ಕಾಸರಗೋಡು: ಇತಿಹಾಸ ಪ್ರಸಿದ್ಧ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರಗಳಲ್ಲೊಂದಾಗಿರುವ ಬೇಕಲ ಕೋಟೆ ಬೀಚ್ ಸಹಿತ ಕಾಸರಗೋಡು ಜಿಲ್ಲೆಯ ಸುಮಾರು 10 ಬೀಚ್‌ಗಳನ್ನು ಪ್ರವಾಸಿಗರನ್ನು ಕೈಬೀಸಿ ಕರೆಯುವ ಉದ್ದೇಶದಿಂದ ಅಭಿವೃದ್ಧಿಪಡಿಸಲು ಬಿಆರ್‌ಡಿಸಿ ಮುಂದಾಗಿದೆ. ‘ಬೀಚ್ ಟೂರಿಸಂ’ ಅಭಿವೃದ್ಧಿ ಸಾಧ್ಯತೆಯ ಆಧಾರದಲ್ಲಿ 1991ರಲ್ಲಿ ಕೇಂದ್ರ ಸರಕಾರ ಆಯ್ಕೆ ಮಾಡಿದ ದೇಶದ ಐದು ಬೀಚ್‌ಗಳಲ್ಲಿ ಬೇಕಲ ಬೀಚ್ ಒಂದು. ಈ ಬೀಚ್‌ನೊಂದಿಗೆ ಕಾಸರಗೋಡು ಜಿಲ್ಲೆಯ ಹತ್ತು ಬೀಚ್‌ಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯೊಂದನ್ನು ಬಿಆರ್‌ಡಿಸಿ ಹಮ್ಮಿಕೊಂಡಿದೆ. ಬೇಕಲ ಬೀಚ್‌ಗಳನ್ನು ಜೋಡಿಸಿ ಕೋಡಿ, ಕಾಪ್ಪಿಲ್, ಚೆಂಬರಿಕ, ತೃಕ್ಕನ್ನಾಡು ಮೊದಲಾದ ಹತ್ತು ಬೀಚ್‌ಗಳನ್ನು ಅಭಿವೃದ್ದಿಪಡಿಸಲಾಗುವುದು.
ತೆಂಗಿನ ಗರಿ, ಬಿದಿರು, ಸಮುದ್ರ ಉತ್ಪನ್ನಗಳು ಮೊದಲಾದವುಗಳನ್ನು ಬಳಸಿಕೊಂಡು ಕುಟೀರಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು. ಆಯಾಯ ಬೀಚ್‌ಗಳಿಗೆ ಹೊಂದಿಕೊಂಡು ಅಭಿವೃದ್ಧಿಪಡಿಸಲು ಸೂಕ್ತವಾದ ನೀಲನಕ್ಷೆಯನ್ನು ಸಿದ್ಧಪಡಿಸಲಾಗುವುದು. ಆ ಮೂಲಕ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ಅಗತ್ಯದ ಎಲ್ಲಾ ಸೌಲಭ್ಯ ನೀಡುವುದು ಉದ್ದೇಶವಾಗಿದೆ. ಬೀಚ್‌ನಲ್ಲಿ ಪ್ರವಾಸಿಗರಿಗೆ ವಿನೋದ ಕಾರ್ಯಕ್ರಮಗಳು ಮತ್ತು ಸಮಿಚಿ ರುಚಿಯಾದ ಆಹಾರ ಲಭಿಸುವಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಬೀಚ್ ವಾಲಿಬಾಲ್, ಬೀಚ್ ಫುಟ್ಬಾಲ್ ಮೊದಲಾದ ಗೇಮ್‌ಗಳು, ಸೀ ಫುಡ್, ಊರ ಆಹಾರ ಹೊಟೇಲ್‌ಗಳು, ಅಕ್ವೇರಿಯಂ, ಸಮುದ್ರದ ಕತೆಗಳನ್ನು ಹೇಳುವ ಮತ್ತು ಪ್ರಾದೇಶಿಕ ಇತಿಹಾಸಗಳ ಮಾಹಿತಿ ನೀಡುವ ಗ್ಯಾಲರಿಗಳನ್ನು ಸ್ಥಾಪಿಸಲಾಗುವುದು. ಕಡಲಾಮೆ, ಏಡಿ ಮೊದಲಾದ ಸಮುದ್ರ ಜೀವಿಗಳ ಆಕೃತಿಯಲ್ಲಿ ಮಕ್ಕಳಿಗಾಗಿ ಆಟದ ಉಪಕರಣಗಳನ್ನು ಬೀಚ್‌ನಲ್ಲಿ ವ್ಯವಸ್ಥೆಗೊಳಿಸಲಾಗುವುದು.
ಬಿಆರ್‌ಡಿಸಿಯ ಸೈಕಲ್ ಟೂರಿಸಂ ಯೋಜನೆಯೊಂದಿಗೆ ಬೀಚ್ ಪ್ರವಾಸೋದ್ಯಮವನ್ನು ಜೋಡಿಸಲಾಗುವುದು. ಎಲ್ಲ ಬೀಚ್‌ಗಳಲ್ಲೂ ಸೈಕಲ್ ಹಬ್‌ಗಳನ್ನು ಸ್ಥಾಪಿಸಲಾಗುವುದು. ಬೀಚ್‌ಗಳನ್ನು ಪರಸ್ಪರ ಜೋಡಿಸಿ ಸೈಕಲ್ ಟೂರ್‌ಗಳನ್ನು ಪ್ರೋತ್ಸಾಹಿಸಲಾಗುವುದು. ಪ್ರತಿಯೊಂದು ಬೀಚ್‌ನಲ್ಲೂ ಹೋಂಸ್ಟೇ ಸಹಿತ ವಾಸ್ತವ್ಯ ಹೂಡಲು ಸೌಕರ್ಯ ಕಲ್ಪಿಸಲಾಗುವುದು. ಇದಕ್ಕಾಗಿ ‘ಸ್ಮೈಲ್’ ಯೋಜನೆಯನ್ನು ಜೋಡಿಸಲಾಗುವುದು.
ಮೂಲ ಸೌಕರ್ಯ ಅಭಿವೃದ್ಧಿ
ಆಯಾಯ ಬೀಚ್‌ಗಳ ಅಭಿವೃದ್ಧಿ ಸಾಧ್ಯತೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಈ ಬೀಚ್‌ಗಳಿಗೆ ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಯೋಗ್ಯವಾದ ಸವಲತ್ತುಗಳನ್ನು ಸೌಲಭ್ಯಗಳನ್ನು, ಮೂಲ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಲಾಗುವುದು. ಬೀಚ್‌ಗಳ ಅಭಿವೃದ್ಧಿಯ ಸಂದರ್ಭಗಳಲ್ಲಿ ಸ್ಥಳೀಯರ ಸಹಭಾಗಿತ್ವವನ್ನು ಸ್ವಾಗತಿಸಲಾಗುವುದು. ಅಲ್ಲದೆ ಸ್ಥಳೀಯರ ವರಮಾನವನ್ನು ಹೆಚ್ಚಿಸುವ ಉದ್ದೇಶವು ಇದರಲ್ಲಿದೆ. ಪ್ರವಾಸೋದ್ಯಮದ ಪ್ರಯೋಜನ ಸಾಮಾನ್ಯ ಜನರಿಗೂ ಲಭಿಸುವಂತೆ ಮಾಡಲಾಗುವುದು. ಬೀಚ್‌ಗಳನ್ನು ಅಭಿವೃದ್ಧಿಪಡಿಸುವ ಜತೆಯಲ್ಲಿ ಮಾರುಕಟ್ಟೆಯನ್ನು ವ್ಯವಸ್ಥೆಗೊಳಿಸುವುದು ಮೊದಲಾದವು ಪ್ರಾಥಮಿಕ ಗುರಿಯಾಗಿವೆ ಎಂದು ಬಿಆರ್‌ಡಿಸಿ ಎಂ.ಡಿ. ಟಿ.ಕೆ.ಮನ್ಸೂರ್ ಹೇಳಿದ್ದಾರೆ.