ಬೆಂಗಳೂರು: ಸಾಮಾನ್ಯವಾಗಿ ವಾಹನಗಳ ನೋಂದಣಿ ಸಂಖ್ಯೆಯ ಫ್ಯಾನ್ಸಿ ನಂಬರ್‌ಗಳು ಲಕ್ಷಾಂತರ ರೂ.ಗೆ ಬಿಕರಿಯಾಗುವುದು ಸಹಜ. ಅದೇ ಇತ್ತೀಚಿನ ದಿನಗಳಲ್ಲಿ ಸಾರಿಗೆ ಇಲಾಖೆಗೆ ಲಕ್ಷಾಂತರ ರೂ. ಆದಾಯ ತಂದುಕೊಡುತ್ತಿದೆ. ಈಗ ಇದರ ಮುಂದುವರಿದ ಭಾಗವಾಗಿ ಬಿಡಿಎನಲ್ಲಿಯ ನಿವೇಶನಗಳ ಫ್ಯಾನ್ಸಿ ಸಂಖ್ಯೆಗೂ ಬೇಡಿಕೆ ಬರುತ್ತಿದ್ದು, ಹರಾಜಿನಲ್ಲಿ ಕೋಟಿಗಟ್ಟಲೆ ಸುರಿಯುತ್ತಿರುವುದು ಕಂಡುಬರುತ್ತಿದೆ.
ಹೌದು, ಈಚೆಗೆ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ 6ನೇ ಹಂತದ ಇ-ಹರಾಜಿನಲ್ಲಿ ನಿವೇಶನವೊಂದು ದಾಖಲೆ ಮೊತ್ತ 15,500 ರೂ.ಗೆ ಚದರಡಿ ಮಾರಾಟ ಆಗಿದೆ. ಇಷ್ಟೊಂದು ಗರಿಷ್ಠ ಮೊತ್ತದ ಹರಾಜಿನ ಹಿಂದಿನ ಗುಟ್ಟು ಆ ನಿವೇಶನದ ಫ್ಯಾನ್ಸಿ ನಂಬರ್ “1000′! ಸರ್ ಎಂ.ವಿಶ್ವೇಶ್ವರಯ್ಯಬಡಾವಣೆಯ 3ನೇ ಬ್ಲಾಕ್‌ನಲ್ಲಿ ಬರುವ “1000’ನೇ ನಂಬರ್‌ನ ನಿವೇಶನದ ಒಟ್ಟು ವಿಸ್ತೀರ್ಣ ಸುಮಾರು 78 ಚದರ ಮೀಟರ್ (ಸುಮಾರು 840 ಚದರಡಿ) ಆಗಿದ್ದು, ಪೂರ್ವ-ಉತ್ತರದ ಈ ನಿವೇಶನದ ವಾಸ್ತು ಕೂಡ ಉತ್ತಮವಾಗಿದೆ ಅಂತೆ. ಇದೇ ಕಾರಣಕ್ಕೆ ಖರೀದಿಗಾಗಿ ಗರಿಷ್ಠ ಸಂಖ್ಯೆಯಲ್ಲಿ ಬಿಡ್‌ದಾರರು ಮುಗಿಬಿದ್ದಿದ್ದರು. ಲಕ್ಷದವರೆಗೂ ಅವರೆಲ್ಲಾ ಹರಾಜು ಕೂಗಿದ್ದಾರೆ. ಆದರೆ, ಅಂತಿಮವಾಗಿ ಭೂಪನೊಬ್ಬ ಚದರ ಮೀಟರ್‌ಗೆ 1.67 ಲಕ್ಷ ರೂ. ಸುರಿಯಲು ಮುಂದೆಬಂದಿದ್ದಾರೆ.
ಗರಿಷ್ಠ ಬಿಡ್‌ದಾರರು ಭಾಗಿ; ಗರಿಷ್ಠ ಮೊತ್ತಕ್ಕೆ ಬಿಕರಿ ಬಿಡಿಎ ನಡೆಸುವ ಹರಾಜಿನಲ್ಲಿ ಪ್ರತಿ ನಿವೇಶನಕ್ಕೆ ಅಬ್ಬಬ್ಟಾ ಎಂದರೆ 20ರಿಂದ 30 ಜನ ಭಾಗವಹಿಸುತ್ತಾರೆ. ಆಯಾ ಪ್ರದೇಶಗಳಲ್ಲಿನ ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಹರಾಜು ಕೂಗುತ್ತಾರೆ. ಅವು ಒಂದರಿಂದಒಂದೂವರೆಪಟ್ಟು ಹೆಚ್ಚು ದರಕ್ಕೆ ಬಿಕರಿ ಆಗುತ್ತವೆ. ಆದರೆ, ವಿಶ್ವೇಶ್ವರಯ್ಯ ಬಡಾವಣೆಯ 1000ನೇ ನಿವೇಶನ ಖರೀದಿಗೆ 92 ಜನ ಭಾಗವಹಿಸಿದ್ದರು. ಅದರ ಮೂಲ ಬೆಲೆ ಇದ್ದದ್ದು 30.42 ಲಕ್ಷ ರೂ. ಮಾರಾಟಆಗಿದ್ದು 1.30 ಕೋಟಿ ರೂ.ಗಳಿಗೆ. ಕೆಲವರು ಒಂದು ಕೋಟಿವರೆಗೂ ಕೂಗಿ ಹಿಂದೆಸರಿದರು. ಚೆಲುವರಾಜು ಎಂಬುವರು ಗರಿಷ್ಠ ಬಿಡ್‌ಗೆ ತಮ್ಮದಾಗಿಸಿಕೊಂಡರು.
