ಪರಸ್ಪರರ ಜವಾಬ್ದಾರಿಯನ್ನು ಅರಿತು ತುಸು ಮುನಿಸು, ತುಸು ಕೋಪಗಳ ನಡುವೆ ಪ್ರೀತಿಯ ಬಂಧ ಗಟ್ಟಿಯಾಗಿರಬೇಕು. ಬದುಕಿನಲ್ಲಿ ತಾಳ್ಮೆ, ತೃಪ್ತಿಯಿರಬೇಕು. ಕನಸಿನ ಬದುಕಿನ ಗುರಿ ಮುಟ್ಟುವ ಆಸೆಯಿರಬೇಕೆ ಹೊರತು, ಕೈಗೆಟುಕದ ಗಗನಕುಸುಮಕ್ಕೆ ದುರಾಸೆ ಪಡಬಾರದು.
ಕೆಲವೇ ಗಂಟೆಗಳಲ್ಲಿ ಸತಿ- ಪತಿಗಳಾಗಬೇಕಿದ್ದವರು ಬೇರೆ ಬೇರೆಯಾಗಿದ್ದರು!! ಮದುವೆಗೆ ಕ್ಷಣಗಣನೆ ನಡೆಯುತ್ತಿರುವಾಗಲೇ ಮದುವೆ ರದ್ದಾಯಿತು - ಎಂಬ ವರದಿ ತುಸು ರಂಜನೀಯವಾಗಿಯೆ ಪ್ರಸಾರವಾಗುತ್ತಿರುವುದನ್ನು ನೋಡಲು ಬೇಸರವೆನಿಸಿತು. ತಕ್ಷಣವೇ ಟಿ.ವಿಯನ್ನು ಬಂದ್ ಮಾಡಿ ಆಚೆ ಬಂದೆನಾದರೂ ತಲೆಯಲ್ಲಿ ನೂರಾರು ಯೋಚನೆಗಳು ಮೂಡಿದ್ದವು. ಮೊನ್ನೆ ಮೊನ್ನೆಯಷ್ಟೆ ನಮ್ಮೂರಿನ ಹೊಸ ಜೋಡಿಯೂ 6 ತಿಂಗಳ ದಾಂಪತ್ಯದ ನಂತರ ಜಂಟಿ ಬದುಕಿಗೆ ವಿದಾಯ ಹೇಳಿ ಒಂಟಿಯಾಗಿರುವುದು, ಬೇಡ ಬೇಡವೆಂದರೂ ನೆನಪಾಗಿತ್ತು. ಮದುವೆಯಾಗಿ, ನಂತರದ ಆರೆಂಟು ತಿಂಗಳು ಅಥವಾ ವರ್ಷದಲ್ಲಿ ಬೇರೆಯಾಗುವುದು ಇತ್ತೀಚೆಗೆ ಹೆಚ್ಚಾಗಿದೆ. ಯಾಕೆ ಹೀಗಾಯ್ತು? ಅಷ್ಟು ಚೆಂದದ ಜೋಡಿ ಬೇರ್ಪಡಲಿಕ್ಕೆ ಇದ್ದ ಕಾರಣವಾದರೂ ಏನು ಎಂಬ ಪ್ರಸ್ನೆಗೆ- ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆ. ಜೊತೆಗಿದ್ದು, ದಿನಾ ಕಿತ್ತಾಡುತ್ತಾ ಬಾಳುವ ಬದಲು ಒಂಟಿಯಾಗಿಯೇ ನೆಮ್ಮದಿಯಿಂದ ಇರಬಹುದು ಅನ್ನುತ್ತಾರೆ!
ಹೊಸ ದಾಂಪತ್ಯ ಮುರಿದು ಹೋಗಲು ಕೆಲವು ಸಂಭವನೀಯ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ… ಹೊಂದಾಣಿಕೆಯ ಕೊರತೆ, ತಪ್ಪು ತಿಳಿವಳಿಕೆ, ಅನುಮಾನ, ಕೀಳರಿಮೆ, ಸ್ವಾರ್ಥ, ಹಠ, ಅತಿಯಾದ ಸ್ವಾಭಿಮಾನದ ಗೀಳು ಇತ್ಯಾದಿ. ಶೈಕ್ಷಣಿಕವಾಗಿ ಅತಿ ಬುಧಿªವಂತರೆನಿಸಿಕೊಂಡವರೇ ಇಂದು ತಮ್ಮ ಖಾಸಗಿ ಜೀವನದಲ್ಲಿ ಮುಗ್ಗರಿಸುತ್ತಿದ್ದಾರೆ. ಇಲ್ಲಿ ಕೇವಲ ಹುಡುಗಿ ಅಥವಾ ಹುಡುಗ ಒಬ್ಬರ ಮೇಲೆ ಮತ್ತೂಬ್ಬರು ಬೆರಳು ಮಾಡಿ ತೋರಿಸಲು ಬರುವುದಿಲ್ಲ. ಪರಸ್ಪರರ ತಪ್ಪನ್ನು ಮುಚ್ಚಿಡಲು ಒಬ್ಬರನ್ನೊಬ್ಬರು ದೂಷಿಸಿಕೊಳ್ಳಬಹುದಷ್ಟೆ. ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ಅನುಕರಣೆಯಿಂದಾಗಿ ಕುಟುಂಬದಲ್ಲಿ ನೆಮ್ಮದಿ ಇಲ್ಲವಾಗಿದೆ. ಇಂದು ಮದುವೆ, ನಾಳೆ ಹನಿಮೂನ್, ನಾಡಿದ್ದೇ ಡೈವೋರ್ಸ್ ಎಂಬಂತಾಗಿದೆ. ಇಲ್ಲಿ ಯಾರಿಗೂ ಪರಸ್ಪರ ಜವಾಬ್ದಾರಿ, ಹೊಂದಾಣಿಕೆ, ಸಮರಸದ ಬದುಕು ಬೇಡವಾಗಿದೆ. ಕೇವಲ “ಕೆರಿಯರ್’ ರೂಪಿಸಿಕೊಳ್ಳುವ ನೆಪದಲ್ಲಿ ವಾಸ್ತವವನ್ನು ಮರೆತಿದ್ದಾರೆ.
