Advertisement

ಬೀಚ್‌ ರಸ್ತೆ ಸಮುದ್ರ ಪಾಲಾಗುವ ಭೀತಿ

10:21 AM Jul 15, 2018 | Team Udayavani |

ಉಳ್ಳಾಲ : ಸೋಮೇಶ್ವರ ಉಚ್ಚಿಲ, ಮುಕ್ಕಚ್ಚೇರಿ, ಸೀಗ್ರೌಂಡ್‌, ಕಿಲೇರಿಯಾ ನಗರದಲ್ಲಿ ಸಮುದ್ರ ಕೊರೆತ ಪ್ರಾರಂಭಗೊಂಡಿದ್ದು, ಉಚ್ಚಿಲ ಬೀಚ್‌ ರಸ್ತೆಯಿಂದ ಸೋಮೇಶ್ವರ ರೈಲು ನಿಲ್ದಾಣ ವನ್ನು ಸಂಪರ್ಕಿಸುವ ಉಚ್ಚಿಲ ಪೆರಿಬೈಲು ಬಳಿ ಸಮುದ್ರದ ನೀರು ರಸ್ತೆಗೆ ನುಗ್ಗಿ ಸಂಪರ್ಕ ಕಡಿತದ ಭೀತಿ ಉಂಟಾಗಿದೆ.

Advertisement

ಉಳ್ಳಾಲದಲ್ಲಿ ಶಾಶ್ವತ ಕಾಮಗಾರಿಯಿಂದ ಮೊಗವೀರಪಟ್ಣವರೆಗೆ ಕಡಲ್ಕೊರೆತ ಕಡಿಮೆಯಾಗಿದೆ. ಪರಿಣಾಮ 8 ವರ್ಷಗಳಿಂದ ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತ ಉಂಟಾಗುತ್ತಿದೆ. ಕೊರೆತದಿಂದ ಬೀಚ್‌ ರಸ್ತೆಯ ಒಂದು ಬದಿಯ ಮನೆಗಳು, ಅನೇಕ ಗೆಸ್ಟ್‌ ಹೌಸ್‌ಗಳು ಸಮುದ್ರ ಪಾಲಾಗಿತ್ತು. ಮೂರು ವರ್ಷಗಳಿಂದ ನ್ಯೂ ಉಚ್ಚಿಲದಿಂದ ಬಟ್ಟಪ್ಪಾಡಿವರೆಗೆ ತಾತ್ಕಾಲಿಕ ಕಲ್ಲು ಹಾಕಿದ್ದರಿಂದ ಕೆಲವು ಮನೆಗಳ ರಕ್ಷಣೆಯಾಗಿದ್ದು, ಪೆರಿಬೈಲು ಬಳಿ ಮನೆಗಳು ಮೊದಲೇ ಸಮುದ್ರ ಪಾಲಾದ ಕಾರಣ ಈ ವ್ಯಾಪ್ತಿಯಲ್ಲಿ ತಾತ್ಕಾಲಿಕ ತಡೆಗೋಡೆ ಕಾಮಗಾರಿ ನಡೆದಿರಲಿಲ್ಲ. ಆದರೆ ಈಗ ಬೀಚ್‌ ರಸ್ತೆ ಸೋಮೇಶ್ವರದಿಂದ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ.

ಉರುಳಿದ ಮರಗಳು
ಮೂರು ವರ್ಷಗಳಲ್ಲಿ ಈ ವ್ಯಾಪ್ತಿಯ ಸುಮಾರು 100ಕ್ಕೂ ಅಧಿಕ ಗಾಳಿ ಮರಗಳು ಸಮುದ್ರ ಪಾಲಾಗಿವೆ. ಮರಗಳು ಉರುಳಿದ ಬಳಿಕ ಅದರಡಿಯಲ್ಲಿದ್ದ ಕಲ್ಲುಗಳು 1 ತಿಂಗಳಿನಿಂದ ಕಾಣುತ್ತಿದ್ದು, ಉಳಿದಿರುವ 3 ಮರಗಳು ಶನಿವಾರ ಧರೆಗುರುಳಿವೆ. 

