ಇತ್ತೀಚೆಗೆ ಪ್ರಸಿದ್ಧ ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ಅಪರೂಪದ ಘಟನೆ ಜರಗಿತು. ರಂಗಸ್ಥಳದಲ್ಲಿ ಪಾತ್ರಧಾರಿಯು ನಿರ್ದಿಷ್ಟ ಪ್ರಸಂಗ ವೊಂದರಲ್ಲಿ ಮಾತುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲೇ ವೇದಿಕೆಯ ಮುಂಭಾಗದಿಂದ ಬಿರುಸಿನಲ್ಲಿ ನಡೆದುಕೊಂಡು ಬಂದ ಯುವತಿಯೋರ್ವಳು ಎಲ್ಲರೂ ನೋಡುತ್ತಿದ್ದಂತೆಯೇ ಹಿಂಭಾಗದಿಂದ ನೇರವಾಗಿ ರಂಗಸ್ಥಳಕ್ಕೆ ಪ್ರವೇಶಿಸಿಯೇ ಬಿಟ್ಟಳು! ಮಾತ್ರವಲ್ಲ, ವೇಷಧಾರಿಯನ್ನು ಆಕೆ ದುರುಗುಟ್ಟಿ ನೋಡಿ, ಅದೇನೋ ಮಾತಿಗೆ ತೊಡಗಿದಳು. ರಂಗಸ್ಥಳದಲ್ಲಿ ಪಾತ್ರ ನಿರ್ವಹಣೆ ನೀಡುತ್ತಿದ್ದ ಆ ಕಲಾವಿದರು ಮಾತ್ರ ಈ ತರುಣಿಯ ಸ್ಥಿತಿ ಅರಿತು ಅವಳನ್ನು ಹೆಚ್ಚು ಗಮನಿಸದೆ ತಮ್ಮ ಪಾತ್ರದಲ್ಲೇ ತಲ್ಲೀನರಾಗಿದ್ದರು. ಕೂಡಲೇ ಮೇಳದ ಸಿಬಂದಿಯೋರ್ವರು ಬಂದು ಆಕೆಯನ್ನು ರಂಗಸ್ಥಳದಿಂದ ಕರೆದುಕೊಂಡು ಹೋದರು. ಈ ಸನ್ನಿವೇಶವನ್ನು ಚಿತ್ರೀಕರಿಸಿದ್ದ ಯಾವನೋ ಒಬ್ಬ ವಾಟ್ಸ್‌ಆ್ಯಪ್ ಮೂಲಕ ಈ ವೀಡಿಯೋವನ್ನು ಹರಿಯ ಬಿಟ್ಟಿದ್ದ. ಈ ವೀಡಿಯೋ ವೈರಲ್ ಆಗಿ ಸಾವಿರಾರು ಜನರಿಗೆ ತಲುಪಿಯಾಗಿತ್ತು. ಹತ್ತಾರು ಗ್ರೂಪ್‌ಗಳ ಮೂಲಕ ನನಗೂ ಬಂದಿದ್ದ ಈ ವೀಡಿಯೋ ತುಣುಕನ್ನು ಯಾರಿಗೂ ಕಳುಹಿಸುವುದಿಲ್ಲ ಎಂದು ನಿರ್ಧರಿಸಿ, ಸುಮ್ಮನಾಗಿದ್ದೆ!
