Advertisement

ಗೋ ರಕ್ಷಕ ಪ್ರಭು ಚವ್ಹಾಣಗೆ ಒಲಿದ ಮಂತ್ರಿಗಿರಿ

04:48 PM Aug 05, 2021 | Team Udayavani |

ಬೀದರ: ಪಶು ಸಂಕುಲ ರಕ್ಷಣೆ ಜತೆಗೆ ಪಶು ಸಂಗೋಪನೆ ಮತ್ತು ವೈದ್ಯಕೀಯ ಇಲಾಖೆಗೆ ಹೊಸ ಆಯಾಮ ನೀಡಲು ಪ್ರಯತ್ನಿಸಿದ್ದ ಜಿಲ್ಲೆಯ ಔರಾದ ಮೀಸಲು ಕ್ಷೇತ್ರದ ಶಾಸಕ ಪ್ರಭು ಚವ್ಹಾಣಗೆ ಬಿಜೆಪಿ ಹೈಕಮಾಂಡ್‌ ಕೈಹಿಡಿದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಎರಡನೇ ಬಾರಿಗೆ ಸಚಿವ ಸ್ಥಾನ ಒಲಿದಿದೆ.

Advertisement

ಔರಾದ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿರುವ ಚವ್ಹಾಣ ಅವರು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿ, ಪಶು ಸಂಗೋಪನೆ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್‌ ಖಾತೆಗಳ ಜತೆಗೆ ಬೀದರ ಜಿಲ್ಲಾ ಉಸ್ತುವಾರಿಯನ್ನು ನಿಭಾಯಿಸಿದ್ದರು. ಬರೋಬ್ಬರಿ ಎರಡು ವರ್ಷ ಸಚಿವರಾಗಿದ್ದ ಪ್ರಭು ಚವ್ಹಾಣ ಅವರು ಬಿಎಸ್‌ವೈ ರಾಜೀನಾಮೆ ಹಿನ್ನೆಲೆ ಸಂಪುಟ ವಿಸರ್ಜನೆಗೊಂಡು ಸಚಿವ ಸ್ಥಾನದಿಂದ ದೂರವಾಗಿದ್ದರು.

ಈಗ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಹಳೆ ಸಚಿವರಿಗೆ ಕೋಕ್‌ ನೀಡಿದ್ದು, ಅದರಲ್ಲಿ ಚವ್ಹಾಣ ಸಹ ಸೇರಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಜಾತಿ ಲೆಕ್ಕಾಚಾರದಲ್ಲಿ ಹಿಂದುಳಿದ ಲಂಬಾಣಿ ಸಮುದಾಯದ ಇನ್ನೊಬ್ಬ ಶಾಸಕ ಪಿ. ರಾಜೀವ್‌ ಅವರಿಗೆ ಮಂತ್ರಿಗಿರಿ ಒಲಿಯಬಹುದು. ಇದರಿಂದ ಚವ್ಹಾಣಗೆ ಹುದ್ದೆ ಕೈತಪ್ಪಬಹುದೆಂದೇ ಅಂದಾಜಿಸಲಾಗಿತ್ತು. ಆದರೆ, ಪಕ್ಷ ನಿಷ್ಠೆ ಜತೆಗೆ ಖಾತೆಗಳ ಸಮರ್ಪಕ ನಿರ್ವಹಣೆ ಫಲವಾಗಿ ಇಂದು ಮತ್ತೂಮ್ಮೆ ಸಚಿವಗಿರಿ ದಕ್ಕಿದೆ ಎನ್ನಬಹುದು.

“ಗೋ ಮಾತೆ- ನನ್ನ ಮಾತೆ’ ಎಂದು ಸದಾ ಜಪಿಸುವ ಪ್ರಭು ಪಶು ಸಂಗೋಪನೆ ಇಲಾಖೆಗೆ ಕಾಯಕಲ್ಪ ನೀಡುವ ಕೆಲಸ ಮಾಡಿದ್ದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಜತೆಗೆ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ವಾರ್‌ ರೂಂ ಸ್ಥಾಪಿಸಿ ಪ್ರಾಣಿಗಳ ಮೂಕರೋದನೆಗೆ ಧ್ವನಿಯಾಗುವುದು, ಪಶು ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಿ ಪಶು ವೈದ್ಯಕೀಯ ಇಲಾಖೆಯನ್ನು ರೈತರ ಮನೆ ಬಾಗಿಲಿಗೆ ತರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇನ್ನೂ ಕೋವಿಡ್‌ ಸೋಂಕಿನಿಂದ ನಲುಗಿ ಹೋಗಿದ್ದ ಗಡಿನಾಡು ಬೀದರ ಹಾಟ್‌ಸ್ಪಾಟ್‌ ಜಿಲ್ಲೆ ಎಂದೆನಿಸಿಕೊಂಡಿತ್ತು. ಆದರೆ, ಉಸ್ತುವಾರಿ ಸಚಿವರಾಗಿದ್ದ ಚವ್ಹಾಣ, ಪರಿಸ್ಥಿತಿ ಕೈಮೀರಿದ್ದನ್ನು ಅರಿತು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದಾಗಿ ಇಂದು ಬೀದರ ರಾಜ್ಯದಲ್ಲೇ ಕೊರೊನಾ ಮುಕ್ತ ಜಿಲ್ಲೆಯತ್ತ ಹೆಜ್ಜೆಯನ್ನಿಟ್ಟಿದೆ.

