Advertisement
ವಾಣಿಜ್ಯ ನಗರಿ ಚಿಂತಾಮಣಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ದರ ಸಮರ ಮುಂದುವರೆಯುತ್ತಿರುವ ವೇಳೆಯೇ ಕಳೆದ 15 ದಿನಗಳ ಹಿಂದೆಯಷ್ಟೇ 1 ಕಿ.ಲೋ 30 ರಿಂದ 40 ರೂ.ಗೆ ಮಾರಾಟವಾಗುತ್ತಿದ್ದ ಬೀನ್ಸ್ ಇದೀಗ 110 ರ ಗಡಿ ದಾಟಿರುವುದು ಹಾಗೂ ಇತರೆ ತರಕಾರಿಗಳ ಬೆಲೆಯೂ ಸಹ ಗಗನಕ್ಕೇರಿರುವುದು ಸಾರ್ವಜನಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
Related Articles
Advertisement
ಬೆಂಡೆಕಾಯಿ 40, ಬದನೆ 50 ಕ್ಕೆ ಮಾರಾಟವಾದರೆ ಪ್ರತಿ ನಿತ್ಯ ಬಳಸುವ ಕೊತ್ತಂಬರಿ ಸೊಪ್ಪು ಒಂದು ಕಟ್ಟು 35 ರೂ. ಆದರೆ ಸೊಪ್ಪುಗಳಲ್ಲಿ ದಂಟು ಸೊಪ್ಪು 20, ಮೆಂತ್ಯ 25, ಸಬ್ಬಕ್ಕಿ 20, ಪುದಿನ 20 ರೂ.ಗೆ ಮಾರಾಟವಾಗುತ್ತಿದ್ದು, ಪ್ರಸ್ತುತ ಸೊಪ್ಪು ಮತ್ತು ತರಕಾರಿ ಬೆಳೆದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ.
ಉತ್ಪಾದನೆ ಕುಸಿತ: ಮಾರುಕಟ್ಟೆಯಲ್ಲಿ ಬೀನ್ಸ್‌ಗೆ ಬಂಪರ್ ಬೆಲೆ ಬರಲು ಮುಖ್ಯ ಕಾರಣ ಬರ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸತತ ನಾಲ್ಕೆçದು ವರ್ಷಗಳಿಂದ ಕಾಡುತ್ತಿರುವ ಮಳೆ ಕೊರತೆಯಿಂದಾಗಿ ಈಗಾಗಲೇ ಅಂತರ್ಜಲ ಬತ್ತಿ ಹೋಗಿ ಕೊಳವೆ ಬಾವಿಗಳು ಸ್ಥಗಿತಗೊಂಡಿರುವ ಪರಿಣಾಮ ತೋಟಗಳು ಒಣಗಲಾರಂಭಿಸಿವೆ.
ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆಗಳು ಸಿಗದೆ ಕಂಗಾಲಾಗಿರುವ ಅನ್ನದಾತ ತರಕಾರಿ ಬೆಳೆಯುವುದನ್ನು ಕೈಬಿಟ್ಟಿದ್ದಾನೆ. ಪರಿಣಾಮ ಗ್ರಾಹಕರು ಅತಿ ಹೆಚ್ಚು ಇಷ್ಟಪಡುವ ಬೀನ್ಸ್ ಇದೀಗ ಮಾರುಕಟ್ಟೆಯಲ್ಲಿ ಗಗನ ಕುಸುಮವಾಗಿದೆ.
ಜನ ಸಾಮಾನ್ಯರಿಗೆ ಹೊರೆ: ಬೀನ್ಸ್ ಬೆಲೆ ಹೆಚ್ಚಳ ಸಹಜವಾಗಿಯೇ ಜನ ಸಾಮಾನ್ಯರಿಗೆ, ರೈತಾಪಿ ಕೂಲಿ ಕಾರ್ಮಿಕರಿಗೆ ಹೊರೆಯಾಗಿದೆ. ಇನ್ನೂ ಹೋಟೆಲ್ ಮಾಲೀಕರಿಗೂ ಬೆಲೆ ಹೆಚ್ಚಳ ತೀವ್ರ ಕಸಿವಿಸಿ ಉಂಟು ಮಾಡಿದೆ. ಸದ್ಯ ಮದುವೆ ಮತ್ತಿತರ ಶುಭ, ಸಮಾರಂಭಗಳು ಹೆಚ್ಚಾಗಿ ನಡೆಯುವುದರಿಂದ ಸಹಜವಾಗಿಯೇ ತರಕಾರಿ ಬೆಳೆಗಳು ಮಾರ್ಚ್‌ನಿಂದ ಮೇ ತಿಂಗಳವರೆಗೂ ಇದೇ ರೀತಿಯ ಬೆಲೆ ಇರುತ್ತದೆ ಎಂದು ಹೇಳುತ್ತಾರೆ ಹೋಟೆಲ್ ಮಾಲಿಕ ಮಂಜುನಾಥ.
ಕಿ.ಲೋ ಬೀನ್ಸ್ ಮಾರುಕಟ್ಟೆಯಲ್ಲಿ 110 ರೂ. ಆಗಿದೆ. ಅದೇ 110 ಕೊಟ್ಟರೆ ಬೇರೆ ತರಕಾರಿ ಎರಡು, ಮೂರು ಕೆಜಿಯಷ್ಟು ಖರೀದಿ ಮಾಡಬಹುದು. ಸದ್ಯ ಬೇಸಿಗೆಯಿಂದಾಗಿ ಎಲ್ಲಾ ತರಿಕಾರಿಗಳ ಬೆಲೆಗಳು ಏರಿಕೆಯಾಗುತ್ತಿವೆ. ಇದರಿಂದ ತರಕಾರಿ ಕೊಂಡುಕೊಳ್ಳುವುದು ಕಷ್ಟಕರವಾಗಿದೆ. -ಆದಿಲಕ್ಷ್ಮೀ, ಗೃಹಿಣಿ ಟ್ಯಾಂಕ್‌ಬಂಡ್ ರಸ್ತೆ ಬೇಸಿಗೆ ಪ್ರಾರಂಭವಾದ ಪರಿಣಾಮ ತರಕಾರಿ ಬೆಳೆಗಳು ಉತ್ಪಾದನೆ ತೀರ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದರಿಂದ ರೈತರಿಗೆ ಸ್ವಲ್ಪ ಲಾಭದಾಯಕವೇನಿಸಿದರೂ ಗ್ರಾಹಕರಿಗೆ ತೊಂದರೆಯಾಗಿದೆ.
-ಕಿರಣ್ ಕುಮಾರ್, ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ತರಕಾರಿ ಬೆಲೆ ಗಗನಕ್ಕೇರಿರುವುದರಿಂದ ಗ್ರಾಹಕರು ಗೋಳಾಡುತ್ತಾರೆ. ಬೆಲೆ ಜಾಸ್ತಿ ಎಂದು ಹಿಂದಿರುಗುತ್ತಾರೆ. ಇದರಿಂದ ಖರೀದಿಸಿದ ತರಕಾರಿ ಉಳಿಯುತ್ತದೆಂಬ ಆತಂಕದಿಂದ ಲಾಭವಿಲ್ಲದಿದ್ದರೂ ಮಾರಾಟ ಮಾಡುವ ದುಸ್ಥಿತಿ ಎದುರಾಗಿದೆ.
-ಗೋಪಿ, ತರಕಾರಿ ವ್ಯಾಪಾರಸ್ಥ