ಗೆ ತನಿಖೆ ನಡೆಸಿ, ಪ್ರಾಥಮಿಕ ತನಿಖಾ ವರದಿ ಸಲ್ಲಿಸುವ ಜವಾಬ್ದಾರಿ ಕೊಡಲಾಗುವುದು. ಠಾಣಾಧಿಕಾರಿಗಳು ಮೇಲುಸ್ತುವಾರಿ ವಹಿಸುತ್ತಾರೆ. ಈ ವ್ಯವಸ್ಥೆಯಿಂದ ಠಾಣಾಧಿಕಾರಿಗಳಿಗೆ ಒತ್ತಡ ಕಡಿಮೆ ಆಗಲಿದೆ.  

Advertisement

ಕೆಳಗಿನ ಸಿಬ್ಬಂದಿ ತಾವು ಇತರೆ ಅಧಿಕಾರಿಗಳಂತೆ ತನಿಖೆ ನಡೆಸಿ, ಪ್ರಾಥಮಿಕ ತನಿಖಾ ವರದಿ ಸಲ್ಲಿಸಬಹುದು ಎಂಬ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವರು ಎಂದು ತಿಳಿಸಿದರು. ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿ ಇವೆ. ದಾವಣಗೆರೆ ಜಿಲ್ಲೆಯಲ್ಲಿ ಶೇ. 10 ರಷ್ಟಿದ್ದರೆ, ಬೆಳಗಾವಿಯಲ್ಲಿ ಶೇ. 50 ರಷ್ಟಿದೆ.

2017-18 ಸಾಲಿನ ಜೊತೆಗೆ 2018-19ನೇ ಸಾಲಿನ ಹುದ್ದೆಗಳ ಭರ್ತಿಗೂ ಅವಕಾಶ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗೃಹ ಸಚಿವರೊಂದಿಗೆ ಚರ್ಚಿಸಲಾಗಿದೆ. ಎರಡು ಸಾಲಿನ ಹುದ್ದೆಗಳನ್ನ ಭರ್ತಿ ಮಾಡಿಕೊಂಡ ನಂತರವೂ 2 ಸಾವಿರದಷ್ಟು ಹುದ್ದೆ ಖಾಲಿ ಉಳಿಯಲಿವೆ. ಪ್ರತಿ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 20ರಷ್ಟು ಮೀಸಲಾತಿ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಈಚೆಗೆ ಸೈಬರ್‌ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಯಲ್ಲಿ ಹೊಸದಾಗಿ ಸೈಬರ್‌ ಮತ್ತು ಆರ್ಥಿಕ ಅಪರಾಧ ಪೊಲೀಸ್‌ ಠಾಣೆ ಪ್ರಾರಂಭಿಸಲಾಗುವುದು. ಕಮೀಷನರೇಟ್‌ ಇರುವ ಕಡೆ 2 ಸೈಬರ್‌ ಮತ್ತು ಆರ್ಥಿಕ ಅಪರಾಧ ಪೊಲೀಸ್‌ ಠಾಣೆ ಇರಲಿವೆ. ಸೈಬರ್‌ ಮತ್ತು ಆರ್ಥಿಕ ಅಪರಾಧ ಪೊಲೀಸ್‌ ಠಾಣೆಗೆ ಅಗತ್ಯವಾಗಿ ಬೇಕಾದ ಉಪಕರಣ ಹಾಗೂ ತಜ್ಞರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈಗಾಗಲೇ ಅನೇಕ ಅಧಿಕಾರಿಗಳು, ಸಿಬ್ಬಂದಿಗೆ ಸೈಬರ್‌ ಮತ್ತು ಆರ್ಥಿಕ ಅಪರಾಧ ಪ್ರಕರಣ ಪತ್ತೆ ವಿಧಾನದ ಬಗ್ಗೆ ತರಬೇತಿ ನೀಡಲಾಗುತ್ತಿದೆ. 2015 ರಲ್ಲಿ ಮಂಜೂರಾದ 41 ಠಾಣೆಗಳನ್ನು ಸೈಬರ್‌ ಮತ್ತು ಆರ್ಥಿಕ ಅಪರಾಧ ಪೊಲೀಸ್‌ ಠಾಣೆಗಳಾಗಿ ಪರಿವರ್ತಿಸಲು ಸೂಚನೆನೀಡಲಾಗಿದೆ ಎಂದು ತಿಳಿಸಿದರು. ಹೊಸ ವಲಯ, ಕಮೀಷನರೇಟ್‌ ಪ್ರಾರಂಭಿಸುವ ಚಿಂತನೆ ಇಲ್ಲ. ಹೊಸ ಪೊಲೀಸ್‌ ಠಾಣೆ ಪ್ರಾರಂಭದ ಬಗ್ಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. 

ವರ್ಷಕ್ಕೆ 20-25 ಠಾಣೆಗಳಿಗೆ ಮಂಜೂರಾತಿ ದೊರೆಯುತ್ತದೆ. ಆದ್ಯತೆಯ ಮೇರೆಗೆ ನೂತನ ಠಾಣೆ ಪ್ರಾರಂಭಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪೂರ್ವ ವಲಯ ಪೊಲೀಸ್‌ ಮಹಾ ನಿರೀಕ್ಷಕ ಡಾ| ಎಂ.ಎ. ಸಲೀಂ, ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಅರುಣ್‌ ರಂಗರಾಜನ್‌ ಇತರರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next