Advertisement
ನಮ್ಮದು ಜಾತ್ಯತೀತ ರಾಷ್ಟ್ರ. ಸರ್ವಧರ್ಮಗಳು ಸಮನ್ವಯತೆಯಿಂದ ಇದ್ದರಷ್ಟೇ ದೇಶ ಶಾಂತಿ ಯುತವಾಗಿರಲು ಸಾಧ್ಯ. ಆದರೆ ಎಲ್ಲರೂ ಸಮಾನರು ಎನ್ನುವುದು ಕೇವಲ ಹೇಳಿಕೆಗೆ, ವೇದಿಕೆಗಳಲ್ಲಿನ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ಆದರೆ ವಾಸ್ತವ ಹಾಗಿಲ್ಲ. ಜಾತಿ, ಧರ್ಮ, ಹಣ, ರಾಜಕೀಯಗಳೇ ಇಲ್ಲಿ ಎಲ್ಲವನ್ನೂ ಪ್ರಭಾವಿಸುವುದು, ಇವುಗಳನ್ನು ಬೇಕಾದ ಹಾಗೆ ಬಳಸಿಕೊಳ್ಳುವ ಹಿತಾಸಕ್ತಿಗಳೇ ದೇಶದ ಪ್ರಗತಿಗೆ ಮಾರಕ.
Advertisement
ಶಾಲಾಕಾಲೇಜುಗಳಲ್ಲಿ ಸಮವಸ್ತ್ರದ ನಿಯಮ ಬಂದಿರುವುದು ಬೆಳೆಯುವ ಮನಸ್ಸುಗಳಲ್ಲಿ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ. ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಸರಕಾರದ ಕಡ್ಡಾಯವಾದ ನಿಯಮವಲ್ಲವಾದರೂ ಸಹ ಶಿಸ್ತು ಪಾಲನೆಗೆ ಇದು ಮುಖ್ಯ. ಸಾಮಾನ್ಯವಾಗಿ ಎಲ್ಲ ಶೈಕ್ಷಣಿಕ ಸಂಸ್ಥೆಗಳು ತಮ್ಮದೇ ಆದ ಸಮವಸ್ತ್ರದ ನಿಯಮವನ್ನು ಪಾಲಿಸುತ್ತವೆ. ಅದು ಸರಕಾರಿ, ಖಾಸಗಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಾಗಿರಬಹುದು. ಈಗ ಹೆಚ್ಚಿನ ಕಾಲೇಜುಗಳು ಏಕರೂಪದ ವಸ್ತ್ರ ಸಂಹಿತೆಯನ್ನು ತಾವಾಗಿಯೇ ನಿರ್ಧರಿಸಿ, ಅನುಸರಿಸುತ್ತವೆ.
ಸಮವಸ್ತ್ರ ಧಾರಣೆಯಿಂದ ತರಗತಿಯ ಎಲ್ಲ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಕಾಣಲು ಸಾಧ್ಯ ವಾಗುತ್ತದೆ. ಜಾತಿ, ಧರ್ಮ, ಮೇಲು-ಕೀಳೆಂಬ ತಾರತಮ್ಯವಿಲ್ಲದೆ ಎಲ್ಲ ಮಕ್ಕಳು ಸಮಾನರೆಂಬ ಭಾವನೆ ಯಿಂದ ಕಲಿಯಲು, ಕಲಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಏಕತೆಯ ಭಾವನೆ ಮೂಡಿ ಪರಸ್ಪರ ಸೌಹಾರ್ದತೆಯಿಂದ ಕಲಿಯಲು ಅವಕಾಶ ನೀಡುತ್ತದೆ. ಮಾತ್ರವಲ್ಲ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಹೊರಗಡೆ ಹೋದಾಗಲೂ ಅವರನ್ನು ಗುರುತಿಸಲು ಸಾಧ್ಯವಾಗುತ್ತದೆ. ಸಮವಸ್ತ್ರ ಧಾರಣೆ ವಿದ್ಯಾರ್ಥಿಗಳಲ್ಲಿ ತನ್ನಷ್ಟಕ್ಕೇ ಅರಿವಿಲ್ಲದಂತೆ ಒಂದು ಶಿಸ್ತನ್ನು ಮೂಡಿಸುತ್ತದೆ.