Advertisement

ಸಕಾಲಕ್ಕೆ ಆಮ್ಲಜನಕ, ಔಷಧೋಪಚಾರ, ಸಾಮಗ್ರಿಗಳನ್ನು ಒದಗಿಸುವುದು, ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ವಾರಿಯರ್ಗಳಿಗೆ ಸನ್ಮಾನಿಸಿ ಆತ್ಮಸ್ಥೆರ್ಯ ತುಂಬಿದ್ದು ವಿಶೇಷವಾಗಿತ್ತು. ಸಚಿವರಾಗಿ ಕಾರ್ಯವೈಖರಿ ಮತ್ತು ಪಕ್ಷದಲ್ಲಿನ ವರ್ಚಸ್ಸು ಪರಿಣಾಮ ಇಂದು ಚವ್ಹಾಣ ಅವರಿಗೆ ಎರಡನೇ ಅವಧಿಗೆ ಮಂತ್ರಿಗಿರಿ ಸಿಕ್ಕಂತಾಗಿದೆ. ಚವ್ಹಾಣಗೆ ಪಶು ಸಂಗೋಪನೆ ನೆಚ್ಚಿನ ಇಲಾಖೆಯಾಗಿರುವುದರಿಂದ ಬೊಮ್ಮಾಯಿ ಸಂಪುಟದಲ್ಲೂ ಸಹ ಹಿಂದಿನ ಖಾತೆಯ ಜವಾಬ್ದಾರಿ ವಹಿಸುವ ಸಾಧ್ಯತೆಗಳು ದಟ್ಟವಾಗಿದೆ.

ಮಂತ್ರಿಗಿರಿ ಒಲಿಯಲು ಕಾರಣ
ಪ್ರಭು ಚವ್ಹಾಣಗೆ ಮತ್ತೂಮ್ಮೆ ಸಚಿವ ಸ್ಥಾನ ಒಲಿಯಲು ಪ್ರಾದೇಶಿಕತೆ ಮತ್ತು ಜಾತಿ ಲೆಕ್ಕಾಚಾರದ ಜತೆಗೆ ಪಕ್ಷದಲ್ಲಿ ವರ್ಚಸ್ಸು ಕಾರಣ. ಅಷ್ಟೇ ಅಲ್ಲ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಲ್ಲದೇ ಸಂಘ ಪರಿವಾರದಲ್ಲೂ ಉತ್ತಮ ಸಂಪರ್ಕ ಹೊಂದಿರುವುದು ಅವರಿಗೆ ಪ್ಲಸ್‌ ಆಗಿದೆ. ಇದರೊಟ್ಟಿಗೆ ನೆರೆ ರಾಜ್ಯ ಮಹಾರಾಷ್ಟ್ರದ ರಾಜಕೀಯದಲ್ಲೂ ಪ್ರಬಲ ನಂಟು ಇಟ್ಟಿಕೊಂಡಿರುವ ಚವ್ಹಾಣ ಪರ ಅಲ್ಲಿನ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಮತ್ತು ಮಾಜಿ
ಸಚಿವೆ ಪಂಕಜಾ ಮುಂಡೆ ಸೇರಿ ಹಲವು ನಾಯಕರು ವರಿಷ್ಠರಿಗೆ ಒತ್ತಡ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಗಮನ ಸೆಳೆದ ಚವ್ಹಾಣ
ರಾಜಭವನದಲ್ಲಿ ಬುಧವಾರ ರಾಜ್ಯಪಾಲ ಥಾವರ್‌ ಚಂದ್‌ ಗೆಲ್ಹೋಟ್‌ ನೇತೃತ್ವದಲ್ಲಿ ನಡೆದ ನೂತನ ಸಂಪುಟ ಸಚಿವರ ಪದಗ್ರಹಣ ಸಮಾರಂಭದಲ್ಲಿ ಪ್ರಭು ಬಿ. ಚವ್ಹಾಣ ಅವರು ಸಾಂಪ್ರದಾಯಿಕ (ಲಂಬಾಣಿ) ಉಡುಗೆ ತೊಟ್ಟು ಗಮನ ಸೆಳೆದರು. ಕಳೆದ ಬಾರಿಯ ಪದಗ್ರಹಣ ವೇಳೆಯಲ್ಲಿಯೂ ವಿಶಿಷ್ಟ ಬಟ್ಟೆ ಧರಿಸಿದ್ದರು. ದೇವರ ಹೆಸರಿನಲ್ಲಿ ಚವ್ಹಾಣ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಜನಪರ ಸೇವೆ, ಗೋಮಾತೆ ರಕ್ಷಣೆ ಕೆಲಸ ಇಂದು ನನ್ನ ಕೈಹಿಡಿದಿದೆ. ಪಕ್ಷಕ್ಕಾಗಿ ಪ್ರಾಮಾಣಿಕ ದುಡಿಮೆ, ಪಶು ಸಂಗೋಪನಾ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಫಲದಿಂದ ಮತ್ತೂಂದು ಅವಗೆ ಸಚಿವ ಸ್ಥಾನ ಒಲಿದಿದೆ. ಪಶು ಇಲಾಖೆ ನೆಚ್ಚಿನ ಖಾತೆ ಇದ್ದು, ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ನನ್ನನ್ನು ಸಚಿವರನ್ನಾಗಿ ನೇಮಕ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ.
ಪ್ರಭು ಚವ್ಹಾಣ, ನೂತನ ಸಚಿವ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next