“ನಿವೇಶನ ಅಥವಾ ಮನೆ ಖರೀದಿ ಮಧ್ಯಮ ವರ್ಗದ ಪ್ರತಿ ವ್ಯಕ್ತಿಯ ಕನಸು. ಅದು ಉಳಿದವರಿಗಿಂತ ಭಿನ್ನ ಮತ್ತು ಯಾವುದೇ ವಾಸ್ತು ದೋಷ ಇರಬಾರದು ಎಂಬ ನಿರೀಕ್ಷೆ ಇದ್ದೇಇರುತ್ತದೆ. ಹಾಗಾಗಿ, ಖರೀದಿಗೂ ಮುನ್ನ ಬಹುತೇಕ ಎಲ್ಲರೂ ವಾಸ್ತು ಕೇಳುವುದು ಸಹಜ. ಅದೇರೀತಿ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 3ನೇಬ್ಲಾಕ್‌ನ ನಿವೇಶನದ ಹರಾಜಿನಲ್ಲಿ ಭಾಗವಹಿಸುವ ಮುನ್ನ ನಾವೂ ಪೂರ್ವಾಪರ ತಿಳಿದುಕೊಂಡುಭಾಗವಹಿಸಿದ್ದೆವು. ನಿವೇಶನದ ಸಂಖ್ಯೆ ಫ್ಯಾನ್ಸಿ ನಂಬರ್‌ಆಗಿತ್ತು. ಜತೆಗೆ ವಾಸ್ತು ಕೂಡ ಹೇಳಿಮಾಡಿಸಿದಂತಿತ್ತು.ಆದರೆ, ಭಾರಿ ಬೇಡಿಕೆ ಬಂದಿದ್ದರಿಂದ ಹಿಂದೆಸರಿಯಬೇಕಾಯಿತು’ ಎಂದು ಚದರ ಮೀಟರ್‌ಗೆ ಲಕ್ಷ ರೂ. ವರೆಗೂ ಹರಾಜು ಕೂಗಿದ ಬಿಡ್‌ದಾರರೊಬ್ಬರು ತಿಳಿಸಿದರು.
“ಯೋಚನೆ ಮಾಡ್ತೀನಿ’: ಚೆಲುವರಾಜು :
ಗರಿಷ್ಠ ಮೊತ್ತ ಕೂಗಿದ ಚೆಲುವರಾಜು, “ನಿವೇಶನ ಇಷ್ಟ ಆಯಿತು. ಹಾಗಾಗಿ, ಪಡೆಯಲೇಬೇಕು ಎಂಬ ಪ್ರತಿಷ್ಠೆಯಿಂದ ಕೂಗಿದೆ. ಆದರೆ, ಈಗ ಆ ಮೊತ್ತ ಭರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಏನು ಮಾಡಬೇಕು ಎನ್ನುವುದೂ ಗೊತ್ತಾಗುತ್ತಿಲ್ಲ. ಈ ಖರೀದಿಯಲ್ಲಿ ಮುಂದುವರಿಯುವ ಬಗ್ಗೆ ಪುನರ್ ಆಲೋಚನೆ ಮಾಡುತ್ತಿದ್ದೇನೆ’ ಎಂದು “ಉದಯವಾಣಿ’ಗೆ ತಿಳಿಸಿದರು. “ಇ-ಹರಾಜು’ ಪ್ರಕ್ರಿಯೆ ಶುರುವಾದ ನಂತರ
ಫ್ಯಾನ್ಸಿ ನಂಬರ್‌ನ ನಿವೇಶನಗಳಿಗೆ ಬೇಡಿಕೆ ಬರುತ್ತಿರುವುದು ನಿಜ. ಕೆಲವೊಮ್ಮೆ ವಾಸ್ತು ಕೂಡ ಜನ ನೋಡುತ್ತಾರೆ. ಇವೆರಡೂ ಹೊಂದುವುದರ ಜತೆಗೆ “ಲೇಕ್ ವೀವ್’, ಸುತ್ತಲಿನ ಅಭಿವೃದ್ಧಿ, ನಗರಕ್ಕೆ ಕನೆಕ್ಟಿವಿಟಿ ಇಂತಹ ಅಂಶಗಳನ್ನೂ ಪರಿಗಣಿಸುತ್ತಾರೆ. ಹಾಗಾಗಿ, ಗರಿಷ್ಠ ಮೊತ್ತದ ಬಿಡ್‌ಗೆ ಈ ರೀತಿಯ ಅಂಶಗಳು ಕೂಡ ಕಾರಣವಾಗಬಹುದು ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.