ಹಾಗೆಂದು ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಕುರಿತು ಸರಕಾರದ ಕಾನೂನು ನಿಯಮಾವಳಿಗಳಲ್ಲಿ ಹುಡುಕಿದರೆ ಸಿಗಲಾರದು. ಇದು ಶೈಕ್ಷಣಿಕ ಸಂಸ್ಥೆಗಳು ಶಿಸ್ತು ಪಾಲನೆ ಹಾಗೂ ಸಮಾನತೆಯ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡು ಬಂದ ನಿಯಮ. ಬೇರೆ ಬೇರೆ ಕಾಲೇಜುಗಳು ವಿದ್ಯಾರ್ಥಿಗಳ ಅನುಕೂಲತೆಗಳನ್ನು ಆಧರಿಸಿಕೊಂಡು ಬೇರೆ ಬೇರೆ ರೀತಿಯ ಸಮವಸ್ತ್ರವನ್ನು ಕಡ್ಡಾಯಗೊಳಿಸುತ್ತವೆ. ಸಮವಸ್ತ್ರ ಬೇಡ ಎಂದು ಯಾವ ವಿದ್ಯಾರ್ಥಿಗಳೂ ಹೇಳುವುದಿಲ್ಲ ಕಾರಣ ಅವರಿಗೂ ಅದರಿಂದ ಅನುಕೂಲತೆಗಳೇ ಹೆಚ್ಚು. ಶ್ರೀಮಂತ ಕುಟುಂಬ ದಲ್ಲಿ ಜನಿಸಿದ ವಿದ್ಯಾರ್ಥಿಗಳು ಧರಿಸುವ ಉಡುಗೆ-ತೊಡುಗೆಗಳು ಇತರ ವಿದ್ಯಾರ್ಥಿಗಳಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು. ಎಷ್ಟೋ ಪೋಷಕರಿಗೆ ಹೆಚ್ಚು ಬಟ್ಟೆಗಳನ್ನು ಕೊಡಿ ಸಲು ಸಾಧ್ಯವಾಗದಿರಬಹುದು. ಇದರಿಂದಾಗಿ ಪೋಷಕರಿಗೆ ಅನಪೇಕ್ಷಿತ ಒತ್ತಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲದೆ ಈಗಿನ ಯುವಕ ಯುವತಿಯರು ಧರಿಸುವ ಆಧುನಿಕ ಶೈಲಿಯ ವಸ್ತ್ರಗಳು ಕಾಲೇಜಿನೊಳಗೂ ಬಂದರೆ ಶೈಕ್ಷಣಿಕ ವಾತಾವರಣವೇ ಕೆಟ್ಟು ಹೋಗುವುದು ಖಂಡಿತ.
ವಿದ್ಯಾರ್ಥಿಗಳ ನಡುವೆ ಉಡುಗೆ ತೊಡುಗೆ ಗಳಲ್ಲಿಯೇ ಆತಂಕಕಾರಿಯಾದ ಪೈಪೋಟಿ ಕಾಣಿಸಿ ಕೊಳ್ಳಬಹುದು. ಇದರ ಪರಿಣಾಮವಾಗಿ ವಿದ್ಯಾಸಂಸ್ಥೆ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಯಂತ್ರಣ ಸಾಧಿಸು ವುದು ಕಷ್ಟಕರವಾಗಬಹುದು. ಈ ಎಲ್ಲ ಮುಂದಾ ಲೋಚನೆಗಳೇ ಶೈಕ್ಷಣಿಕ ಸಂಸ್ಥೆಗಳು ಸಮವಸ್ತ್ರ ನಿಯಮ ಗಳನ್ನು ಅನುಸರಿಸುವುದಕ್ಕೆ ಮುಖ್ಯ ಕಾರಣ.
ಆದರೆ ಸಮವಸ್ತ್ರದ ಕುರಿತು ಈಗ ತೀರಾ ಅನಪೇಕ್ಷಿತವಾದ ಆತಂಕಕಾರಿ ಬೆಳವಣಿಗೆ ರಾಷ್ಟ್ರ ಮಟ್ಟದಲ್ಲಿ ಗಾಬರಿ ಹುಟ್ಟಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ವಿದ್ಯಾರ್ಥಿಗಳ ಹಾಗೂ ಹೆತ್ತವರ ಹಿತದೃಷ್ಟಿಯಿಂದ ಇದು ಖಂಡಿತಾ ಒಳ್ಳೆಯ ಲಕ್ಷಣ ಅಲ್ಲ. ದೇಶದ ಪ್ರಗತಿಯ ದೃಷ್ಟಿಯಿಂದಲೂ ಇದು ಕೆಟ್ಟ ಸಂದೇಶ. ಶಾಲಾ ಕಾಲೇಜುಗಳು ಶಿಕ್ಷಣಕ್ಕಾಗಿ ಹೋರಾಡುವ ಸಂಸ್ಥೆಗಳಾಗಬೇಕೇ ಹೊರತು ಅನಾವಶ್ಯಕ ವಿಷಯಗಳ ಬಗೆಗಿನ ಹೋರಾಟಕ್ಕಾಗಿ ಅಲ್ಲ. ಎಲ್ಲ ವಿಧದ, ಎಲ್ಲ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಮಕ್ಕಳು ಒಂದೇ ಕಡೆಯಲ್ಲಿ ಸೇರುವ, ದೀರ್ಘಕಾಲ ಜತೆಗೂಡಿ ಕಲಿಯುವ, ಆ ಮೂಲಕ ಜ್ಞಾನವನ್ನು ಗಳಿಸುವ ಏಕೈಕ ಸಂಸ್ಥೆ ಎಂದರೆ ಅದು ಶಾಲಾ ಕಾಲೇಜುಗಳು ಮಾತ್ರ. ಈಗಷ್ಟೇ ಜತೆಜತೆಯಲ್ಲಿ ಚಿಗುರುತ್ತಿರುವ ಮನಸ್ಸುಗಳಲ್ಲಿ ದ್ವೇಷದ ವಿಷ ಬೀಜ ಬಿತ್ತಿದರೆ ಭವ್ಯ ಭಾರತದ ಕನಸು ನುಚ್ಚು ನೂರಾಗಬಹುದು. ನಿಂತ ನೆಲದ ಶಾಂತಿ, ಕಾನೂನು ನಿಯಮಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಜವಾಬ್ದಾರಿ ಮತ್ತು ಕರ್ತವ್ಯ ಕೂಡ ಹೌದು.
– ವಿದ್ಯಾ ಅಮ್ಮಣ್ಣಾಯ, ಕಾಪು