ಬೆಂಗಳೂರು: ಕಳೆದ ವರ್ಷ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಆರಂಭಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೀಗ ಎರಡನೇ ಆವೃತ್ತಿಗೆ ಸಿದ್ದತೆ ನಡೆಸುತ್ತಿದೆ. ಕಳೆದ ಬಾರಿ ಕೇವಲ ಮುಂಬೈನಲ್ಲಿ ಕೂಟದ ನಡೆಸಿದ್ದ ಬಿಸಿಸಿಐ, ಈ ಬಾರಿ ಕಾರವಾನ್ ಮಾದರಿಯಲ್ಲಿ ಡಬ್ಲ್ಯೂಪಿಎಲ್ ನಡೆಸಲು ಯೋಜಿಸುತ್ತಿದೆ. ಬೆಂಗಳೂರು ಮತ್ತು ದೆಹಲಿಯನ್ನು ಸಂಭಾವ್ಯ ಸ್ಥಳಗಳಾಗಿ ಗುರುತಿಸಲಾಗಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಪ್ರಸ್ತಾವಿತ ಆಲೋಚನೆಗೆ ಅನುಮೋದನೆ ದೊರೆತರೆ, ಪಂದ್ಯಗಳ ಮೊದಲ ಸೆಟ್ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯದೊಂದಿಗೆ ನಡೆಯಲಿದೆ. ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಪ್ಲೇ-ಆಫ್ ಮತ್ತು ಫೈನಲ್ ಗೆ ಆತಿಥ್ಯ ವಹಿಸಲಿದೆ.
ವನಿತಾ ಟಿ20 ಕೂಟವು ಫೆಬ್ರವರಿ 22ರಿಂದ ಮಾರ್ಚ್ 17ರವರೆಗೆ ನಡೆಯಬಹುದು ಎಂದು ವರದಿ ತಿಳಿಸಿದೆ. ಇದುವರೆಗೆ ದಿನಾಂಕ ಅಂತಿಮಗೊಳಿಸಿಲ್ಲ.
ಬಿಸಿಸಿಐ ಆರಂಭದಲ್ಲಿ ಎರಡನೇ ಋತುವಿಗಾಗಿ ಅನೇಕ ಸ್ಥಳಗಳನ್ನು ಯೋಜಿಸಿತ್ತು, ಅದರಲ್ಲಿ ಮೊದಲನೆಯದು ಕಳೆದ ವರ್ಷದಂತೆ ಸಂಪೂರ್ಣವಾಗಿ ಮುಂಬೈನಲ್ಲಿ ಆಯೋಜಿಸುವುದು. ಎರಡು ಕೇಂದ್ರಗಳಲ್ಲಿ ಲೀಗ್ ಅನ್ನು ಆಯೋಜಿಸುವ ರಾಜ್ಯಕ್ಕಾಗಿ ಹುಡುಕಾಟ ನಡೆಸಿತು. ಮುಂಬೈ ನಲ್ಲಿ ಮಾತ್ರ ಈ ಎರಡು ಸ್ಟೇಡಿಯಂ ಇರುವ ಕಾರಣ ಅಲ್ಲೇ ನಡೆಸುವ ಪ್ರಯತ್ನ ನಡೆಯಿತು ಆದರೆ ಇದು ಬಿಸಿಸಿಐಗೆ ಇಷ್ಟವಿರಲಿಲ್ಲ. ಗುಜರಾತ್ ಮತ್ತೊಂದು ಆಯ್ಕೆಯಾಗಿದೆ ಆದರೆ ಅಹಮದಾಬಾದ್‌ನ ಬೃಹತ್ ನರೇಂದ್ರ ಮೋದಿ ಕ್ರೀಡಾಂಗಣವು ಪಂದ್ಯಗಳಿಗೆ ತುಂಬಾ ದೊಡ್ಡದಾಗಿದೆ ಎಂದು ಭಾವಿಸಲಾಗಿದೆ. ಹೀಗಾಗಿ ಕೊನೆಯಲ್ಲಿ ದೆಹಲಿ ಮತ್ತು ಬೆಂಗಳೂರನ್ನು ಅಂತಿಮಗೊಳಿಸಲಾಯಿತು.
ಐದು ತಂಡಗಳ ಕೂಟದಲ್ಲಿ 20 ಲೀಗ್ ಪಂದ್ಯಗಳು ಮತ್ತು ಎರಡು ಪ್ಲೇ ಆಫ್ ಸೇರಿ 22 ಪಂದ್ಯಗಳು ನಡೆಯುತ್ತದೆ. ಬೆಂಗಳೂರು ಮತ್ತು ದಿಲ್ಲಿಗೆ ಎಷ್ಟು ಪಂದ್ಯಗಳು ಹಂಚಿಕೆಯಾಗಲಿದೆ ಎಂದು ಇನ್ನೂ ಅಂತಿಮವಾಗಿಲ್ಲ.