ಯಕ್ಷಗಾನದ ರಂಗಸ್ಥಳಕ್ಕೆ ದಿಢೀರನೆ ಪ್ರವೇಶಿಸಿ ಅರೆಕ್ಷಣ ನೋಡುಗರನ್ನು ಕಕ್ಕಾಬಿಕ್ಕಿಯಾಗಿಸಿದ್ದ ಆ ಯುವತಿ ನಿಜಕ್ಕೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ಆ ವೀಡಿಯೋ ನೋಡಿದ ಯಾರಿಗಾದರೂ ಮೇಲ್ನೋಟಕ್ಕೇ ಅನಿಸುತ್ತಿತ್ತು. ವಯಸ್ಕ ಮಹಿಳೆಯೊಬ್ಬರು (ಬಹುಶಃ ಅವಳ ತಾಯಿ) ಆ ಯುವತಿಯನ್ನು ಕರೆಯುತ್ತಾ, ಹಿಂಬಾಲಿಸಿ ಬಂದದ್ದೂ ಆ ವೀಡಿಯೋ ತುಣುಕಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೂ ಜನ ಇಂತಹ ವೀಡಿಯೋವನ್ನು ವಾಟ್ಸ್‌ಆ್ಯಪ್ ಮೂಲಕ ವೈರಲ್ ಮಾಡಿಸಿ ಮುಗ್ಧ ಯುವತಿಯ ಅನಾರೋಗ್ಯ ಪರಿಸ್ಥಿತಿಯನ್ನು ಜಗಜ್ಜಾಹೀರುಗೊಳಿಸಿದ್ದು ಸರ್ವತಾ ಖಂಡನೀಯ. ಅವಳ ಮನೆಯವರು ಈ ವೀಡಿಯೋ ನೋಡಿದ್ದರೆ ಎಷ್ಟು ನೋವಾಗಿದ್ದಿರಬಹುದೆಂದು ವೈರಲ್ ಮಾಡಿದವರು ಸ್ವಲ್ಪವಾದರೂ ಯೋಚಿ ಸಿದ್ದಾರೆಯೇ?
ಯಕ್ಷಗಾನದ ಹಿಮ್ಮೇಳದ ಕಲಾವಿದರು ಹಾಗೂ ರಂಗಸ್ಥಳದಲ್ಲಿದ್ದ ಪಾತ್ರ ಧಾರಿಯು ಯುವತಿಯ ಅನಿರೀಕ್ಷಿತ ಪ್ರವೇಶದಿಂದ ಕಥೆಯ ಓಘಕ್ಕೆ ಯಾವುದೇ ಚ್ಯುತಿಯಾಗದಂತೆ ಈ “ಪ್ರಸಂಗ’ವನ್ನು ನಿಭಾಯಿಸಿ, ಅಲ್ಲಿ ಏನೂ ನಡೆದೇ ಇಲ್ಲವೇನೋ ಎಂಬಂತೆ ವರ್ತಿಸಿದ್ದು ಮಾತ್ರ ನಿಜಕ್ಕೂ ಮೆಚ್ಚತಕ್ಕ ಅಂಶವಾಗಿದೆ.
ಇದು ಹೇಳಿಕೇಳಿ ಅವಸರ ಯುಗ. ತಮ್ಮದೇ ಚಾನೆಲ್‌ನಲ್ಲಿ “ಬ್ರೇಕಿಂಗ್ ನ್ಯೂಸ್’ ಮೊತ್ತ ಮೊದಲು ಬಿತ್ತರಗೊಳ್ಳಬೇಕೆಂದು ಪೈಪೋಟಿ ಗಿಳಿದಿರುವ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಸುದ್ದಿ ಕೊಡುವ ಧಾವಂತದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯವನ್ನು ನಿರ್ಲಜ್ಜವಾಗಿ ಮಾಡುತ್ತಿರುವುದು ಜನಜನಿತ ವಿಚಾರವಾಗಿದೆ. ಇದೇ ಗುಂಗಿನಲ್ಲಿರುವ ಕೆಲವು ಅವಸರದ ಮಂದಿ ಅನಾರೋಗ್ಯ ಪೀಡಿತರಾಗಿರುವ ಇಲ್ಲವೇ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ರಾಜಕೀಯ, ಸಿನೆಮಾ, ಕ್ರೀಡೆ ಮತ್ತಿತರ ಸಾಧಕರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಂಚಲು ಉತ್ಸುಕರಾಗಿರುತ್ತಾರೆ! ತಮಗೆ ಬಂದ ಮಾಹಿತಿಯನ್ನು ಸರಿಯಾಗಿ ದೃಢಪಡಿಸಿಕೊಳ್ಳದೆ ಆ ಸುಳ್ಳು ಸಂದೇಶ ವನ್ನು ವಾಟ್ಸ್‌ಆ್ಯಪ್‌ನಲ್ಲಿ ಫಾರ್ವರ್ಡ್ ಮಾಡಲು ಈ ವಿಘ್ನ ಸಂತೋಷಿಗಳಿಗೆ ಅದೇಕೋ ಎಲ್ಲಿಲ್ಲದ ಖುಷಿ! ಇಂಥ ವಿಘ್ನ ಸಂತೋಷಿಗಳು ಸೃಷ್ಟಿಸಿದ ಅವಾಂತರಗಳು ಅವೆಷ್ಟೋ. ಇನ್ನು ಕೆಲವು ಪುಂಡುಪೋಕರಿಗಳು ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಧಾವಿಸದೆ ಸುದ್ದಿ ಹಂಚುವ ತರಾತುರಿಯಲ್ಲಿ ಮಾನವೀಯತೆ ಮರೆತು ಈ ಭಯಾನಕ ದೃಶ್ಯದ ಚಿತ್ರೀಕರಣದಲ್ಲಿ ತೊಡಗಿರುವುದನ್ನೂ ಕಾಣಬಹುದಾಗಿದೆ. ಇತ್ತೀಚೆಗೆ ಒಂದು ದೇವಸ್ಥಾನದ ಜಾತ್ರೆಯ ಧ್ವಜಾರೋಹಣ ಸಂದರ್ಭದಲ್ಲಿ ರಭಸದಲ್ಲಿ ಹಗ್ಗ ಎಳೆದ ಕಾರಣದಿಂದ ದುರದೃಷ್ಟವಶಾತ್ ಧ್ವಜ ಧರಾಶಾಹಿಯಾಗುವ ದೃಶ್ಯ ವೈರಲ್ ಆಗಿತ್ತು. ಇದನ್ನು ವೀಕ್ಷಿಸಿದ ಆಸ್ತಿಕರಾದ ಯಾರಿಗಾದರೂ ಇದು ತೀರಾ ಮುಜುಗರವನ್ನುಂಟು ಮಾಡುವಂತಿತ್ತು. ಇಂತಹ ವೀಡಿಯೋ ವೈರಲ್ ಮಾಡುವ ಆವಶ್ಯಕತೆಯಾದರೂ ಏನಿತ್ತು? ತುಳುನಾಡಿನ ದೈವಸ್ಥಾನಗಳಲ್ಲಿ ಜರಗುವ ನೇಮೋತ್ಸವದ ಸಂದರ್ಭಗಳಲ್ಲಿ ಗುಳಿಗ ಮತ್ತಿತರ ದೈವಗಳು ಕೋಳಿ ತಿನ್ನುವ ದೃಶ್ಯವನ್ನು ಚಿತ್ರೀಕರಿಸಲು ಜನ ಮುಗಿ ಬೀಳುತ್ತಿರುತ್ತಾರೆ. ಇತ್ತೀಚೆಗೆ ಅನೇಕ ದೈವಸ್ಥಾನಗಳ ಆಡಳಿತ ಮಂಡಳಿಯವರು ಇಂತಹ ದೃಶ್ಯ ಚಿತ್ರೀಕರಿಸಲು ನಿಷೇಧ ಹೇರಿದ್ದು ನಿಜಕ್ಕೂ ಸ್ವಾಗತಾರ್ಹ ನಿಲುವಾಗಿದೆ.
