ರಾಯಚೂರು: ದೇಶ ಕಂಡ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ ಬದುಕು ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಪಠ್ಯದಲ್ಲಿ ಅವರ ಜೀವನ ಚರಿತ್ರೆ ಸೇರಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್. ಬೋಸರಾಜು ಅಭಿಪ್ರಾಯ ಪಟ್ಟರು.
ನಗರದಲ್ಲಿ ಸೋಮವಾರ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಹೂಗಾರ ಸಮುದಾಯದ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶೋಷಿತ ಸಮುದಾಯವನ್ನು ಶಿಕ್ಷಿತವನ್ನಾಗಿ ಮಾಡಲು ಅಂದಿನ ಕಾಲದಲ್ಲೇ ಕ್ರಾಂತಿಕಾರಕ ಹೆಜ್ಜೆ ಇಟ್ಟವರು ಸಾವಿತ್ರಿಬಾಯಿ ಫುಲೆ. ಅವರ ಕೊಡುಗೆಯನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ ಎಂದರು.
ಈ ದೇಶ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಸಾವಿತ್ರಿ ಬಾಯಿ ಫುಲೆ ತಮ್ಮ 17 ವರ್ಷದ ಅವಧಿಯಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಡುವಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ದಿಟ್ಟ ಮಹಿಳೆಯಾಗಿದ್ದಾರೆ. ನಗರಸಭೆ ಮುಂದಿನ ದಿನದಲ್ಲಿ ಮಾತೆಯ ಪುತ್ಥಳಿ ಸ್ಥಾಪಿಸಲು ಮುಂದಾಗಬೇಕು ಎಂದರು.
ಎಂಎಲ್ಸಿ ಮಾಜಿ ಸದಸ್ಯ ಎನ್.ಶಂಕ್ರಪ್ಪ ಮಾತನಾಡಿದರು. ಮಿಟ್ಟಿಮಲ್ಕಾಪುರದ ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹೂಗಾರ ಸಮುದಾಯದಿಂದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತರಾದವರಿಗೆ ಸನ್ಮಾನಿಸಲಾಯಿತು.