ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಬೆಂಗಳೂರಿನಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವೆಬ್ ಮೂಲಕ ವಿಡಿಯೋ ಸಂವಾದ ನಡೆಸಿದರು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಲು ಸಿದ್ಧರಿರಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಆಂತರಿಕ ವ್ಯವಸ್ಥೆ ಬಲಪಡಿಸಿಕೊಳ್ಳಬೇಕು. ಅಗತ್ಯ ವೈದ್ಯಕೀಯ ಸಿಬ್ಬಂದಿ ಇರಬೇಕು. ಕನಿಷ್ಠ ಮೂರು ಸಾವಿರ ಗುಣಮಟ್ಟದ ಪಿಪಿಇ ಕಿಟ್ ತರಿಸಿಕೊಳ್ಳಲು ಇಂದೇ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು.
ತಕ್ಷಣಕ್ಕೆ ಒಂದು ಸಾವಿರ ಗುಣಮಟ್ಟದ ಪಿಪಿಇ ಕಿಟ್‌ಗಳನ್ನ ಖರೀದಿಸಿ, ಮಾಸ್ಕ್, ಸ್ಯಾನಿಟೈಸರ್ ಕೊರತೆಯಾಗಬಾರದು. ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಕೇಂದ್ರೀಕೃತ ಆ್ಯಕ್ಸಿಜನ್ ಪೂರೈಕೆ 50 ಬೆಡ್‌ಗಳಿಗೆ ಹೆಚ್ಚಿಸಿ ತಕ್ಷಣ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ತಾಲೂಕಾಸ್ಪತ್ರೆಗೂ ಮಾಸ್ಕ್, ಸ್ಯಾನಿಟೈಸರ್, ಕೋವಿಡ್ ಸುರಕ್ಷಾ ಕಿಟ್‌ಗಳನ್ನು ಹೆಚ್ಚುವರಿ ಪೂರೈಸಿ ಎಂದು ಡಿಎಚ್ ಒಗೆ ಸೂಚಿಸಿದರು.
ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಿ, ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಿಸಬೇಕು. ಪಾಸ್ ಇದ್ದವರಿಗೆ ಮಾತ್ರ ಗಡಿಯೊಳಗೆ ಪ್ರವೇಶ ನೀಡಬೇಕು. ಪ್ರತಿ ವಾಹನದ ಚಲನವಲನಗಳು ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಬೇಕು. ಜಿಲ್ಲೆಯಲ್ಲಿ ಸ್ಥಾಪಿಸಲಾದ 24 ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು. ಪ್ರತಿ ವಾಹನದ ವಿವರ, ವಾಹನ ಚಾಲಕನ ಹೆಸರು, ಕ್ಲಿನಿರ್ ಹೆಸರು, ವಾಹನ ಮಾಲಿಕನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ದಾಖಲು ಮಾಡಿಕೊಳ್ಳಬೇಕು. ಇದರಿಂದ ಸಂಪರ್ಕ ವಿಳಾಸ ಪತ್ತೆಗೆ ಸುಲಭವಾಗಲಿದೆ ಎಂದು ಸಲಹೆ ನೀಡಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಎಸ್ಪಿ ಕೆ.ಜಿ. ದೇವರಾಜು, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ, ಡಿಎಚ್‌ಒ ಡಾ| ರಾಜೇಂದ್ರ ಇದ್ದರು.