Advertisement

ಗುರಿ ಸಾಧನೆಯಷ್ಟೇ ನಿಮ್ಮ ಆಲೋಚನೆಯಾಗಲಿ

09:48 PM Jan 20, 2020 | Lakshmi GovindaRaj |

ಹುಣಸೂರು: ವಿದ್ಯಾರ್ಥಿಗಳು ಓದುವಾಗ ಮದುವೆಯಿಂದ ದೂರವಿದ್ದು, ತಮ್ಮೊಳಗೆ ಅಡಗಿರುವ ಪ್ರತಿಭೆ ಅರಳಿಸುವ, ಗುರಿ ಸಾಧಿಸುವ ಕಡೆಗೆ ನಿಮ್ಮ ಆಲೋಚನೆ ಇರಬೇಕು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಸಲಹೆ ನೀಡಿದರು. ತಾಲೂಕಿನ ಹನಗೋಡು ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಹೆಣ್ಣು ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿರುತ್ತದೆ. ಈ ಪ್ರತಿಭೆ ನಿಮ್ಮ ಬದುಕಿನ ಪಥವಾಗಲಿ. ನಿಮ್ಮ ಗುರಿಗಳು ಸಮಾಜಕ್ಕೆ ಕೊಡುಗೆಯಾಗಲಿ. ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಿಮ್ಮ ಓದಿನ ಭಾಗವಾಗಲಿ. ತಾವೆಂದೂ ಪ್ರತಿಭೆಗಳಿಗೆ ಪ್ರೋತ್ಸಾಹಿಸುವವನಾಗಿದ್ದು, ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.

ಹನಗೋಡಿನ ಬಗ್ಗೆ ತಮಗೆ ತುಂಬಾ ಅಭಿಮಾನವಿದ್ದು, ಈ ಭಾಗದ ಹೆಣ್ಣು ಮಕ್ಕಳು ಕಾಲೇಜನ್ನು ಮಧ್ಯದಲ್ಲೇ ತೊರೆಯಬಾರದೆಂಬ ಉದ್ದೇಶದಿಂದ, ಇಲ್ಲಿಗೆ ಮಂಜೂರಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದ ಪದವಿ ಕಾಲೇಜನ್ನು ಮಂಜೂರು ಮಾಡಿಸಲು ಅಪಾರ ಶ್ರಮ ಹಾಕಿದ್ದರ ಶ್ರಮವಾಗಿ, ಈಗ ನೂರಾರು ವಿದ್ಯಾರ್ಥಿನಿಯರು ಪದವಿಗಳಿಸಿರುವುದು ತಮಗೆ ಹೆಮ್ಮೆ ಎನಿಸಿದೆ ಎಂದರು.

ಸುವರ್ಣ ಪ್ರಶಸ್ತಿ ಮುಂದುವರಿಕೆ: ತಮ್ಮ ತಾಯಿ ರತ್ನಮ್ಮ ಹೆಸರಿನಲ್ಲಿ ಸರಕಾರಿ ಶಾಲೆಯಲ್ಲಿ ಓದಿ, ತಾಲೂಕಿಗೆ ಟಾಪರ್‌ ಆಗುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಪದವಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣ ಪ್ರಶಸ್ತಿ ನೀಡುತ್ತಿದ್ದೇನೆ. ಅಲ್ಲದೆ ಉತ್ತಮ ಫಲಿತಾಂಶ ಪಡೆಯುವ ಶಾಲಾ-ಕಾಲೇಜುಗಳಿಗೂ ಶಾಸಕರ ನಿಧಿಯಿಂದ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡುವ ಪರಿಪಾಟ ಮುಂದುವರಿಸಲಿದ್ದು, ಇದರಿಂದ ಫಲಿತಾಂಶ ವೃದ್ಧಿಸಲಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.

ಇಲ್ಲಿನ ಪ್ರೌಢಶಾಲೆ ಶಿಥಿಲ ಕಟ್ಟಡ, ಪಿಯು ಕಾಲೇಜಿನ ಕಟ್ಟಡ ಕೊರತೆ, ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆ ಬಗ್ಗೆ ಅರಿವಿದೆ. ಎಲ್ಲ ಕೊರತೆಗಳನ್ನು ನೀಗಿಸಲು ಕ್ರಮವಹಿಸಲಾಗುವುದು ಎಂದು ವಾಗ್ಧಾನ ಮಾಡಿದರು. ಪ್ರಾಚಾರ್ಯ ರವೀಂದ್ರ ಕಾಲೇಜಿನ ಪ್ರಗತಿ ಬಗ್ಗೆ ವಿವರಿಸಿ, ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.

Advertisement

ಉಪನ್ಯಾಸಕ ಜನಾರ್ದನ್‌, ಶ್ರೀನಿವಾಸ್‌ಮೂರ್ತಿ, ಬಸವರಾಜು ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಸದಸ್ಯೆ ರೂಪಾನಂದೀಶ್‌, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಸದಸ್ಯರಾದ ಪೂಜಾ ಶಿವನಂಜು, ಪಲ್ಲವಿ, ಇಮಿಯಾಜ್‌ ಪಾಷಾ, ಚನ್ನಯ್ಯ, ಹೊಂಬೇಗೌಡ, ಮುಖಂಡರಾದ ಗಣಪತಿ, ಶಿವಣ್ಣ, ವೆಂಕಟಪ್ಪ, ದಯಾಕರ್‌, ಶಿವರಾಜು ಮತ್ತಿತರರು ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಯರಾದ ರಂಜಿತಾ‌, ಅನುಷಾ ನಿರೂಪಿಸಿದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next