ವಿದ್ಯುತ್‌ ಕಂಬಗಳ ಸ್ಥಳಾಂತರ
ಬೀಚ್‌ ರಸ್ತೆಯ ಪೆರಿಬೈಲು ಬಳಿ ಸಮುದ್ರ ಬದಿಯಲ್ಲಿದ್ದ ವಿದ್ಯುತ್‌ ಕಂಬಗಳು ತಿಂಗಳ ಹಿಂದೆ ಬಂದಿದ್ದ ಗಾಳಿಮಳೆಗೆ ಧರೆಗುರುಳಿತ್ತು. ಇದೀಗ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಇರುವ ಕಂಬಗಳು ತುಂಡಾಗಿ ಬಿದ್ದಿದೆ. ಶನಿವಾರ ರಸ್ತೆಯ ಇನ್ನೊಂದು ಬದಿಗೆ ಕಂಬ ಗಳ ಸ್ಥಳಾಂತರಿಸುವ ಕಾರ್ಯ ಆರಂಭಗೊಂಡಿದೆ. ಶನಿವಾರ ಮಧ್ಯಾಹ್ನವರೆಗೆ ಬೀಚ್‌ ರಸ್ತೆಯ ಸಂಪರ್ಕ ತಡೆಹಿಡಿದಿದ್ದು, ಕಂಬ ಸ್ಥಳಾಂತರಕ್ಕಾಗಿ ಸುಮಾರು 10ಕ್ಕೂ ಹೆಚ್ಚು ಗಾಳಿಮರಗಳನ್ನು ಕಡಿಯಲಾಗಿದೆ.

ಪೆರಿಬೈಲ್‌ನಿಂದ ಸೋಮೇಶ್ವರ ಸಂಪರ್ಕಿಸಲು ಅರ್ಧ ಕಿ.ಮೀ. ಆದರೆ ರಸ್ತೆ ಸಮುದ್ರ ಪಾಲಾದರೆ ಸುಮಾರು 5 ಕಿ.ಮೀ. ಸಂಚಾರ ಮತ್ತು ಎರಡು ರೈಲ್ವೇಗೇಟ್‌ಗಳನ್ನು ದಾಟಿ ಸಾಗಾಬೇಕಾದರೆ ಸುಮಾರು ಐದು ನಿಮಿಷದ ದಾರಿಗೆ ಅರ್ಧ ಗಂಟೆಗಿಂತಲೂ ಹೆಚ್ಚು ಸಮಯ ಸುತ್ತಾಡಬೇಕಾಗುವುದು. ಪ್ರತೀ ಬಾರಿ ಸಮುದ್ರ ಕೊರೆತ ಆರಂಭದ ಬಳಿಕ ಒಂದಿಷ್ಟು ಕಲ್ಲು ಹಾಕಿ ತೆರಳಿದರೆ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವುದು ಇನ್ನೊಂದು ಬಾರಿ ಸಮುದ್ರ ಕೊರೆತ ಆದಾಗ ಮಾತ್ರ. ಮೂರು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಮರಗಳು ಸಮುದ್ರ ಪಾಲಾಗಿ ಸುಮಾರು ಅರ್ಧ ಕಿ.ಮೀ. ಭೂಮಿಯನ್ನು ಸಮುದ್ರ ಆವರಿಸಿಕೊಂಡು ರಸ್ತೆಯ ಬದಿಗೆ ಬಂದಿದೆ. ಕಳೆದ ಬಾರಿ ಓಖೀ ಚಂಡಮಾರುತ ಸಂದರ್ಭ ಈ ವ್ಯಾಪ್ತಿಯಲ್ಲಿ ಹಾನಿ ಸಂಭವಿಸಿತ್ತು.

Advertisement

ರಸ್ತೆ ರಕ್ಷಣೆ ಶೀಘ್ರ
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ವ್ಯಾಪ್ತಿಯಲ್ಲಿ ಮನೆ ಇರುವ ಕಡೆ ತಾತ್ಕಾಲಿಕ ಕಲ್ಲುಗಳನ್ನು ಹಾಕುವ ಕಾರ್ಯನಡೆಯುತ್ತಿದ್ದು ಪೆರಿಬೈಲು ವ್ಯಾಪ್ತಿಯಲ್ಲಿ ಶೀಘ್ರವೇ ಕಲ್ಲು ಹಾಕುವ ಕಾರ್ಯ ನಡೆಯಲಿದ್ದು, ರಸ್ತೆಯನ್ನು ರಕ್ಷಿಸುವ ಕಾರ್ಯ ನಡೆಯಲಿದೆ.
– ಸಂತೋಷ್‌, ಸಹಾಯಕ
ಆಯುಕ್ತ, ಕಂದಾಯ ಇಲಾಖೆ

30ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿ
ಓಖೀ ಚಂಡಮಾರುತದ ಸಮುದ್ರ ತೀರದಲ್ಲಿ ಸಮಸ್ಯೆಯಾದಾಗ ಜಿಲ್ಲಾಧಿಕಾರಿಗಳು ಸಹಿತ ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದರು. ಈವರೆಗೆ ಪರಿಹಾರ ಸಿಕ್ಕಿಲ್ಲ. ಈ ನಿರ್ಲಕ್ಷ್ಯದಿಂದಾಗಿ ಸುಮಾರು 30ಕ್ಕೂ ಹೆಚ್ಚು ಮನೆಗಳು ಅಪಾಯದ ಸ್ಥಿತಿಯನ್ನು ಎದುರಿಸುವಂತಾಗಿದೆ.
– ಅಬ್ಟಾಸ್‌ ಪೆರಿಬೈಲು, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next