Advertisement

ಪೂರ್ಣಾವಧಿ ಶಾಲಾರಂಭ, ಸುರಕ್ಷತ ಕ್ರಮಗಳ ಪಾಲನೆಯಾಗಲಿ

02:07 AM Feb 17, 2021 | Team Udayavani |

ರಾಜ್ಯದಲ್ಲಿ ಇದೇ ತಿಂಗಳ 22ನೇ ತಾರೀಖೀನಿಂದ 6ನೇ ತರಗತಿ ಯಿಂದಲೇ ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಜತೆಗೆ ಬೆಂಗಳೂರು ನಗರ ಮತ್ತು ಕೇರಳದ ಗಡಿ ಭಾಗದಲ್ಲಿ 8ನೇ ತರಗತಿಯ ಮೇಲಿನ ತರಗತಿಗಳನ್ನು ಆರಂಭಿಸುವು ದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಕೇರಳವೀಗ ಮಹಾರಾಷ್ಟ್ರದ ಅನಂತರ ಅತೀ ಹೆಚ್ಚು ಕೋವಿಡ್‌ ಸಕ್ರೀಯ ಪ್ರಕರಣಗಳಿರುವ ರಾಜ್ಯವಾಗಿರುವುದರಿಂದ ಸಹಜವಾಗಿಯೇ ಆ ರಾಜ್ಯದಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕರರು ಕೋವಿಡ್‌ ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕ ಆರಂಭವಾದ ಅನಂತರದಿಂದ ಅತೀ ಹೆಚ್ಚು ಬಾಧೆಗೊಳಗಾದ ವಲಯಗಳಲ್ಲಿ ಶಿಕ್ಷಣ ಕ್ಷೇತ್ರವೂ ಒಂದು. ಹಠಾತ್ತನೆ ಶಾಲೆಗಳೆಲ್ಲ ಬಂದ್‌ ಆಗಿದ್ದು, ಅನಂತರದ ದಿನಗಳಲ್ಲಿ ಡಿಜಿಟಲ್‌ ಪಾಠವೆಂಬ ಹೊಸ ಶಿಕ್ಷಣ ಪದ್ಧತಿಗೆ ಹೆಚ್ಚು ಒತ್ತು ಸಿಕ್ಕದ್ದನ್ನೆಲ್ಲ ನೋಡಿದ್ದೇವೆ. ಆದರೂ ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯುವಂಥ ಆರ್ಥಿಕ, ಸಾಮಾಜಿಕ ಸ್ಥಿತಿಯಲ್ಲಿ ಇರದ ಅಗಣಿತ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ವಿದ್ಯಾಗಮದಂಥ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿತು. ಅಲ್ಲದೇ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನೂ ಯಶಸ್ವಿಯಾಗಿ ನಡೆಸಿತು. ಪರೀಕ್ಷೆಗಳು ಸುರಕ್ಷಿತವಾಗಿ ನಡೆದವಾದರೂ, ಕೋವಿಡ್‌ ಪ್ರಸರಣದ ವೇಗ ರಾಜ್ಯದಲ್ಲಿ ಆ ಸಮಯದಲ್ಲಿ ಬಹಳ ಇದ್ದದ್ದರಿಂದ ವಿದ್ಯಾಗಮದಲ್ಲಿ ಪಾಲ್ಗೊಂಡ ಅನೇಕ ಶಿಕ್ಷಕರು ಈ ಸೋಂಕಿಗೆ ತುತ್ತಾಗಬೇಕಾಯಿತು.

ಈ ಸಂಗತಿ ನಿಸ್ಸಂಶಯವಾಗಿಯೂ ಕೋವಿಡ್‌ ಕುರಿತ ಸುರಕ್ಷತ ಮಾರ್ಗಗಳ ಬಗ್ಗೆ ಮತ್ತಷ್ಟು ಜಾಗೃತಿಯಂತೂ ಮೂಡಿಸಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕೋ ಏನೋ ಕೆಲವು ಸಮಯದಿಂದ ರೋಗಭೀತಿಯೇ ಜನರಲ್ಲಿ ದೂರ ವಾಗಿರುವುದು ಸ್ಪಷ್ಟವಾಗುತ್ತಿದೆ. ಕೊರೊನಾ ಅಪಾಯ ಇನ್ನೂ ದೂರ ವಾಗಿಲ್ಲ ಎನ್ನುವುದಕ್ಕೆ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ 100ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿರುವುದು ಒಂದು ಉದಾ ಹರಣೆಯಷ್ಟೆ. ಈ ಸೋಂಕಿತರೆಲ್ಲ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಪತ್ತೆ ಯಾಗಿದೆ.

ಸಾಮಾಜಿಕ ಅಂತರ ಪಾಲನೆಯನ್ನು ಮರೆತರೆ ರೋಗ ಎಷ್ಟು ವೇಗವಾಗಿ ಹರಡಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ಈಗ ಪೂರ್ಣಾವಧಿ ಶಾಲೆಗಳು ಆರಂಭವಾಗುತ್ತಿರುವುದರಿಂದ, ಹಿಂದೆಂದಿಗಿಂತಲೂ ಹೆಚ್ಚಿನ ಜಾಗೃತಿ ವಹಿಸಬೇಕಾದ ಅಗತ್ಯ ಸರಕಾರ, ಶಾಲಾಡಳಿತಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಇದೆ. ಶಾಲಾ ಬಸ್‌ಗಳನ್ನು ನಿರಂತರವಾಗಿ ಸ್ವತ್ಛಗೊಳಿಸುವುದು, ತರಗತಿಯಲ್ಲಿ ವಿದ್ಯಾರ್ಥಿ ಗಳ ನಡುವೆ ಸಾಮಾಜಿಕ ಅಂತರ ಪಾಲನೆಯನ್ನು ಖಾತ್ರಿಗೊಳಿಸುವುದು, ಮಾಸ್ಕ್ ಧರಿಸುವಿಕೆಯ ಕಡ್ಡಾಯ ಪಾಲನೆಯಾಗುವಂತೆ ನೋಡಿ ಕೊಳ್ಳುವುದನ್ನು ಶಾಲೆಗಳು ಮರೆಯಬಾರದು. ಇನ್ನು ವಿದ್ಯಾರ್ಥಿಗಳೂ ಸಹ ಅಸಡ್ಡೆ ಮೆರೆಯದೇ ನಿಯಮಿತವಾಗಿ ಕೈತೊಳೆಯುವುದು, ಮಾಸ್ಕ್ ಧರಿಸುವುದನ್ನು ಪಾಲಿಸಬೇಕು. ಕೋವಿಡ್‌ ಸಾಂಕ್ರಾಮಿಕದ ಹಾವಳಿ ಪೂರ್ಣವಾಗಿ ನಿಲ್ಲುವವರೆಗೂ ಸುರಕ್ಷ ಕ್ರಮಗಳ ಪಾಲನೆಗೆ ಎಲ್ಲರೂ ಆದ್ಯತೆ ನೀಡುವಂತಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next