ಹೊಸದಿಲ್ಲಿ: ಬಹು ನಿರೀಕ್ಷೆಯ ವನಿತಾ ಐಪಿಎಲ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ. ಮುಂದಿನ ವರ್ಷದ ಮಾರ್ಚ್‌ನಲ್ಲಿ, ಪುರುಷರ ಕೂಟಕ್ಕೂ ಮೊದಲು ಇದು ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.
ಈ ಪಂದ್ಯಾವಳಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿವೆ. ಲೀಗ್ ಹಂತದಲ್ಲಿ ಒಟ್ಟು 20 ಪಂದ್ಯಗಳನ್ನು ಆಡಲಾಗುವುದು. ಅಂದರೆ, ಒಂದು ತಂಡ ಪ್ರತಿಯೊಂದು ಎದುರಾಳಿ ವಿರುದ್ಧ 2 ಪಂದ್ಯಗಳನ್ನು ಆಡಲಿದೆ. ಲೀಗ್ ಹಂತದ ಅಂಕಪಟ್ಟಿ ಯಲ್ಲಿ ಮೊದಲೆರಡು ಸ್ಥಾನ ಅಲಂಕರಿಸಿದ ತಂಡಗಳು ಫೈನಲ್ ಪ್ರವೇಶಿಸಲಿವೆ.
ದೇಶಿ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಪರಿಗಣಿಸಿ 5 ತಂಡಗಳ ನಡುವಿನ ವನಿತಾ ಐಪಿಎಲ್ ಪಂದ್ಯಾವಳಿಯನ್ನು ನಡೆಸಲಾಗುವುದು. ಪ್ರತಿಯೊಂದು ತಂಡದ ಗರಿಷ್ಠ ಆಟಗಾರ್ತಿಯರ ಸಂಖ್ಯೆ 18. ಆಡುವ ಬಳಗದಲ್ಲಿ ಗರಿಷ್ಠ ಐದಕ್ಕಿಂತ ಹೆಚ್ಚು ವಿದೇಶಿ ಆಟಗಾರ್ತಿಯರು ಇರುವಂತಿಲ್ಲ. ಇವರಲ್ಲಿ ನಾಲ್ವರು ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ದೇಶಗಳದ್ದಾಗಿರಬೇಕು. ಓರ್ವ ಆಟಗಾರ್ತಿ ಅಸೋಸಿಯೇಟ್ ಸದಸ್ಯ ರಾಷ್ಟ್ರದ ಆಟಗಾರ್ತಿ ಆಗಿರಬೇಕು ಎಂದು ಬಿಸಿಸಿಐ ಪ್ರಕಟಿಸಿದೆ.
ಲೀಗ್ ಪಂದ್ಯಗಳನ್ನು ತಲಾ ಹತ್ತರಂತೆ ಎರಡು ತಾಣಗಳಲ್ಲಿ ನಡೆಸುವ ಯೋಜನೆ ಇದೆ. ವಲಯವಾರು ಮಾದರಿಯಲ್ಲಿ ತಂಡಗಳ ಖರೀದಿ ಪ್ರಕ್ರಿಯೆ ನಡೆಯಲಿದೆ.
ವಿದೇಶಿಗರಿಗೆ ಹೆಚ್ಚು ಅವಕಾಶ:
ಆಸ್ಟ್ರೇಲಿಯದ ವನಿತಾ ಬಿಗ್ ಬಾಶ್ ಲೀಗ್ ಮತ್ತು ಇಂಗ್ಲೆಂಡ್‌ನ ದಿ ಹಂಡ್ರೆಡ್ ಕ್ರಿಕೆಟ್ ಲೀಗ್‌ಗಳಿಗೆ ಹೋಲಿಸಿದರೆ ವನಿತಾ ಐಪಿಎಲ್‌ನಲ್ಲಿ ವಿದೇಶಿ ಆಟಗಾರ್ತಿಯರಿಗೆ ಅವಕಾಶ ಹೆಚ್ಚು. ಅಲ್ಲಿ ಮೂರಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಪಂದ್ಯವೊಂದರಲ್ಲಿ ಆಡುವಂತಿಲ್ಲ. ಹಾಗೆಯೇ ತಂಡದ ಗರಿಷ್ಠ ಸದಸ್ಯರ ಸಂಖ್ಯೆ 15ಕ್ಕೆ ಸೀಮಿತವಾಗಿರುತ್ತದೆ.