ವಿಜಯಪುರ: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಕಾರ್ಯನಿರ್ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತರೂ ಆಗಿರುವ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ .ರಣದೀಪ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಪಡೆಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು, ಜಲಧಾರೆ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಕ್ರಮ ವಹಿಸಲಾಗುತ್ತಿದ್ದು ನೀರಿನ ಸಮಸ್ಯೆ ಉದ್ಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ವತ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿ ಮನೆ, ಪ್ರದೇಶ, ಗ್ರಾಮ-ನಗರ ಪ್ರದೇಶಗಳನ್ನು ಸ್ವತ್ಛವಾಗಿ ಇರುವಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಕೆಲಸ ನಿರ್ವಹಿಸಬೇಕು. ಕಸ ವಿಲೇವಾರಿಯು ವಸತಿ ಪ್ರದೇಶಗಳು ಇರದ ಕಡೆಗೆ ಕಸವನ್ನು ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅಮೃತ ಗ್ರಾಪಂ ಯೋಜನೆ ಅಡಿ ಜಿಲ್ಲೆಯ 25 ಗ್ರಾಪಂಗಳನ್ನು ಆಯ್ಕೆ ಮಾಡಿದ್ದು ಉತ್ತಮ ಪ್ರಗತಿ ಸಾಧಿಸುತ್ತಿವೆ. ಇನ್ನುಳಿದ ಗ್ರಾಪಂಗಳು ಕೂಡ ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪಶು ಸಂಗೋಪನೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಮುಂದಿನ ದಿನಗಳಲ್ಲಿ ಹುದ್ದೆಗಳ ಭರ್ತಿಗಾಗಿ ಕ್ರಮ ವಹಿಸುವ ಭರವಸೆ ನೀಡಿದರು. ಜಿಲ್ಲೆಯಲ್ಲಿರುವ ಆಕ್ಸಿಜನ್ ಘಟಕಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗದಂತೆ ಪ್ರತ್ಯೇಕ ವಿದ್ಯುತ್ ಸರಬರಾಜು ಮಾರ್ಗ ರೂಪಿಸುವಂತೆ ಸೂಚಿಸಿದರು. ಜಿಪಂ ಸಿಇಒ ಗೋವಿಂದರೆಡ್ಡಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.