Advertisement

ಅಸಾಧ್ಯವಾದುದನ್ನು ಸಾಧಿಸುವ ಛಲ ಇರಲಿ

09:50 PM Sep 09, 2019 | Lakshmi GovindaRaju |

ಹುಣಸೂರು: ಸಾಧನೆ ಎಂಬುದು ಯಾರ ಸ್ವತ್ತಲ್ಲ. ಅದನ್ನು ಸಿದ್ಧಿಸಿಕೊಳ್ಳಲು ಬರುವ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಛಾತಿ ಬೆಳೆಸಿಕೊಳ್ಳಬೇಕು. ಆತ್ಮಸ್ಥೈರ್ಯ, ಅಚಲ ಗುರಿ ಹೊಂದಬೇಕು ಎಂದು ಬೆಂಗಳೂರಿನ ಅಕರ್‌ಮಾರ್ಕ್ಸ್ ಸಾಫ್ಟ್‌ವೇರ್‌ ಟೆಕ್ನಾಲಜಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಸ್ನೇಹ ರಾಕೇಶ್‌ ಸಲಹೆ ನೀಡಿದರು. ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಸಾಧನೆಯ ಧ್ಯೇಯ: ಅಸಾಧ್ಯವಾದುದನ್ನು ಸಾಧ್ಯವಾಗಿಸುವುದೇ ನಿಮ್ಮ ಧ್ಯೇಯವಾಗಬೇಕು. ಎಲ್ಲಾ ಕಷ್ಟವನ್ನು ಎದುರಿಸಬೇಕು. ಬದುಕು ಅಂದುಕೊಂಡಷ್ಟು ಸುಲಭವಲ್ಲ. ನಿಷ್ಠೆ, ಪ್ರಾಮಾಣಿಕತೆಯಿಂದ ಕಲಿಯಬೇಕು. ಕಷ್ಟಪಟ್ಟಲ್ಲಿ ಮಾತ್ರ ಫಲ ಸಿಗಲು ಸಾಧ್ಯ. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.

ಇಂಗ್ಲೆಂಡ್‌ ಸಂಸತ್‌ನಲ್ಲಿ ಭಾಷಣ: ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿದ ನಾನು ಕೆಲಸಗಿಟ್ಟಿಸಲು ಇಂಗ್ಲಿಷ್‌ ಭಾಷಾ ಸಮಸ್ಯೆ ಸೇರಿದಂತೆ ಅನೇಕ ಕಷ್ಟಗಳನ್ನು ಎದುರಿಸಿದೆ. ಆದರೆ, ಎಲ್ಲವನ್ನು ಸವಾಲಾಗಿ ಸ್ವೀಕರಿಸಿ, ಛಲದಿಂದ ಕಲಿತಿದ್ದರಿಂದಾಗಿ ಇಂದು ಸ್ವಂತ ಕಂಪನಿ ಸ್ಥಾಪಿಸಿದ್ದೇನೆ. ಐದು ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದೇನೆ. ಸಹಸ್ರಾರು ಮಂದಿಗೆ ಕೆಲಸ ಕೊಟ್ಟಿದ್ದೇನೆ.

ಹಲವಾರು ಪ್ರಶಸ್ತಿಗಳ ಪುರಸ್ಕೃತನಾಗಿದ್ದೇನೆ. ಹಲವಾರು ದೇಶ ಸುತ್ತಿ, ಇಂಗ್ಲೆಂಡ್‌ನ‌ ಸಂಸತ್‌ನಲ್ಲಿ ಭಾಷಣ ಮಾಡಿರುವ ಕರ್ನಾಟಕದ ಪ್ರಥಮ ಮಹಿಳೆಯೆಂಬ ಹೆಗ್ಗಳಿಕೆ ನನ್ನದು. ವಿದ್ಯಾರ್ಥಿಗಳಲ್ಲಿ ಸಾಧಿಸಬೇಕೆನ್ನುವ ಛಲ ಮತ್ತು ಸವಾಲನ್ನು ಸ್ವೀಕರಿಸಿ ಮುನ್ನಡೆಯಬೇಕು ಎಂದು ತಮ್ಮ ಯಶೋಗಾಥೆಯನ್ನು ತೆರೆದಿಟ್ಟರು.ಇದೇ ವೇಳೆ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಲಿಕೆ: ಸಂಸದ ಪ್ರತಾಪ್‌ ಸಿಂಹ ಪತ್ನಿ ಅರ್ಪಿತಾ ಪ್ರತಾಪ್‌ಸಿಂಹ ಮಾತನಾಡಿ, ಕಲಿಕೆ ಜೀವನಪರ್ಯಂತ ನಡೆಯುವ ಕ್ರಿಯೆ. ನೀವು ಕಲಿತಿದ್ದನ್ನು, ನೀವು ಗಳಿಸಿದ್ದನ್ನು ಇಲ್ಲದವರಿಗೆ ನೀಡುವ ದೊಡ್ಡತನ ಮೆರೆಯಿರಿ ಎಂದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ನಂಜುಂಡಸ್ವಾಮಿ, ಕಾಲೇಜಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

