Advertisement

ಬಿ.ಸಿ.ರೋಡ್‌-ಪುಂಜಾಲಕಟ್ಟೆ ಹೆದ್ದಾರಿ :ಭೂಸ್ವಾಧೀನ ಪೂರ್ಣಗೊಳ್ಳದೆ ಕಾಮಗಾರಿ ವೇಗಕ್ಕೆ ಅಡ್ಡಿ

02:53 AM Apr 16, 2021 | Team Udayavani |

ಬಂಟ್ವಾಳ: ದ.ಕ.ಜಿಲ್ಲಾ ಕೇಂದ್ರ ಮಂಗಳೂರಿನಿಂದ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಯನ್ನು ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗೆ ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದೀಗ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದು ಕಾಮಗಾರಿ ವೇಗಕ್ಕೆ ಅಡ್ಡಿಯಾಗಿದೆ.

Advertisement

ಕಳೆದ 2 ವರ್ಷಗಳ ಹಿಂದೆ ಸುಮಾರು 19.85 ಕಿ.ಮೀ. ಉದ್ದದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯ ವೇಗವನ್ನು ಗಮನಿಸಿದರೆ ಈಗಾಗಲೇ ಕಾಮಗಾರಿ ಮುಗಿಯಬೇಕಿತ್ತು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವ ಭಾಗಗಳಲ್ಲಿ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವ ಪ್ರದೇಶದಲ್ಲಿ ಇನ್ನೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ.

ವಿಶೇಷಾಧಿಕಾರಿಯ ಭೇಟಿ
ಮುಖ್ಯವಾಗಿ ಬಂಟ್ವಾಳ ಬೈಪಾಸ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯದೇ ಇರುವು ದರಿಂದ ಆ ಭಾಗದಲ್ಲಿ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನ ಪ್ರಕ್ರಿಯೆಗಳು ಬೆಂಗಳೂರಿನಲ್ಲೇ ನಡೆಯುವುದರಿಂದ ಬೈಪಾಸ್‌ ಭಾಗಕ್ಕೆ ವಿಶೇಷ ಭೂಸ್ವಾಧೀನಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಒಂದು ಬದಿಯ ಭೂಸ್ವಾಧೀನದ ಗೊಂದಲಗಳು ಪೂರ್ಣಗೊಂಡಿದ್ದು, ಕಾಮಗಾರಿ ಮುಂದುವರಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

17 ಕಿ.ಮೀ. ಹೆದ್ದಾರಿ ಪೂರ್ಣ
ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗಿನ 19.85 ಕಿ.ಮೀ. ಹೆದ್ದಾರಿಯಲ್ಲಿ ಜಕ್ರಿಬೆಟ್ಟಿನಿಂದ ಪುಂಜಾಲಕಟ್ಟೆವರೆಗೆ 16 ಕಿ.ಮೀ. ಡಾಮರು ರಸ್ತೆ ನಿರ್ಮಾಣವಾಗಲಿದ್ದು, ಜಕ್ರಿಬೆಟ್ಟುವರೆಗೆ 3.85 ಕಿ.ಮೀ. ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಒಟ್ಟು ಕಾಮಗಾರಿಯಲ್ಲಿ 17 ಕಿ.ಮೀ. ಹೆದ್ದಾರಿ ಬಹುತೇಕ ಪೂರ್ಣಗೊಂಡಿದ್ದು, ಸುಮಾರು 2.50 ಕಿ.ಮೀ.ನಷ್ಟು ಕಾಮಗಾರಿ ವಿಳಂಬವಾಗಿದೆ.

ಅಧಿಕಾರಿಗಳು ಹೇಳುವ ಪ್ರಕಾರ ಮೇ ತಿಂಗಳ ಅಂತ್ಯಕ್ಕೆ ಬಹುತೇಕ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡುತ್ತಿದ್ದಾರೆ. ಕಾಮಗಾರಿ ಗುತ್ತಿಗೆವಹಿಸಿಕೊಂಡಿರುವ ಸಂಸ್ಥೆಯ ಕುರಿತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಭೂಸ್ವಾಧೀನಕ್ಕೆ ಪರಿಹಾರ ಮೊತ್ತ ಪಾವತಿಯಾಗದೆ ಇದ್ದರೂ, ಜನರ ಮನವೊಲಿಸಿ ಕಾಮಗಾರಿ ನಿರ್ವಹಿಸಿದ್ದಾರೆ ಎಂದು ಹೇಳುತ್ತಾರೆ.

