ಚಾಮರಾಜನಗರ: ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಬದುಕು ರೂಪಿಸುವ ಕೇಂದ್ರಗಳಾಗಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‌ಕುಮಾರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಸುವರ್ಣ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಅವರಣದಲ್ಲಿ ಮೈಸೂರು ವಿವಿ ಸಹಯೋಗದಲ್ಲಿ ನಡೆದ ಡಾ.ಅಂಬೇಡ್ಕರ್ ಜಯಂತಿ ಹಾಗೂ ಸುವರ್ಣದೀಪ್ತಿ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಆರಂಭಿಸಿರುವ ಡಿಜಿಟಲ್ ಕ್ಯಾಂಪಸ್, ಜಾನಪದ ಮತ್ತು ಎಂ.ಬಿ.ಎ ಕೋರ್ಸ್ ಉದ್ಘಾಟಿಸಿ ಮಾತನಾಡಿ, ಮೈಸೂರು ವಿ.ವಿ ವ್ಯಾಪ್ತಿಯ ಮಂಡ್ಯ, ಹಾಸನ, ಚಾ.ನಗರ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸುವರ್ಣದೀಪ್ತಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸುವರ್ಣದೀಪ್ತಿ ಎಂದರೇ ಚಿನ್ನದ ಬೆಳಕು ಎಂದರ್ಥ.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಪಠ್ಯೇತರ ಚಟುವಟಿಕೆಗಳ ಜೊತೆಗೆ ಸಮಾಜದ ಒಳಿತಿಗಾಗಿ ಚಿನ್ನದ ಬೆಳಕು ಚೆಲ್ಲುವಂತಾಗಬೇಕು. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ವಿಶ್ವವಿದ್ಯಾಲಯಗಳು ವೇದಿಕೆಯಾಗಬೇಕು ಎಂದರು.
ಅಂಬೇಡ್ಕರ್ ಜ್ಞಾನದ ಸಂಕೇತ: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಜ್ಞಾನದ ಸಂಕೇತ. ಇಡೀ ವಿಶ್ವವೇ ಅಂಬೇಡ್ಕರ್ ಜನ್ಮದಿನವನ್ನು ವಿಶ್ವಜ್ಞಾನ ದಿನವನ್ನಾಗಿ ಆಚರಿಸುತ್ತಿದೆ. ಸರ್ವ ಸಮುದಾಯಗಳ ಹಿತ ಬಯಸಿದ ಅಂಬೇಡ್ಕರ್ ಜ್ಞಾನದ ಹಾದಿಯಲ್ಲಿ ನಾವೆಲ್ಲಾ ಸಾಗಬೇಕು. ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅಂಬೇಡ್ಕರ್ ಹೆಸರಿನಲ್ಲಿ ಸ್ಥಾಪಿತವಾದ ವಿವಿ ಸ್ನಾತಕೋತ್ತರದ ಕೇಂದ್ರ ಎಂಬ ಹೆಗ್ಗಳಿಕೆ ಈ ಕೇಂದ್ರದ್ದು. ಇಲ್ಲಿ ಶೇ.54ರಷ್ಟು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದು ಹಾಗೂ ವಿದ್ಯಾರ್ಥಿನಿಲಯ ಆರಂಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಿಂದ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಒಂದು ವಾರಗಳ ಕಾಲ ನಡೆದ ಸುವರ್ಣದೀಪ್ತಿ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪೊ›.ಆರ್.ಮಹೇಶ್, ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯ ಪ್ರದೀಪ್‌ಕುಮಾರ್ ದೀಕ್ಷಿತ್, ವಿಚಾರವಾದಿ ನಂಜನಗೂಡಿನ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿದರು. ವಿವಿ ವಿಶೇಷ ಕರ್ತವ್ಯಾಧಿಕಾರಿ ಚೇತನ್‌ಕುಮಾರ್, ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪರಮಶಿವಯ್ಯ ಇದ್ದರು.