Advertisement

ಸಿಡಿಸಿ ಸದಸ್ಯ ಶಿವಕುಮಾರ್‌.ವಿ.ರಾವ್‌, ಕಾಲೇಜಿನಲ್ಲಿ ಶೈಕ್ಷಣಿಕ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿದರು. ಕಾಲೇಜಿಗೆ ಹೆಚ್ಚುವರಿ ಕೊಠಡಿಗಳು ಮತ್ತು ವಸತಿನಿಲಯದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜ್ಞಾನಪ್ರಕಾಶ್‌, ಇತಿಹಾಸ ವಿಭಾಗದ ಮುಖ್ಯಸ್ಥ ಬಿ.ಎಂ.ನಾಗರಾಜ್‌, ಸಹಾಯಕ ಪ್ರಾಧ್ಯಾಪಕರಾದ ಆರ್‌.ಎನ್‌.ಭಾರತಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್‌.ಭಾಸ್ಕರ್‌, ಐಕ್ಯೂಎಸಿ ಸಂಚಾಲಕ ದೀಪು ಕುಮಾರ್‌, ಪುಟ್ಟಶೆಟ್ಟಿ, ವಿದ್ಯಾರ್ಥಿಗಳಾದ ಶ್ರುತಿ, ಸ್ವಾತಿ, ಪ್ರತಿಪ ಮಾತನಾಡಿದರು. ಇದೇ ವೇಳೆ, ವಿದ್ಯಾರ್ಥಿನಿಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು

ಸಾಧಕ ಉಪನ್ಯಾಸಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಡಾಕ್ಟರೇಟ್‌ ಪದವಿ ಪಡೆದ ಕಾಲೇಜಿನ ಪ್ರಾಧ್ಯಾಪಕರಾದ‌ ಡಾ.ನಂಜುಂಡಸ್ವಾಮಿ, ಡಾ.ಕೆ.ಎಸ್‌.ಭಾಸ್ಕರ್‌, ಡಾ.ಕಲಾಶ್ರೀ ಮತ್ತು ಡಾ.ಎಚ್‌.ಆರ್‌.ವಿಶ್ವನಾಥ್‌ ಅವರನ್ನು ಸನ್ಮಾನಿಸಲಾಯಿತು.

ಉದ್ಯೋಗಕ್ಕಾಗಿ ಸಂಪರ್ಕಿಸಿ: ಹಳ್ಳಿಗಾಡಿನ ಪದವಿ ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗುತ್ತಿರುವುದನ್ನು ಮನಗಂಡ ತಾವು, ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ್ದೇನೆ. ಪದವಿ ನಂತರ ಸಂಪರ್ಕಿಸಿದಲ್ಲಿ ಕೌಶಲ್ಯ ತರಬೇತಿ ನೀಡುವ ಜೊತೆಗೆ ಉದ್ಯೋಗ ಪಡೆದುಕೊಳ್ಳಲು ನೆರವಾಗುವುದಾಗಿ ಬೆಂಗಳೂರಿನ ಅಕರ್‌ಮಾರ್ಕ್ಸ್ ಸಾಫ್ಟ್‌ವೇರ್‌ ಟೆಕ್ನಾಲಜಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಸ್ನೇಹಾ ರಾಕೇಶ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next