ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಹೊಸ ಮುಖ್ಯ ಕೋಚ್ ಗಾಗಿ ಹುಡುಕಾಟವನ್ನು ಪ್ರಾರಂಭಿಸಿದೆ.
ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಜೂನ್ ನಲ್ಲಿ ಕೊನೆಗೊಳ್ಳುವುದರ ಕಾರಣದಿಂದ ಹೊಸ ಕೋಚ್ ಗಾಗಿ ಬಿಸಿಸಿಐ ಅನ್ವೇಷಣೆ ಆರಂಭಿಸಿದೆ.
ಈ ಬಗ್ಗೆ ಮಾಹಿತಿಯನ್ನು ನೀಡಿದ ಕಾರ್ಯದರ್ಶಿ ಜಯ್ ಶಾ ಅವರು, ಮತ್ತೆ ಕೋಚ್ ಸ್ಥಾನಕ್ಕಾಗಿ ರಾಹುಲ್ ದ್ರಾವಿಡ್ ಸಹ ಅರ್ಜಿ ಸಲ್ಲಿಸಬಹುದು. ಅಲ್ಲದೆ ವಿದೇಶಿ ಕೋಚ್ ನೇಮಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ ಎಂದು ಹೇಳಿದರು.
ಹೊಸ ಕೋಚ್ ಜತೆಗೆ ಸಮಾಲೋಚನೆಯ ನಂತರ ಕೋಚಿಂಗ್ ಸಿಬ್ಬಂದಿಯ ಇತರ ಸದಸ್ಯರಾದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳನ್ನು ನೇಮಿಸಲಾಗುತ್ತದೆ.
ಕಳೆದ ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿ ಮುಕ್ತಾಯವಾಗಿತ್ತು. ಆದರೆ ದ್ರಾವಿಡ್ ಅವರ ಒಪ್ಪಂದವನ್ನು ಮುಂಬರುವ ಟಿ20 ವಿಶ್ವಕಪ್ ರವರೆಗೆ ವಿಸ್ತರಿಸಲಾಯಿತು.
ವಿಭಿನ್ನ ಸ್ವರೂಪಗಳಿಗೆ ವಿಭಿನ್ನ ತರಬೇತುದಾರರನ್ನು ಹೊಂದುವ ಸಾಧ್ಯತೆಯನ್ನು ಶಾ ತಳ್ಳಿಹಾಕಿದರು.
“ಆ ನಿರ್ಧಾರವನ್ನು ಸಿಎಸಿ ಕೂಡ ತೆಗೆದುಕೊಳ್ಳುತ್ತದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಅವರಂತಹ ಅನೇಕ ಎಲ್ಲಾ ಮಾದರಿ ಆಡುವ ಆಟಗಾರರಿದ್ದಾರೆ. ಇದಲ್ಲದೆ, ಭಾರತದಲ್ಲಿ ಬೇರೆ ಬೇರೆ ಕೋಚ್ ಗಳನ್ನು ನೇಮಿಸಿದ ಯಾವುದೇ ಪೂರ್ವನಿದರ್ಶನವಿಲ್ಲ” ಎಂದು ಶಾ ಹೇಳಿದರು.