Advertisement

ಭ್ರಷ್ಟಾಚಾರ ಮುಕ್ತ ಭಾರತವಾಗಲಿ: ಖೂಬಾ

10:50 AM Nov 07, 2021 | Team Udayavani |

ಕಲಬುರಗಿ: ಭಾರತ ಸ್ವಾತಂತ್ರ್ಯದ ಶತಾಬ್ದಿ ವರ್ಷಕ್ಕೆ ಭಾರತವು ಸಮಾನತೆ ರಾಷ್ಟ್ರವಾಗಿ, ಭ್ರಷ್ಟಾಚಾರ ಮುಕ್ತವಾಗಿ ಉದಯಿಸಿ ವಿಶ್ವ ಗುರುವಾಗುವಂತೆ ಒಟ್ಟಾಗಿ ಶ್ರಮಿಸೋಣ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

Advertisement

ಕಲಬುರಗಿ ಆಕಾಶವಾಣಿ ಕೇಂದ್ರದ ಸಂಗೀತ ಸ್ಟುಡಿಯೋದಲ್ಲಿ ಶನಿವಾರ ಆಯೋಜಿಸಿದ್ದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು ಸರಣಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಚಾಲನೆ ನೀಡಿ ಮುಖ್ಯ ಭಾಷಣ ಮಾಡಿದರು.

ಸ್ವಾತಂತ್ರ್ಯದ 100ನೇ ವರ್ಷ ಆಚರಿಸುವ ಮುನ್ನ ಎಲ್ಲರೂ ಸೇವಾ ಮನೋಭಾವದಿಂದ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡು ಶ್ರೇಷ್ಠ ಭಾರತ ನಿರ್ಮಿಸುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದನಂತರ ಆಡಳಿತ ವ್ಯವಸ್ಥೆಯಿಂದ ಎಲ್ಲ ಆಯಾಮಗಳಲ್ಲಿಯೂ ದೇಶ ಅಭಿವೃದ್ಧಿಯಾಗಿ, ನವ ಮನ್ವಂತರಕ್ಕೆ ನಾಂದಿ ಹಾಡಿದೆ ಎಂದು ಹೇಳಿದರು.

1857ರಿಂದ 1947ರ ತನಕದ ಸ್ವಾತಂತ್ರ್ಯ ಹೋರಾಟ ಹಾಗೂ ಹೈದ್ರಾಬಾದ ಕರ್ನಾಟಕ ವಿಮೋಚನಾ ಸಂಗ್ರಾಮದ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಹೊಣೆಗಾರಿಕೆ ನಮ್ಮ ಮೇಲಿದ್ದು, ರಾಷ್ಟ್ರೀಯ ಪ್ರಸಾರ ಮಾಧ್ಯಮ ಆಕಾಶವಾಣಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ ಮಾತನಾಡಿ, ಭಾರತೀಯರೆಲ್ಲರೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಶಕ್ತರಾಗಿ ಬಲಿಷ್ಠ ಭಾರತ ನಿರ್ಮಿಸಬೇಕಿದೆ. ಕೃಷಿ, ವಾಣಿಜ್ಯ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿ ಭಾರತವನ್ನು ಆರ್ಥಿಕವಾಗಿ ಮುಂಚೂಣಿಯಲ್ಲಿ ತಂದು ನಿಲ್ಲಿಸಬೇಕಿದೆ. ವಿಶ್ವ ಮಟ್ಟದಲ್ಲಿ ಕೊಡುವ ಭಾರತವಾಗಬೇಕೆ ಹೊರತು, ಬೇಡುವ ಭಾರತವಾಗಬಾರದು ಎಂದು ಹೇಳಿದರು.