ಕುಟುಂಬ, ಸಂಸಾರ ಎಂದ ಮೇಲೆ ಸರಸ- ವಿರಸ, ಸುಖ- ದುಃಖ, ತಪ್ಪು- ಕ್ಷಮೆ ಇವು ಸಮನಾಗಿರಬೇಕು. ತಪ್ಪು ಯಾರೇ ಮಾಡಿರಲಿ, ಅದನ್ನು ಒಪ್ಪಿಕೊಳ್ಳುವುದರಲ್ಲಿ ದೊಡ್ಡತನವಿದೆ. ಹಾಗೆಯೆ, ಕ್ಷಮಿಸುವುದರಲ್ಲಿಯೂ ದೊಡ್ಡತನವಿದೆ ಎಂಬುದನ್ನು ಅರಿಯಬೇಕು. ಕೇವಲ ವಿದ್ಯಾವಂತರಾಗಿದ್ದರೆ ಸಾಲದು, ಬದುಕು ನಡೆಸಲು ಬುದ್ಧಿವಂತಿಕೆಯೂ ಇರಬೇಕು. ತಿಂಗಳ ಕೊನೆಯಲ್ಲಿ ಎಷ್ಟೇ ಲಕ್ಷ ಸಂಬಳ ತರಲಿ, ಅದನ್ನು ಹಂಚಿಕೊಳ್ಳಲು ಗಂಡ, ಹೆಂಡತಿ, ಮನೆ, ಮಕ್ಕಳು ಎಂಬ ನೆಮ್ಮದಿಯ ಗೂಡು, ಬೆಚ್ಚನೆಯ ಸೂರು ಅವಶ್ಯಕ. ನೆಮ್ಮದಿಗೆ ಕೇವಲ ದುಡ್ಡೇ ಪ್ರಧಾನವಲ್ಲ. ಕೇವಲ ಗುಡಿಸಲಿನಲ್ಲಿ ಗಂಜಿ ಕುಡಿದುಕೊಂಡಿದ್ದವರು ಕೂಡಾ ನೆಮ್ಮದಿಯ ಬದುಕು ನಡೆಸುತ್ತಾರೆ. ಹಾಗಾಗಿ ದುಡ್ಡು, ಜೀವಿಸಲು ಬೇಕಾದ ಒಂದು ಅಂಶವೇ ಹೊರತು, ಅದೇ ಬದುಕಲ್ಲ.
ನಾವು “ಇಂಡಿಪೆಂಡೆಂಟ್’ ಆಗಿಯೇ ಇರುತ್ತೇವೆ ಎನ್ನುವ ಧೋರಣೆ ಮದುವೆಯೆಂಬ ಮೂರಕ್ಷರಕ್ಕೆ ಸರಿಹೊಂದುವುದಿಲ್ಲ. ಇಲ್ಲಿ ಬೇಕಿರುವುದು “ಮ್ಯೂಚುವಲ್ ಡಿಪೆಂಡೆಂಟ್ ಮತ್ತು ಮ್ಯೂಚುವಲ್ ಅಡ್ಜಸ್ಟೆ$¾ಂಟ್’. ಪರಸ್ಪರರ ಜವಾಬ್ದಾರಿಯನ್ನು ಅರಿತು ತುಸು ಮುನಿಸು, ತುಸು ಕೋಪಗಳ ನಡುವೆ ಪ್ರೀತಿಯ ಬಂಧ ಗಟ್ಟಿಯಾಗಿರಬೇಕು. ಬದುಕಿನಲ್ಲಿ ತಾಳ್ಮೆ, ತೃಪ್ತಿಯಿರಬೇಕು. ಕನಸಿನ ಬದುಕಿನ ಗುರಿ ಮುಟ್ಟುವ ಆಸೆಯಿರಬೇಕೆ ಹೊರತು, ಕೈಗೆಟುಕದ ಗಗನಕುಸುಮಕ್ಕೆ ದುರಾಸೆ ಪಡಬಾರದು. ಸ್ವತ್ಛಂದವಾಗಿ ಹಾರಾಡುವ ಹಕ್ಕಿಯೂ ಗೂಡು ಕಟ್ಟುತ್ತದೆಯೆಂದ ಮೇಲೆ, ಕೇವಲ ಸ್ವತಂತ್ರವೆ ಜೀವನವಲ್ಲ, ಅದರಿಂದಾಚೆಯ ಜೀವನಕ್ಕೆ ನೆಮ್ಮದಿಯ ಗೂಡು ಬೇಕೆಂದಾಯಿತು. ಹಾಗಾಗಿ ಹೊಂದಾಣಿಕೆಯ ಜೀವನ ನಮ್ಮದಾದರೆ ಬದುಕು ದಡ ಮುಟ್ಟುವುದರಲ್ಲಿ ಸಂಶಯವಿಲ್ಲ.
-ಅರ್ಚನಾ ಬೊಮ್ನಳ್ಳಿ, ಶಿರಸಿ