Advertisement

ಗ್ರಾಮೀಣ ಜನರ ಸೇವೆ ಗುರಿಯಾಗಲಿ

12:08 PM Apr 13, 2018 | Team Udayavani |

ಬೆಂಗಳೂರು: ಗ್ರಾಮೀಣ ಜನರ ಸೇವೆಯೇ ನಮ್ಮ ಮಿಷನ್‌ ಆಗಬೇಕು. ವೈದ್ಯರ ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಕಾನೂನು ತಿದ್ದುಪಡಿ ಅವಶ್ಯಕ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಹೊಸೂರು ರಸ್ತೆಯ ನಿಮ್ಹಾನ್ಸ್‌ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ನಿಗದಿತ ಕಾಲಮಿತಿಯವರೆಗೂ ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ಮಾಡುವುದು ಅಗತ್ಯ.

ದೇಶದ ಶೇ.50ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅವರ ಸೇವೆ ಮಾಡದಿದ್ದರೆ ವೈದ್ಯರಾಗಿ ಏನು ಪ್ರಯೋಜನಾ? ಎಂದು ಪ್ರಶ್ನಿಸಿದರು. ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಸಾಕಷ್ಟಿದೆ. ಒಂದು ಸಾವಿರ ಜನರಿಗೆ ಒಬ್ಬರ ವ್ಯದ್ಯನೂ ಇಲ್ಲ. ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಯೂ ಸುಧಾರಿಸಬೇಕು. ಆರೋಗ್ಯ ಸೇವೆಯನ್ನು ನಗರ ಮತ್ತು ಗ್ರಾಮೀಣ ಭಾಗಕ್ಕೆ ಪ್ರತ್ಯೇಕಿಸದೇ ಸಮಾನವಾಗಿ ನೀಡಬೇಕು.

ನಮಗೆ ಎರಡು ಭಾರತವಿಲ್ಲ. ನಗರಪ್ರದೇಶದಲ್ಲಿ ಎಲ್ಲಾ ರೀತಿಯ ಸೌಲಭ್ಯ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳ ಕೊರತೆ ಇದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ವ್ಯವಸ್ಥೆಯನ್ನು ಸುಧಾರಿಸಬೇಕು. ವೈದ್ಯಕೀಯ ಸೇವೆ ಬಡವರಿಗೆ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು ಎಂದು  ಪ್ರತಿಪಾದಿಸಿದರು.

ಕಮೀಷನ್‌ ಅಲ್ಲ: ವೈದ್ಯ ವೃತ್ತಿಯು ಒಂದು ಉನ್ನತ “ಮಿಷನ್‌’ ಅದು “ಕಮೀಷನ್‌’ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವೈದ್ಯ ಪದವಿಯೊಂದಿಗೆ ವೃತ್ತಿ ಜೀವನವನ್ನು ಪ್ರವೇಶಿಸುವ ಪದವೀಧರರು ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಬೇಕು. ಸವಾಲುಗಳ ನಡುವೆಯೇ ಅವಕಾಶಗಳೂ ಇವೆ. 2030ಕ್ಕೆ ಭಾರತ ವಿಶ್ವದ ಬಲಿಷ್ಟ ಯುವ ರಾಷ್ಟ್ರವಾಗಿ ಹೊರಹೊಮ್ಮಲಿದೆ.

Advertisement

ಕೋಟ್ಯಾಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ ಎಂದು ಹೇಳಿದರು. ಜಗತ್ತು ಅತಿ ವೇಗವಾಗಿ ಬೆಳೆಯುತ್ತಿದೆ. ಎಲ್ಲವೂ ಜ್ಞಾನಾಧಾರಿತವಾಗುತ್ತಿದೆ. ವಿಶ್ವವೇ ಒಂದು ಹಳ್ಳಿಯಾಗಿದೆ. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದೆ ಮತ್ತು ಅನೇಕ ರೀತಿಯ ಸಾಧನೆಯನ್ನು ಮಾಡಿದೆ. ಆದರೂ, ಸಾಧಿಸಬೇಕಿರುವುದು ಸಾಕಷ್ಟಿದೆ ಎಂದು ತಿಳಿಸಿದರು.

ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕು. ಜನರು ತಮ್ಮ ಮೂಲ ಜೀವನ ಪದ್ಧತಿಗೆ ತೆರಳುವಂತೆ ವೈದ್ಯರು ಹಾಗೂ ವೈದ್ಯಕೀಯ ಪದವೀಧರರು ಪ್ರೇರೇಪಿಸಬೇಕು.  ನಮ್ಮ ಜೀವನ ಕ್ರಮ ಬದಲಾದ ಪರಿಣಾಮವಾಗಿ ಹತ್ತಾರೂ ಕಾಯಿಲೆಗಳನ್ನು ನಾವೇ ಸೃಷ್ಟಿಮಾಡಿಕೊಂಡಿದ್ದೇವೆ. ಲಘು ವ್ಯಾಯಾಮ, ದೈಹಿಕ ಕಸರತ್ತುಗಳನ್ನು ನಿಲ್ಲಿಸಿಬಿಟ್ಟಿರುವುದೇ ಎಲ್ಲಾ ಸಮಸ್ಯೆಗೂ ಮೂಲವಾಗಿದೆ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯಪಾಲ ವಿ.ಆರ್‌.ವಾಲಾ, ಕುಲಪತಿ ಡಾ.ಎಂ.ಕೆ.ರಮೇಶ್‌, ಸಂಶೋಧನಾ ವಿಭಾಗದ ನಿರ್ದೇಶಕ ಡಾ. ವೆಂಕಟೇಶ್‌, ಕುಲಸಚಿವ ಡಾ. ಸಿ.ಎಂ. ನೂರ್‌ ಮನ್ಸೂರ್‌ ಉಪಸ್ಥಿತರಿದ್ದರು.

ಘಟಿಕೋತ್ಸವದಲ್ಲಿ ವಿವಿಧ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿಗಳು ಪದವಿ ಪ್ರದಾನ ಮಾಡಿದರು. 68 ಪಿಎಚ್‌.ಡಿ., 138 ಸೂಪರ್‌ ಸ್ಪೆಷಾಲಿಟಿ, 5,581 ಸ್ನಾತಕೋತ್ತರ ಪದವಿ, 182 ಫೆಲೋಶಿಪ್‌ ಕೋರ್ಸ್‌, 18 ಪ್ರಮಾಣ ಪತ್ರ ಹಾಗೂ 20,482 ಪದವಿ ವಿದ್ಯಾರ್ಥಿಗಳಿಗೆ  ಪದವಿ ಪ್ರದಾನ ಮಾಡಲಾಯಿತು.

ಸಕಾರಾತ್ಮಕ ಚಿಂತನೆ ಇರಲಿ: “ಯೋಗವನ್ನು ಯಾರು ಬೇಕಾದರೂ ಮಾಡಬಹುದು. ಇದಕ್ಕೆ ಧರ್ಮವಿಲ್ಲ. ಕೆಲವರು ಯೋಗವನ್ನು ಧರ್ಮದೊಂದಿಗೆ ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಕೆಲವರಿಗೆ ನಕಾರಾತ್ಮಕವಾಗಿ ಚಿಂತಿಸುವುದೇ  ಹವ್ಯಾಸವಾಗಿಟ್ಟಿದೆ. ಮಾತನಾಡುವುದು, ವರ್ತಿಸುವುದು ಹಾಗೂ ಸಾಯುವುದು ಸೇರಿ ಎಲ್ಲವೂ ನಕಾರಾತ್ಮಕವಾಗಿಯೇ ಇರುತ್ತದೆ. ಸಕಾರಾತ್ಮಕ ಚಿಂತನೆಯಿಂದ ನಮ್ಮ ಶೇ.50ರಷ್ಟು ಸಮಸ್ಯೆ ಪರಿಹಾರವಾಗಲಿದೆ,’ ಎಂದು ವೆಂಕಯ್ಯ ನಾಯ್ಡು ಹೇಳಿದರು.

“ನೇಚರ್‌’, “ಕಲ್ಚರ್‌’ ನಿಂದ ಮಾತ್ರ ಬೆಟರ್‌ “ಫ್ಯೂಚರ್‌’. ಈ ಮೂರು ವಿಷಯ ಒಟ್ಟೊಟ್ಟಿಗೆ ಸಾಗಬೇಕು. ಎಷ್ಟು ಭಾಷೆ ಕಲಿತರೂ ತಪ್ಪಿಲ್ಲ. ಆದರೆ, ಮಾತೃಭಾಷೆ ಮರೆಯಬಾರದು. ಮಾತೃಭಾಷೆಯಲ್ಲಿ ಪರಿಪಕ್ವತೆ ಸಾಧಿಸಿದಷ್ಟೂ ಒಳ್ಳೆಯದು. ಮಾತೃಭಾಷೆ ನಮ್ಮ ಕಣ್ಣು ಇದ್ದಂತೆ, ಬೇರೆ ಭಾಷೆ ಕನ್ನಡಕದಂತೆ.
-ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next