ಕೆಲವೊಮ್ಮೆ ಖಾಸಗಿ ವಾಣಿಜ್ಯ ಸಂಸ್ಥೆಗಳ ಕುರಿತಾಗಿಯೂ ಅನೇಕ ಸುಳ್ಳು ಸಂದೇಶಗಳನ್ನು ಹರಿಯಬಿಡಲಾಗುತ್ತದೆ. ನಿರ್ದಿಷ್ಟ ವ್ಯಾಪಾರ ಮಳಿಗೆ/ಸಂಸ್ಥೆಯ ಏಳಿಗೆಯನ್ನು ಸಹಿಸಲಾಗದ ಮಂದಿ ಇಂತಹ ಕಪೋಲಕಲ್ಪಿತ ಕಥೆಯನ್ನು ಸೃಷ್ಟಿಸಿ ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿಸುತ್ತಾರೆ. ಸಾಮಾನ್ಯ ಜನತೆ ಇಂತಹ ವದಂತಿಗಳನ್ನು ನಂಬುವುದು ಮಾತ್ರವಲ್ಲದೆ ಮತ್ತಷ್ಟು ಜನತೆಗೆ ಈ ಸುದ್ದಿಯನ್ನು ಹಂಚಿ ಬಿಡುತ್ತಾರೆ!. ಜನತೆಗೆ ವಾಸ್ತವ ಸಂಗತಿ ಅರಿವಾಗುವ ಹೊತ್ತಿಗೆ ಆ ವ್ಯಾಪಾರ ಮಳಿಗೆಯ ಮಾನ ಹರಾಜಾಗಿ ಬಿಡುತ್ತದೆ!. ಪ್ರಸಕ್ತ ಇರುವ ಸೈಬರ್ ಕಾಯಿದೆಯಿಂದ ಅದ್ಯಾರಿಗೆ ಶಿಕ್ಷೆಯಾಗಿದೆಯೋ ದೇವರೇ ಬಲ್ಲ!
ಆಧುನಿಕ ಜಗತ್ತಿನ ಅತ್ಯಂತ ಪ್ರಬಲ ಮಾಧ್ಯಮಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಿಂದ ಇತ್ತೀಚೆಗೆ ಸಮಾಜಕ್ಕೆ ಒಳಿತಿಗಿಂತ ಜಾಸ್ತಿ ಕೆಡುಕೇ ಆಗುತ್ತಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದೆ. ವಾಟ್ಸ್‌ಆ್ಯಪ್‌ನಲ್ಲಂತೂ ಇಂತಹ ತಪ್ಪುಗಳು, ಅಚಾತುರ್ಯಗಳು, ಅವಾಂತರಗಳ ಪುನರಾವರ್ತನೆ ಆಗುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣಗಳನ್ನು ಬೇಕಾಬಿಟ್ಟಿ ಬಳಕೆ ಮಾಡುವ ಮಂದಿಯಿಂದ ಸುಳ್ಳು ಸುದ್ದಿಗಳು ವೈಭವೀಕರಣಗೊಳ್ಳುತ್ತಿವೆ. ಸುದ್ದಿಗಳನ್ನು ದೃಢಪಡಿಸಲು ಹತ್ತಾರು ದಾರಿಗಳಿದ್ದರೂ ಇದರಲ್ಲಿ ನಾವು ಎಡವುತ್ತಲೇ ಇದ್ದೇವೆ. ಫೇಸ್‌ಬುಕ್ ನಲ್ಲಿ ಬರುವ ಸಂದೇಶಗಳನ್ನು ಶೇರ್ ಮಾಡುವಾಗ ಇಲ್ಲವೇ ಲೈಕ್ ಒತ್ತುವಾಗಲೂ ಹಲವು ಬಾರಿ ಯೋಚಿಸುವ ಅಗತ್ಯ ಇದೆ. ವಾಟ್ಸ್‌ಆ್ಯಪ್ ಸಂದೇಶಗಳನ್ನು ಗ್ರೂಪ್‌ಗ್ಳಲ್ಲಿ ರವಾನಿಸುವ ಸಂದರ್ಭಗಳಲ್ಲೂ ಬಹಳ ಎಚ್ಚರಿಕೆ ವಹಿಸುವ ಅನಿವಾರ್ಯತೆ ಇದೆ. ಅನಾವಶ್ಯಕವಾಗಿ ಇನ್ನೊಬ್ಬರ ಮಾನಹಾನಿ ಮಾಡುವ ಯಾವ ಹಕ್ಕೂ ನಮಗೆ ಇಲ್ಲ ಎಂಬುದನ್ನು ನಾವೆಲ್ಲ ಮನಗಾಣಬೇಕಾಗಿದೆ.
– ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್