Advertisement

ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಹಾದೇವಪ್ಪ ಕಡೇಚೂರ್‌ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಹೈದ್ರಾಬಾದ ಕರ್ನಾಟಕ ವಿಮೋಚನಾ ಸಂಗ್ರಾಮದ ಹೋರಾಟ ಮೈನವಿರೇಳಿಸುವಂಥದ್ದು. ಮತಾಂಧರ ಆಡಳಿತದಿಂದ ಈ ಭಾಗದಲ್ಲಿ ಮಹಿಳೆಯರು ಸೇರಿದಂತೆ ನಾಗರಿಕರು ತೀವ್ರ ಸಂಕಷ್ಟ ಅನುಭವಿಸಿದರು. ಗೋರ್ಟಾದಂತಹ ಕರಾಳ ಘಟನೆ, ಸಗರ ಗ್ರಾಮದಲ್ಲಿ ಮಹಿಳಾ ದೌರ್ಜನ್ಯ, ರಂಗಂಪೇಟೆಯಲ್ಲಿ ಮನೆ ಲೂಟಿ ಕಣ್ಣಾರೆ ಕಂಡು ನೋವುಂಡ ಘಟನೆಗಳು ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿತ್ತು ಎಂದು ಹೇಳಿದರು. ಅಚ್ಚಪ್ಪ ಗೌಡ, ಸರದಾರ ಶರಣಗೌಡ ಇನಾಂದಾರ್‌, ಬ್ಯಾರಿಸ್ಟಾರ್‌ ವೆಂಕಟಪ್ಪ ನಾಯಕ ಮುಂತಾದವರು ಸ್ವಾತಂತ್ರ್ಯ ಹೋರಾಟಕ್ಕೆ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿಕೊಂಡರು. ನಿಲಯದ ಮುಖ್ಯಸ್ಥರಾದ ಜಿ. ಗುರುಮೂರ್ತಿ ಅಧ್ಯಕ್ಷತೆ ವಹಿಸಿ, ಯುವ ಜನಾಂಗಕ್ಕೆ ಕಲ್ಯಾಣ ಕರ್ನಾಟಕದ ಇತಿಹಾಸ ತಿಳಿಸಲು ಕಲಬುರಗಿ ಆಕಾಶವಾಣಿ ಕೇಂದ್ರದ ಈ ಕಾರ್ಯಕ್ರಮ ಸೂಕ್ತವಾದುದು ಎಂದರು.

ಕಾರ್ಯಕ್ರಮ ಮುಖ್ಯಸ್ಥ ಅನಿಲಕುಮಾರ ಎಚ್‌. ಎನ್‌ ಮಾತನಾಡಿ 55 ವರ್ಷಗಳ ಇತಿಹಾಸ ಹೊಂದಿರುವ ಕಲಬುರಗಿ ಆಕಾಶವಾಣಿ ಕೇಂದ್ರ ಸಂಸ್ಕೃತಿ, ಸಂಸ್ಕಾರ ಬಿತ್ತುವ ಜೊತೆಗೆ ಇಂತಹ ವಿಧಾಯಕ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಯಲ್ಲಿ ರಾಷ್ಟ್ರ ಪ್ರೇಮ ಬಿತ್ತುವ ಕಾರ್ಯ ಮಾಡುತ್ತಿದೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್‌ ಅವರಿಗೆ ಸಚಿವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಸಾರ ನಿರ್ವಾಹಕರಾದ ಸಂಗಮೇಶ ಧನ್ಯವಾದ ಸಲ್ಲಿಸಿದರು. ಹಿರಿಯ ಉದ್ಘೋಷಕಿ ಶಾರದಾ ಜಂಬಲದಿನ್ನಿ ನಿರೂಪಿಸಿದರು. ನಿಲಯದ ಡಾ| ಸದಾನಂದ ಪೆರ್ಲ, ಉಪನ್ಯಾಸಕರಾದ ಡಾ| ನಾಮದೇವ ಎಸ್‌. ಜಾಧವ, ಗಿರೀಶಗೌಡ ಇನಾಂದಾರ, ವಿಜಯಲಕ್ಷ್ಮೀ ಖೇಣಿ, ಸಿದ್ಧಾಜಿ ಪಾಟೀಲ ಇದ್ದರು. ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು ಸರಣಿಯಲ್ಲಿ ಪ್ರತಿ ತಿಂಗಳು 2 ಕಾರ್ಯಕ್ರಮಗಳು ನೇರಪ್ರಸಾರದಲ್ಲಿ ಬಿತ್ತರಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next