Advertisement

ಎಂಆರ್‌ಪಿಎಲ್‌ ಪೈಪ್‌ಲೈನ್‌ ಶಿಫ್ಟಿಂಗ್‌
ಹೆದ್ದಾರಿ ಕಾಮಗಾರಿಯ ಜತೆಗೆ ಹೆದ್ದಾರಿ ವಿಸ್ತಾರಗೊಳ್ಳುವ ಪ್ರದೇಶದಲ್ಲಿ ಎಂಆರ್‌ಪಿಎಲ್‌ ಪೈಪುಲೈನ್‌ ಸ್ಥಳಾಂತರ (ಶಿಫ್ಟಿಂಗ್‌) ಕಾಮಗಾರಿಯೂ ನಡೆಯುತ್ತಿದೆ. ಆದರೆ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳದೆ ಹಿಂದಿನ ಪೈಪುಲೈನ್‌ ತೆರವು ಮಾಡುವಂತಿಲ್ಲ. ಹೀಗಾಗಿ 2-3 ಕಡೆಗಳಲ್ಲಿ ಕಾಮಗಾರಿ ಮುಂದುವರಿಸುವುದು ಸಾಧ್ಯವಾಗಿಲ್ಲ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.

ಸ್ಥಳಾಂತರಕ್ಕೆ ಉದ್ದೇಶಿತ ಪ್ರದೇಶ
ಗಳಲ್ಲಿ ಬೃಹತ್‌ ಬಂಡೆ ಕಲ್ಲುಗಳಿದ್ದು, ಪಕ್ಕದಲ್ಲೇ ಮನೆಗಳಿರುವುದರಿಂದ ಸ್ಟೋಟಕಗಳನ್ನಿಟ್ಟು ಏಕಾಏಕಿ ಅದನ್ನು ಹುಡಿ ಮಾಡುವಂತಿಲ್ಲ. ಬಹಳ ಎಚ್ಚರಿಕೆಯಿಂದ ನಿಧಾನಗತಿಯಲ್ಲಿ ತೆರವಿನ ಕಾರ್ಯ ಮಾಡಬೇಕಿದೆ.
ಹೀಗಾಗಿ ಒಂದಷ್ಟು ಕಡೆಗಳಲ್ಲಿ ಈ ರೀತಿಯಲ್ಲಿ ಕಾಮಗಾರಿ ವಿಳಂಬವಾಗಿದೆ ಎನ್ನಲಾಗಿದೆ.

ಒಂದು ಬದಿ ಸಮಸ್ಯೆ ಪರಿಹಾರ
ಮೂಡುಬಿದಿರೆ ಕ್ರಾಸ್‌ ಬಂಟ್ವಾಳ ಬೈಪಾಸ್‌ ಭಾಗಕ್ಕೆ ಈಗಾಗಲೇ ವಿಶೇಷ ಭೂಸ್ವಾಧೀನಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಂದು ಬದಿಯಲ್ಲಿ ಸಮಸ್ಯೆ ಪರಿಹಾರ ಆಗಿದೆ. ಆದರೆ ಇನ್ನೊಂದು ಬದಿಯಲ್ಲಿ ಯಾವುದೋ ಕಾರಣಕ್ಕೆ ವಿಷಯ ಕ್ಲಿಯರ್‌ ಆಗಿಲ್ಲ. ಪ್ರಸ್ತುತ ಅದರ ಹಿಂದೆಯೇ ಇದ್ದು, ಕೆಲಸ ಮಾಡುತ್ತಿದ್ದೇವೆ. ಎಂಆರ್‌ಪಿಎಲ್‌ ಪೈಪ್‌ಲೈನ್‌ ಶಿಫ್ಟ್‌ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
-ಕೃಷ್ಣಕುಮಾರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ , ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next