ಚಾಮರಾಜನಗರ: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಶುಕ್ರವಾರ ಟ್ರ್ಯಾಕ್ಟರ್ ಖರೀದಿಸಿ ಸುದ್ದಿಯಾಗಿದ್ದಾರೆ. ಬಂಡೀಪುರ ಅರಣ್ಯದಂಚಿನಲ್ಲಿ ಜಮೀನು ಹೊಂದಿರುವ ಬಿನ್ನಿ ಅವರು ನಗರದ ಈಶ್ವರಿ ಟ್ರ್ಯಾಕ್ಟರ್ ಶೋ ರೂಂ ನಲ್ಲಿ ಮಹೀಂದ್ರ ಟ್ರ್ಯಾಕ್ಟರ್ ಖರೀದಿ ಮಾಡಿದರು.
ಈ ವೇಳೆ ಮಾತನಾಡಿದ ಬಿನ್ನಿ, ನಮ್ಮದು ಬಂಡೀಪುರದ ಬಳಿ 36 ಎಕರೆ ಫಾರಂ ಇದೆ. ಜಮೀನಿನ ವ್ಯವಸಾಯಕ್ಕೆ ಟ್ರ್ಯಾಕ್ಟರ್ ಖರೀದಿ ಮಾಡಿದ್ದೇನೆ.ನಮ್ಮ ಪೂರ್ವಿಕರೇನೂ ಕೃಷಿಕರಲ್ಲ, ಆದರೆ ನಾನು ಕಳೆದ 25 ವರ್ಷದಿಂದ ಕೃಷಿ ಮಾಡ್ತಿದ್ದೇನೆ. ನನಗೆ ಕೃಷಿ ಮಾಡೋ ಅಭಿರುಚಿ ಇದೆ ಎಂದರು.
ಐಪಿಎಲ್ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ತೊಂದರೆ ಆಗಲ್ಲ.ಟಿ 20 ಗೂ,ಏಕದಿನ ಹಾಗು ಟೆಸ್ಟ್ ಪಂದ್ಯಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ನಾವು ಟೆಸ್ಟ್ ಕ್ರಿಕೆಟನ್ನೂ ಯಾವುದೇ ಕಾರಣಕ್ಕೂ ಮರೆಯಬಾರದು.ಟೆಸ್ಟ್ ನಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೆಯುತ್ತಿದೆ ಎಂದರು.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತಕ್ಕೆ ಸೋತಿರುವ ಕುರಿತು ಪ್ರತಿಕ್ರಿಯಿಸಿ, ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತದೆ,ಆಸೀಸ್ ವಿರುದ್ಧದ ಟೆಸ್ಟ್ ಪೈನಲ್ ವೇಳೆ ಮೊದಲ ದಿನ ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಟೀಮ್ ಆಯ್ಕೆಯ ವೇಳೆ ಒಂದು ಸಣ್ಣ ತಪ್ಪು ಸಹ ಆಗಿದೆ.ಇಲ್ಲದಿದ್ದರೆ ಆ ಪಂದ್ಯ ಗೆಲ್ಲುತ್ತಿದ್ದೆವು ಎಂದರು.
ಇಡೀ ವರ್ಷ ಕ್ರಿಕೆಟ್ ಆಡುವುದರಿಂದ ಅಭ್ಯಾಸ ಅಗತ್ಯವಿಲ್ಲ. ಟಿ ಟ್ವೆಂಟಿ ಇರಲಿ, ಏಕದಿನವಾಗಲಿ,ಟೆಸ್ಟ್ ಇರಲಿ ಎಲ್ಲದಕ್ಕೂ ಆಟಗಾರರು ಹೊಂದಾಣಿಕೆ ಆಗಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆ ಎಂದರು.