Advertisement

ಕೋಮುವಾದಿಗಳ ಬಗ್ಗೆ ಎಚ್ಚರವಿರಲಿ: ಸುತಾರ

05:58 PM Nov 12, 2021 | Team Udayavani |

ಸಿಂಧನೂರು: ಭಾರತ ಸೌಹಾರ್ದತೆಗೆ ಹೆಸರಾದ ದೇಶ. ಇಂತಹ ನಾಡಿನಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೋಮುವಾದಿಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಿರಬೇಕು ಎಂದು ಮಹಾಲಿಂಗಪುರದ ಖ್ಯಾತ ಪ್ರವಚನಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಹೇಳಿದರು.

Advertisement

ನಗರದ ಸ್ತ್ರೀಶಕ್ತಿ ಭವನದಲ್ಲಿ ನಡೆದ ಸದ್ಭಾವನಾ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ದೇಶ ಸರ್ವ ಜನಾಂಗಗಳ ಶಾಂತಿಯ ತೋಟ. ತನ್ನ ಧರ್ಮ ನಂಬುವುದು, ಇತರ ಧರ್ಮ ಪ್ರೀತಿಸುವುದು ಕೋಮವಾದ ಆಗುವುದಿಲ್ಲ. ತನ್ನ ಜನ ತಪ್ಪು ಮಾಡುತ್ತಿದ್ದಾರೆಂದು ಗೊತ್ತಿದ್ದರೂ ಅವರನ್ನು ಬೆಂಬಲಿಸುವುದು ಕೋಮುವಾದವಾಗುತ್ತದೆ. ಎಲ್ಲ ಧರ್ಮಗಳ, ಸೂಫಿ ಸಂತರು, ಶರಣರ ಸಂದೇಶ ಸಾರ ಒಂದೇ ಎಂದು ತಿಳಿಯಬೇಕು. ಮಾನವೀಯ ದೃಷ್ಟಿಯೇ ಸದ್ಭಾವನೆ. ಎಲ್ಲ ಜಾತಿ, ಧರ್ಮದವರು ಭಾವನಾಪೂರ್ಣವಾಗಿ ಪರಸ್ಪರ ಅಪ್ಪಿಕೊಂಡು, ಒಪ್ಪಿಕೊಂಡು ಪ್ರೀತಿ- ಸೌಹಾರ್ದತೆಯಿಂದ ಬಾಳುವುದೇ ಇದರ ಅರ್ಥ ಎಂದರು.

ಮಂಗಳೂರಿನ ಶಾಂತಿ ಪ್ರಕಾಶನದ ಮುಹಮ್ಮದ್‌ ಕುಂಞ ಮಾತನಾಡಿ, ಹಿಂದೆ ನಡೆದ ಘಟನೆ ಸ್ಮರಿಸಿಕೊಂಡು ನೊಂದುಕೊಳ್ಳದೇ ಮುಂದು ಆಗಬಹುದಾದ ಸಂಗತಿ ಊಹಿಸಿಕೊಂಡು ಆತಂಕ ಪಡದೇ ವರ್ತಮಾನದ ಸಂಗತಿಗಳೊಂದಿಗೆ ಜೀವಿಸಿದರೆ ಬದುಕು ಸುಂದರವಾಗಿರುತ್ತದೆ ಎಂದರು.

ಕರಿಬಸವ ನಗರದ ರಂಭಾಪುರಿ ಖಾಸಾ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಹೋಲಿ ಫ್ಯಾಮಿಲಿ ಚರ್ಚ್‌ ವ್ಯವಸ್ಥಾಪಕ ಫಾದರ್‌ ಮರಿಸ್ವಾಮಿ, ಅವಧೂತ ರಾಜಯೋಗಿ ನಾಮದೇವಗೌಡ ಶರಣರು, ತುರ್ವಿಹಾಳದ ಚಿದಾನಂದಯ್ಯ ಗುರುವಿನ್‌ ಸಾನ್ನಿಧ್ಯ ವಹಿಸಿದ್ದರು. ಸದ್ಭಾವನಾ ವೇದಿಕೆ ಅಧ್ಯಕ್ಷ ಡಾ| ಚನ್ನನಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ನಟ ಪುನೀತ್‌ ರಾಜಕುಮಾರ್‌ಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next